ಕನ್ನಡಪ್ರಭ ವಾರ್ತೆ ಮೈಸೂರು
ಪುರಾತನ ಕಲ್ಯಾಣಿಯ ಉಳಿವಿಗಾಗಿ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದ ವೇಳೆಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಗಿರುವ ಘಟನೆ ಬುಧವಾರ ನಡೆದಿದೆ.ಮೈಸೂರಿನ ರಾಜೇಂದ್ರನಗರದ ಸಿಂಗರಿಶೆಟ್ಟಿ ಕಲ್ಯಾಣಿಯ ಪುನರುಜ್ಜೀವನಕ್ಕೆ ಒತ್ತಾಯಿಸಿ ಎನ್.ಆರ್. ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ರಾಜೇಂದ್ರನಗರದ ಮುಖ್ಯರಸ್ತೆಯಲ್ಲಿ ಪ್ರತಿಭಟಿಸಿದರು. ನೂರು ವರ್ಷ ಇತಿಹಾಸವಿರುವ ಮಂಟಪ ಹಾಗೂ ಕಲ್ಯಾಣಿಯ ಸ್ವಚ್ಚತಾ ಕಾರ್ಯ ಮಾಡಬೇಕು. ಈ ಕುರಿತು ಪಾಲಿಕೆ ಹಾಗೂ ಎಂಡಿಎ ಅಧಿಕಾರಿಗಳು ಕ್ರಮಕೈಗೊಂಡು, ಸ್ಥಳದಲ್ಲಿರುವ ಅನಧಿಕೃತ ಶೆಡ್ ಮಾದರಿಯ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಆದರೆ, ಬಿಜೆಪಿ ಪ್ರತಿಭಟನೆಗೆ ಸ್ಥಳದಲ್ಲಿದ್ದ ಮತ್ತೊಂದು ಗುಂಪಿನ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಸ್ಥಳದಲ್ಲಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಅಷ್ಟರಲ್ಲೇ ಸ್ಥಳಕ್ಕೆ ಆಗಮಿಸಿದ ಎನ್.ಆರ್. ಠಾಣೆಯ ಇನ್ಸ್ ಪೆಕ್ಟರ್ ಲಕ್ಷ್ಮಿಕಾಂತ ತಳವಾರ್ ಹಾಗೂ ಸಿಬ್ಬಂದಿ, ಸ್ಥಳದಲ್ಲಿದ್ದ ಎರಡು ಗುಂಪುಗಳ ಸದಸ್ಯರನ್ನು ಚದುರಿಸಿ, ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು.ಈ ವೇಳೆ ಬಿಜೆಪಿ ಮುಖಂಡ ಎಚ್.ಜಿ. ಗಿರಿಧರ್ ಮಾತನಾಡಿ, ಶತಮಾನದ ಇತಿಹಾಸವಿರುವ ಕಲ್ಯಾಣಿ ಮುಚ್ಚಿ ಹೋಗಿದ್ದು, ಈ ಸ್ಥಳದಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ, ಪಾಲಿಕೆಯ ಅಧಿಕಾರಿಗಳಿಗೆ ಮನವಿ ನೀಡಿದ್ದರು ಪ್ರಯೋಜನವಾಗಿಲ್ಲ. ಒಂದು ವಾರದಲ್ಲಿ ಪಾಲಿಕೆ ಅಧಿಕಾರಿಗಳು ಈ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿ, ಕಲ್ಯಾಣಿ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಇಲ್ಲದಿದ್ದರೇ ನಾವೇ ಈ ಪ್ರಯತ್ನಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.ಸ್ಥಳೀಯ ನಿವಾಸಿ ನೂರ್ ಅಹಮ್ಮದ್ ಮಾತನಾಡಿ, ಇದು ಸರ್ಕಾರಿ ಜಾಗವಾಗಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸುತ್ತಾರೆ. ಈ ಬಗ್ಗೆ ದೂರು ನೀಡಿದರೆ ಅಧಿಕಾರಿಗಳು ಬಂದು ಕ್ರಮ ವಹಿಸುತ್ತಾರೆ. ಇದರ ಹೊರತಾಗಿ ಬಿಜೆಪಿ ಕಾರ್ಯಕರ್ತರು ಜಾತಿಗಳ ನಡುವೆ ಸಂಘರ್ಷ ಮೂಡಿಸುವುದು ಸರಿಯಲ್ಲ ಎಂದು ತಿಳಿಸಿದರು.