ಕನ್ನಡಪ್ರಭ ವಾರ್ತೆ, ಹನೂರು
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸೇತುವೆ ಕಾಮಗಾರಿ ಬಳಿ ಗೂಡ್ಸ್ ವಾಹನ ಪಲ್ಟಿ ಹೊಡೆದು ಕಾರ್ಮಿಕ ಮೃತಪಟ್ಟಿರುವ ಘಟನೆ ತಾಲೂಕಿನ ಅರ್ಜಿಪುರ ರಸ್ತೆಯಲ್ಲಿ ನಡೆದಿದೆ.ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಕೂಲಿ ಕಾರ್ಮಿಕ ಲಿಂಗರಾಜು (40) ಮೃತ ದುರ್ದೈವಿ. ತಾಲೂಕಿನ ಅರ್ಜಿಪುರ ರಸ್ತೆಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿ ಬಳಿ ಯಾವುದೇ ಸೂಚನಾ ನಾಮಫಲಕಗಳನ್ನು ಅಳವಡಿಸದೆ ಇರುವುದರಿಂದ ವೇಗವಾಗಿ ಬರುವ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ. ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಕನ್ನಡಪ್ರಭದಲ್ಲಿ ಜ.10ರಂದು "ಸೇತುವೆ ಕಾಮಗಾರಿ ಬಳಿ ನಾಮಫಲಕ ಅಳವಡಿಸಲು ಒತ್ತಾಯ " ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡಿತ್ತು. ಇಷ್ಟಾದರೂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಯಾವುದೇ ನಾಮಫಲಕ ಅಳವಡಿಸಿದೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿರುವ ಸೇತುವೆ ಕಾಮಗಾರಿ ಬಳಿ ವಾಹನ ಪಲ್ಟಿ ಹೊಡೆದು ಕಾರ್ಮಿಕ ಮೃತಪಟ್ಟಿದ್ದಾನೆ.ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ಮಲೆ ಮಾದೇಶ್ವರವನ್ನೆ ಧಾಮ ಅರಣ್ಯದಂಚಿನ ಭಾಗದಲ್ಲಿ ಅರ್ಜಿಪುರ ರಸ್ತೆಯಲ್ಲಿ ನಡೆಯುತ್ತಿದ್ದ ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿರುವುದರಿಂದ ಸೂಚನಾ ಫಲಕ ಅಥವಾ ಯಾವುದೇ ರಕ್ಷಣಾತ್ಮಕ ವ್ಯವಸ್ಥೆಯನ್ನು ಗುತ್ತಿಗೆದಾರರು ಕಲ್ಪಿಸದೆ ಇರುವುದರಿಂದ ಜೀವ ಹಾನಿ ಉಂಟಾಗಿದೆ. ಇದಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ನೇರ ಹೊಣೆ. ಇಂತಹ ಘಟನೆಗಳು ಜರುಗದಂತೆ ಕಾಮಗಾರಿ ವೇಳೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಅವೈಜ್ಞಾನಿಕ ಕಾಮಗಾರಿ ಸೇತುವೆ ಬಳಿ ಕೂಲಿ ಕಾರ್ಮಿಕ ಬಲಿಯಾಗಿರುವ ಕುಟುಂಬಕ್ಕೆ ಪರಿಹಾರ ನೀಡಬೇಕು. ಜೊತೆಗೆ ಕುತ್ತಿಗೆದಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.