ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗೋಸಾವಿ ಸಮಾಜದ ಮಹಿಳೆಯರ ಹಾಗೂ ಯುವಕರ ಮೇಲೆ ವಿನಾಕಾರಣ ಲಾಠಿ ಬೀಸಿದ ಲಕ್ಷ್ಮೇಶ್ವರ ಪಿಎಸ್ಐ ಈರಪ್ಪ ರಿತ್ತಿ ಅವರನ್ನು ವರ್ಗಾವಣೆ ಮಾಡಿರುವುದು ನ್ಯಾಯಕ್ಕೆ ಸಿಕ್ಕ ಜಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಶನಿವಾರ ಪಟ್ಟಣದ ಪೊಲೀಸ್ ಠಾಣೆಯ ಎದುರು ಕಳೆದ 11 ದಿನಗಳಿಂದ ಪಿಎಸ್‌ಐ ಈರಪ್ಪ ರಿತ್ತಿ ವಿರುದ್ಧ ನಡೆಸುತ್ತಿದ್ದ ಧರಣಿ ಕೈಬಿಟ್ಟ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದರು.ಗೋಸಾವಿ ಸಮಾಜದವರು ದಸರಾ ಹಬ್ಬದ ವೇಳೆ ದುರ್ಗಾದೇವಿಯ ಮೆರವಣಿಗೆ ಮಾಡುತ್ತಿದ್ದ ವೇಳೆ ಕೆಲ ಮುಸ್ಲಿಂ ಯುವಕರು ಗೋಸಾವಿ ಸಮಾಜದ ಯುವಕರೊಂದಿಗೆ ವಿನಾಕಾರಣ ಜಗಳ ತೆಗೆದ ಪರಿಣಾಮ ಮರುದಿನ ಪಟ್ಟಣದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಹೋಗಿದ್ದ ಯುವಕರ ಹಾಗೂ ಮಹಿಳೆಯರ ಮೇಲೆ ಯಾವುದೇ ಕಾರಣವಿಲ್ಲದೆ ಲಾಠಿ ಬೀಸುವ ಮೂಲಕ ಕಾನೂನು ಮೀರಿ ವರ್ತನೆ ಮಾಡಿದ್ದರಿಂದ ಅನೇಕರು ಗಾಯಗೊಂಡಿದ್ದರು.
ಪಟ್ಟಣದ ಪಿಎಸ್‌ಐ ಈರಪ್ಪ ರಿತ್ತಿ ವರ್ತನೆ ಖಂಡಿಸಿ ಹಾಗೂ ಪಿಎಸ್‌ಐ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಕಳೆದ 11 ದಿನಗಳಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದ ಗೋಸಾವಿ ಸಮಾಜ ಹಾಗೂ ಶ್ರೀರಾಮ ಸೇನೆಯ ಕಾರ್ಯಕರ್ತರು ಹೋರಾಟಕ್ಕೆ ಇಂದು ನ್ಯಾಯ ಸಿಕ್ಕಿದೆ. ಇನ್ನಾದರೂ ಪಿಎಸ್‌ಐ ಈರಪ್ಪ ರಿತ್ತಿ ತಮ್ಮ ವರ್ತನೆ ಬದಲಿಸಿಕೊಂಡು ಕಾರ್ಯ ನಿರ್ವಹಿಸಬೇಕು. ನಮ್ಮ ಹೋರಾಟ ಪೊಲೀಸ್ ಇಲಾಖೆಯ ವಿರುದ್ಧ ಆಗಿರಲಿಲ್ಲ. ಕೇವಲ ಈರಪ್ಪ ರಿತ್ತಿ ದುರಹಂಕಾರದ ವಿರುದ್ಧ ಆಗಿತ್ತು ಎಂದು ಹೇಳಿದರು.ಈ ವೇಳೆ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ಗೋಸಾವಿ ಸಮಾಜವು ಈಗ ದೀಪಾವಳಿ ಮತ್ತು ದಸರಾ ಹಬ್ಬ ಆಚರಿಸಿದ್ದಾರೆ. ಈರಪ್ಪ ರಿತ್ತಿ ಗೊಂಡಾ ರೀತಿ ವರ್ತನೆ ಮಾಡುವ ಮೂಲಕ ಅಮಾಯಕರ ಮೇಳೆ ಲಾಠಿ ಪ್ರಹಾರ ನಡೆಸಿ ದಾಷ್ಟ್ಯತೆ ಮೆರೆದಿದ್ದರು. ಈಗ ಅದಕ್ಕೆ ತಕ್ಕೆ ಬೆಲೆ ತೆತ್ತಿದ್ದಾರೆ. ಪಿಎಸ್‌ಐ ಈರಪ್ಪ ರಿತ್ತಿ ಅವರನ್ನು ಇಲ್ಲಿಗೆ ಮರು ನೇಮಕ ಮಾಡಿದಲ್ಲಿ ನಮ್ಮ ಹೋರಾಟ ಮತ್ತೆ ಮುಂದುವರೆಯಲಿದೆ.
ಎಸ್ಪಿ ಬಿ.ಎಸ್.ನೇಮಗೌಡ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದಕ್ಷ ಅಧಿಕಾರಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಬಿಜೆಪಿ ಮಂಡಳದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ್, ನವೀನ ಬೆಳ್ಳಟ್ಟಿ, ಬಸವರಾಜ ಚಕ್ರಸಾಲಿ, ಶಕ್ತಿ ಕತ್ತಿ, ನೀಲಪ್ಪ ಹತ್ತಿ, ಎಂ.ಆರ್. ಪಾಟೀಲ, ಅನಿಲ ಮುಳಗುಂದ, ಈರಣ್ಣ ಪೂಜಾರ, ಪ್ರಾಣೇಶ ವ್ಯಾಪಾರಿ, ಮಲ್ಲಿಕಾರ್ಜುನ ಹಾಳದೋಟದ, ಕಿರಣ ಚಿಲ್ಲೂರಮಠ, ಅಮಿತ ಗುಡಗೇರಿ, ಬಾಳಪ್ಪ ಗೋಸಾವಿ, ಗೋವಿಂದ ಗೋಸಾವಿ, ಹರೀಶ ಗೋಸಾವಿ ಸೇರಿದಂತೆ ಅನೇಕರು ಇದ್ದರು.