ಧಾರವಾಡ: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿ ಮಾಡುವ ಮುನ್ನವೇ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮುಂದುವರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಸಾಮಾಜಿಕ ನ್ಯಾಯ ಪರ ವಕೀಲರ ವೇದಿಕೆಯು ಹೈಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದಾಗಿ ಹೇಳಿತ್ತು. ಆ ಭರವಸೆ ನಂಬಿ ಮಾದಿಗರು ಕಾಂಗ್ರೆಸ್ ಬೆಂಬಲಿಸಿದ್ದಾರೆ ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆಯಬಾರದು ಎಂದು ಎಚ್ಚರಿಸಿದರು.
ಭಾಷೆ ನೀಡಿದಂತೆ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾ. ನಾಗಮೋಹನದಾಸ್ ಆಯೋಗ ರಚನೆ ಮಾಡುವ ವೇಳೆ ಈಗಾಗಲೇ ಅಧಿಸೂಚನೆ ಹೊರಡಿಸಿದ ಹುದ್ದೆಗಳಿಗೆ ಮಾತ್ರ ನೇಮಕಾತಿ ಮಾಡುವುದಾಗಿ ಘೋಷಿಸಿತ್ತು. ಆದರೆ, ನೇಮಕಾತಿ ನಿರಂತರವಾಗಿ ನಡೆಯುತ್ತಿದೆ ಎಂದು ಕಿಡಿಕಾರಿದರು.ಅಕ್ಟೋಬರ್ 28, 2024ರಂದು ಸಚಿವ ಸಂಪುಟ ಸಭೆಯಲ್ಲಿ ಆಯೋಗ ರಚಿಸುವ ನಿರ್ಧಾರ ಕೈಗೊಂಡಿದ್ದರೂ ಉದ್ದೇಶಪೂರ್ವಕವಾಗಿ 15 ದಿನ ವಿಳಂಬ ಮಾಡಿ ಅಧಿಸೂಚನೆ ಹೊರಡಿಸಲಾಯಿತು. ಈ ಮಧ್ಯೆ ಹಲವು ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಇವುಗಳ ಮತ್ತು ಬ್ಯಾಕ್ ಲಾಗ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಇದು ಸ್ಪಷ್ಟ ನ್ಯಾಯಾಂಗ ನಿಂದನೆಯಾಗಿದ್ದು, ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿದ್ದೇವೆ. ಹೋರಾಟದ ಮೂಲಕ ಸರ್ಕಾರವನ್ನು ಎಚ್ಚರಿಸಿ, ನೇಮಕಾತಿ ತಡೆಯದಿದ್ದರೆ ಮಾದಿಗ ಸಮಾಜಕ್ಕೆ ದೊಡ್ಡ ರೀತಿಯಲ್ಲಿ ಅನ್ಯಾಯವಾಗಲಿದೆ ಎಂದು ಅರುಣಕುಮಾರ್ ಹೇಳಿದರು.
ಒಳಮೀಸಲಾತಿ ಹೊರಾಟ ಸಮಿತಿ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ, ನ್ಯಾ. ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ವರದಿಯಲ್ಲಿನ ದತ್ತಾಂಶಗಳ ಜತೆಗೆ ಉದ್ಯಮ ಇತ್ಯಾದಿಗಳಲ್ಲಿ ನಮ್ಮ ಸಮಾಜ ಹಿಂದುಳಿದಿರುವ ಬಗ್ಗೆಯೂ ಆಯೋಗದ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.
ನಿವೃತ್ತ ಐ.ಆರ್.ಎಸ್. ಅಧಿಕಾರಿ ಎಚ್.ಆರ್. ಭೀಮಾಶಂಕರ ಮಾತನಾಡಿದರು. ಒಳಮೀಸಲಾತಿ ಹೋರಾಟಗಾರರಾದ ಅಶೋಕ ದೊಡ್ಡಮನಿ, ಸುರೇಶ್ ಕೋಟೂರು, ಸಹದೇವ ಮಾಳಗಿ, ಬೂದಿತಿಟ್ಟು ರಾಜೇಂದ್ರ, ಗುರುದೇವ ಕಳ್ಳಿಮನಿ, ಬಿ.ಎಂ. ಮಂಜುನಾಥ, ಅರ್ಜುನ್ ಪತ್ರೆನ್ನವರ, ಮಂಜುನಾಥ್ ಹಾಸಟ್ಟಿ ಇದ್ದರು.