ಜಾತಿ ಮತಗಳ ಸಂಘರ್ಷ ಕಾಲಕ್ಕೆ ವಿಶ್ವಮಾನವ ಸಂದೇಶ ಪ್ರಸ್ತುತ

KannadaprabhaNewsNetwork |  
Published : Dec 31, 2025, 01:45 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಯರಬಳ್ಳಿ ಸರ್ಕಾರಿ ಪಿಎಂಶ್ರೀ ಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪುರವರ 121ನೇ ಜನ್ಮದಿನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ರಾಷ್ಟ್ರಕವಿ ಕುವೆಂಪು ಅವರು ಕೇವಲ ಒಬ್ಬ ಸಾಹಿತಿಯಾಗಿ ಉಳಿಯದೆ ತಮ್ಮ ವೈಚಾರಿಕತೆ ಮತ್ತು ದಾರ್ಶನಿಕತೆಯ ಮೂಲಕ ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ನೀಡಿದರು ಎಂದು ಹಿರಿಯ ಶಿಕ್ಷಕ ನೀಲಕಂಠಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಯರಬಳ್ಳಿ ಸರ್ಕಾರಿ ಪಿಎಂಶ್ರೀ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಕವಿ ಕುವೆಂಪುರವರ 121ನೇ ಜನ್ಮದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ಜಗತ್ತು ಜಾತಿ, ಮತ, ಧರ್ಮಗಳ ಗೊಂದಲದಲ್ಲಿ ಸಿಲುಕಿರುವಾಗ ಕುವೆಂಪುರವರ ವಿಶ್ವಮಾನವ ಸಂದೇಶ ಅತ್ಯಂತ ಪ್ರಸ್ತುತವಾಗಿದೆ. ಈ ಸಂದೇಶವು ಜಾತಿ, ಮತ, ಪಂಥ ಮತ್ತು ದೇಶಗಳ ಗಡಿಗಳನ್ನು ಮೀರಿ ಮನುಷ್ಯತ್ವವನ್ನು ಎತ್ತಿ ಹಿಡಿಯುವ ಉದಾತ್ತ ಚಿಂತನೆಯಾಗಿದೆ ಎಂದರು.

ಇಂಗ್ಲಿಷ್ ಭಾಷಾ ಶಿಕ್ಷಕ ಮಂಜುನಾಥ್ ಮಾತನಾಡಿ, ಕುವೆಂಪು ಅವರ ಜನ್ಮದಿನವು ಕೇವಲ ಒಬ್ಬ ವ್ಯಕ್ತಿಯ ಆಚರಣೆಯಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗಿನ ಸಂಕುಚಿತ ಭಾವನೆಯನ್ನು ಬಿಟ್ಟು ವಿಶಾಲ ಮನೋಭಾವದ ವಿಶ್ವಮಾನವನಾಗಲು ಪ್ರೇರೇಪಿಸುವ ದಿನವಾಗಿದೆ. ಕುವೆಂಪು ಅವರ ದೃಷ್ಟಿಯಲ್ಲಿ ಮನುಷ್ಯ ಹುಟ್ಟುವಾಗ ವಿಶ್ವಮಾನವ. ಆದರೆ ಬೆಳೆಯುತ್ತಾ ಹೋದಂತೆ ಜಾತಿ ಧರ್ಮ ಭಾಷೆ ಮತ್ತು ದೇಶಗಳೆಂಬ ಸಂಕೋಲೆಗಳಲ್ಲಿ ಸಿಲುಕಿ ಅಲ್ಪಮಾನವನಾಗುತ್ತಾನೆ. ಈ ಸಂಕೋಲೆಗಳನ್ನು ಕಳಚಿ ಮತ್ತೆ ಮನುಷ್ಯ ಮೊದಲಿನಂತೆ ವಿಶ್ವಮಾನವನಾಗಬೇಕು ಎಂಬುದು ಅವರ ಆಶಯವಾಗಿತ್ತು. ಇದನ್ನು ಅವರು ಮನುಜಮತ ವಿಶ್ವಪಥ ಸರ್ವೋದಯ ಸಮನ್ವಯ ಪೂರ್ಣದೃಷ್ಟಿ ಎಂಬ ಪಂಚಮಂತ್ರಗಳ ಮೂಲಕ ಸಾರಿದ್ದಾರೆ ಎಂದರು.

ಮುಖ್ಯ ಶಿಕ್ಷಕಿ ಸವಿತಾ ಮಾತನಾಡಿ, ಕುವೆಂಪುರವರು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು. ಅವರ ಸಾಹಿತ್ಯಿಕ ಸಾಧನೆಯನ್ನು ಸ್ಮರಿಸುವುದು ಮತ್ತು ಮುಂದಿನ ಪೀಳಿಗೆಗೆ ಅವರ ಮಹೋನ್ನತ ಕೃತಿಗಳಾದ ರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು ಮುಂತಾದವುಗಳ ಪರಿಚಯ ನಮ್ಮ ಇಂದಿನ ಮಕ್ಕಳಿಗೆ ಮಾಡಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರಕೃತಿಯನ್ನು ಆರಾಧಿಸುತ್ತಿದ್ದ ಕುವೆಂಪು ಅವರ ಸಾಹಿತ್ಯವು ಮಕ್ಕಳಲ್ಲಿ ಗಿಡ-ಮರ, ಪ್ರಾಣಿ-ಪಕ್ಷಿಗಳ ಬಗ್ಗೆ ಕಾಳಜಿ ಮೂಡಿಸುತ್ತದೆ. ಅವರ ಮಲೆನಾಡಿನ ಚಿತ್ರಣಗಳು ಮಕ್ಕಳನ್ನು ಪ್ರಕೃತಿಯ ಹತ್ತಿರಕ್ಕೆ ಕೊಂಡೊಯ್ಯುತ್ತವೆ.ಕುವೆಂಪು ಅವರ ಕವಿತೆಗಳು, ಕಥೆಗಳು ಮತ್ತು ಕಾದಂಬರಿಗಳು ಮಕ್ಕಳಿಗೆ ಕನ್ನಡ ಭಾಷೆಯ ಸೊಗಡನ್ನು ಪರಿಚಯಿಸುತ್ತವೆ. ಇದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಮತ್ತು ಭಾಷಾ ಕೌಶಲ ವೃದ್ಧಿಯಾಗುತ್ತದೆ. ಇಂತಹ ಕಾರ್ಯಕ್ರಮಗಳು ಶಾಲಾ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಉತ್ತೇ ತ್ತವೆ ಎಂದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಶಬಾನ, ವಿಜಯಮ್ಮ, ಅನ್ನಪೂರ್ಣ, ಭುವನಕುಮಾರ್ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ವಜನಿಕರು ಆಯೋಗಕ್ಕೆ ನೇರವಾಗಿ ದೂರು ಸಲ್ಲಿಸಿ
ಹಿರಿಯೂರಿನಲ್ಲಿ ತೋಟಕ್ಕೆ ನುಗ್ಗಿ ನಾಯಿಯನ್ನು ಕೊಂದ ಚಿರತೆ