ಗದುಗಿನಲ್ಲಿ ಚಿರತೆ ಪ್ರತ್ಯಕ್ಷ, ಜನತೆಯಲ್ಲಿ ಆತಂಕ!

KannadaprabhaNewsNetwork |  
Published : Nov 27, 2025, 02:15 AM IST
ಗದುಗಿನಲ್ಲಿ ಓಡಾಡುತ್ತಿರುವ ಚಿರತೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು. | Kannada Prabha

ಸಾರಾಂಶ

​ಪಂಚಾಕ್ಷರಿ ನಗರದ ಉದ್ಯಾನವನದ ಸಮೀಪದ ರಸ್ತೆಯಲ್ಲಿ ಚಿರತೆ ಓಡಾಡುತ್ತಿರುವುದು ಮೊದಲು ಗೋಚರಿಸಿದೆ. ನಾಯಿಗಳ ಸತತ ಬೊಗಳುವಿಕೆ ಕೇಳಿ ಸ್ಥಳೀಯರು ಮನೆಯಿಂದ ಹೊರಬಂದಾಗ ರಸ್ತೆಯಲ್ಲಿ ಚಿರತೆ ಓಡಾಟ ಕಂಡುಬಂದಿದೆ.

ಗದಗ: ನಗರದ ಹೃದಯ ಭಾಗದಲ್ಲಿ ಚಿರತೆ ಸಂಚಾರ ಕಂಡುಬಂದಿದ್ದು, ಎಪಿಎಂಸಿ ಯಾರ್ಡ್ ಮತ್ತು ಪಂಚಾಕ್ಷರಿ ಬಡಾವಣೆಯ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಬುಧವಾರ ಬೆಳಗಿನ ಜಾವ 4 ಗಂಟೆಯ ವೇಳೆಗೆ ನಗರದ ಹೃದಯಭಾಗದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಹಲವು ಕಡೆ ಅಳವಡಿಸಲಾದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅವಳಿ ನಗರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

​ಪಂಚಾಕ್ಷರಿ ನಗರದ ಉದ್ಯಾನವನದ ಸಮೀಪದ ರಸ್ತೆಯಲ್ಲಿ ಚಿರತೆ ಓಡಾಡುತ್ತಿರುವುದು ಮೊದಲು ಗೋಚರಿಸಿದೆ. ನಾಯಿಗಳ ಸತತ ಬೊಗಳುವಿಕೆ ಕೇಳಿ ಸ್ಥಳೀಯರು ಮನೆಯಿಂದ ಹೊರಬಂದಾಗ ರಸ್ತೆಯಲ್ಲಿ ಚಿರತೆ ಓಡಾಟ ಕಂಡುಬಂದಿದೆ. ಇದರ ಮಧ್ಯೆ ಚಿರತೆ ಓಡಿಹೋಗುತ್ತಿರುವ ದೃಶ್ಯಗಳು ಸಮೀಪದ ಗೋದಾಮಿನ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ​ಪಂಚಾಕ್ಷರಿ ಬಡಾವಣೆಯಿಂದ ಹೊರಟ ಚಿರತೆ ನಂತರ ಎಪಿಎಂಸಿ ಯಾರ್ಡ್ ಕಡೆಗೆ ನುಗ್ಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಯಾರ್ಡ್ ಸುತ್ತಮುತ್ತಲಿನ ರಸ್ತೆಗಳಲ್ಲಿ ನಿರಾತಂಕವಾಗಿ ಸಂಚರಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

​ಕಪ್ಪತಗುಡ್ಡದಿಂದ ಬಂದಿರಬಹುದೇ?: ​ನಗರದ ಹೃದಯಭಾಗದಲ್ಲೇ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ತೀವ್ರ ಭಯದ ವಾತಾವರಣ ಸೃಷ್ಟಿಸಿದೆ. ಈ ಕಾರಣದಿಂದಾಗಿ ಸಾರ್ವಜನಿಕರು ತಮ್ಮ ಮಕ್ಕಳನ್ನು ಹೊರಗೆ ಬಿಡಲು ಹೆದರುತ್ತಿದ್ದಾರೆ. ಚಿರತೆಯು ಸಮೀಪದ ಕಪ್ಪತಗುಡ್ಡದ ಅರಣ್ಯದ ಸೆರಗಿನಿಂದ ನಗರಕ್ಕೆ ಬಂದಿರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

ತುರ್ತು ಕ್ರಮಕ್ಕೆ ಆಗ್ರಹ: ​ನಗರದಲ್ಲಿ ಹೆಚ್ಚಿರುವ ಈ ಆತಂಕದ ಹಿನ್ನೆಲೆ, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ತುರ್ತು ಕ್ರಮಗಳನ್ನು ಕೈಗೊಂಡು ಚಿರತೆಯನ್ನು ಪತ್ತೆಹಚ್ಚಿ ಸೆರೆಹಿಡಿಯಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಎಚ್ಚರ ವಹಿಸಿ: ಚಿರತೆ ಚಲನವಲನಗಳ ಸಿಸಿ ಕ್ಯಾಮೆರಾಗಳಲ್ಲಿ ಕಂಡುಬಂದಿದೆ. ಅದು ಒಂದೇ ಸ್ಥಳದಲ್ಲಿ ಇರುವುದಿಲ್ಲ. ಈಗಾಗಲೇ ನಮ್ಮ‌ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು. ನಾಲ್ಕೈದು ದಿನ ರಾತ್ರಿಯಿಡಿ ಗಸ್ತು ನಡೆಸಲಿದ್ದಾರೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಎಚ್ಚರ ವಹಿಸಬೇಕು ಎಂದು ಡಿಸಿಎಫ್ ಸಂತೋಷ ಕೆ. ತಿಳಿಸಿದರು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ