ಹಾನಗಲ್ಲ: ನಿತ್ಯ ಜೀವನದಲ್ಲಿ ನಮ್ಮ ಸಂವಿಧಾನ ಪಾಲನೆಗೆ ಮುಂದಾದರೆ ಮೌಲ್ಯಯುತ ಭಾರತದ ನಿರ್ಮಾಣಕ್ಕೆ ಶಕ್ತಿ ತುಂಬಲು ಸಾಧ್ಯ ಎಂದು ತಹಸೀಲ್ದಾರ್ ಎಸ್. ರೇಣುಕಾ ಹೇಳಿದರು.
ಬುಧವಾರ ಇಲ್ಲಿನ ಬಾಬು ಜಗಜೀವನರಾಮ್ ಭವನದಲ್ಲಿ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ ಸಂವಿಧಾನ ದಿನಾಚರಣೆ -2025 ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನ ಬಲವಂತವಾಗಿ ಹೇರಿದ್ದಲ್ಲ. ನಾವೇ ವಿಧಿಸಿಕೊಂಡಿರುವುದು. ಈ ಮೂಲಕ ನಾವೆಲ್ಲ ಒಂದು, ನಾವೆಲ್ಲ ಸಮಾನವರು ಎಂಬ ಚಿಂತನೆಯನ್ನು ಪುಷ್ಟೀಕರಿಸಿದೆ. ನಮ್ಮ ದೇಶದ ಧ್ಯೇಯವೇ ಸಮಾನತೆ. ವಿವಿಧತೆಯಲ್ಲಿ ಏಕತೆಯಿಂದ ಇದ್ದೇವೆ. ಡಾ. ಬಿ.ಅರ್. ಅಂಬೇಡ್ಕರ ಅವರ ಶ್ರಮ ಸಾರ್ಥಕವಾಗಿದೆ. ಪರಸ್ಪರ ಗೌರವದಿಂದ ಇರೋಣ. ದೇಶದ ಹಿತಕ್ಕಾಗಿ ಸಾಧಕರಾಗೋಣ. ಭಾರತದ ಘನತೆ, ಗೌರವ ಹೆಚ್ಚಿಸೋಣ ಎಂದರು.ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಮನುಷ್ಯ ಪರ ಚಿಂತನೆ ಈಗಿನ ಅಗತ್ಯವಾಗಿದೆ. ಮೌಲಿಕ ಜೀವನ ವಿಧಾನಕ್ಕಾಗಿ ನಾವು ಒಟ್ಟಾಗಿ ಶ್ರಮಿಸಬೇಕಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಕಹಿ, ಸಿಹಿ ನೆನಪುಗಳನ್ನು ಸಿಂಹಾವಲೋಕನ ಮಾಡಬೇಕಾಗಿದೆ. ನಮ್ಮವರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಬ್ರಿಟಿಷ್ ಕ್ರೌರ್ಯದ ದುರಾಡಳಿತದಿಂದ ನಾವು ಹೊರ ಬಂದಿದ್ದೇವೆ. ಇಂತಹ ಎಚ್ಚರಿಕೆಯನ್ನೂ ಹೊಂದಿ ಈಗ ಸಂವಿಧಾನ ಪಾಲನೆ ಮೂಲಕ ನಾವು ಒಟ್ಟಾಗಿ ಬದುಕುವ ಕಡೆಗೆ ನಡೆಯಬೇಕಾಗಿದೆ ಎಂದರು.
ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಮಾತನಾಡಿ, ಮತಪೆಟ್ಟಿಗೆ ಮೂಲಕ ನಮ್ಮ ನಾಯಕನನ್ನು ಆಯ್ಕೆ ಮಾಡಿಕೊಂಡು ನಮ್ಮ ದೇಶದ ಹಿತಕ್ಕೆ ಆಡಳಿತ ನಡೆಸುತ್ತಿದ್ದೇವೆ. ಮತದಾನದ ಮಹತ್ವದ ಅರಿವು ಮೂಡಬೇಕು. ಮತ ಮಾರುವ ಸ್ಥಿತಿ ಬಂದಿರುವುದು ದುರದೃಷ್ಟಕರ ಸಂಗತಿ. ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯ ಈಡೇರಲು ಪ್ರತಿಯೊಬ್ಬ ಪ್ರಜೆ ದೇಶದ ಹಿತವನ್ನು ಮುಂದಿಟ್ಟುಕೊಂಡು ನಡೆ, ನುಡಿಯಲ್ಲಿ ಮೌಲ್ಯಯುತವಾಗಿರಬೇಕಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ, ರಾಮಚಂದ್ರ ಕಲ್ಲೇರ, ಗುರುನಾಥ ಗವಾಣಿಕರ, ಎನ್.ಎಂ. ಪೂಜಾರ, ಮಹಮ್ಮದ್ ಹನೀಫ್ ಬಂಕಾಪುರ, ಜೇಸಸ್ ಪಾಯ್ಸ, ಫೈರೋಜ ಶಿರಬಡಗಿ, ಉಮೇಶ ಮಾಳಗಿ, ರಾಜು ಶಿರಪಂಥಿ, ಕೊಟ್ರಪ್ಪ ಕುದರಿಸಿದ್ದನವರ, ಶಿವು ಭದ್ರಾವತಿ, ಸುರೇಶ ನಾಗಣ್ಣನವರ, ಜಯರಾಮ ಮಾಳಾಪುರ ಪಾಲ್ಗೊಂಡಿದ್ದರು. ಉಪನ್ಯಾಸಕಿ ಯಮುನಾ ಕೋನೇಸರ್ ಉಪನ್ಯಾಸ ನೀಡಿದರು.
ಬಾಲಚಂದ್ರ ಅಂಬಿಗೇರ ಹಾಗೂ ನಾಗರಾಜ ಎಚ್. ನಾಡಗೀತೆ ಹಾಡಿದರು. ಗಂಗಾ ಹಿರೇಮಠ ಸ್ವಾಗತಿಸಿದರು. ಶ್ರೀನಿವಾಸ ದೀಕ್ಷಿತ ಕಾರ್ಯಕ್ರಮ ನಿರೂಪಿಸಿದರು.