ಹುಬ್ಬಳ್ಳಿ:
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶತಾಯ ಗತಾಯ ಉಪ ಚುನಾವಣೆ ಗೆಲ್ಲಬೇಕೆಂಬ ಭರದಲ್ಲಿ ಕಾಂಗ್ರೆಸ್ ಟೋಕನ್ ಮೂಲಕ ಹಣ ಹಂಚಿಕೆ ಶುರು ಮಾಡಿದೆ ಎಂದು ಹೇಳಿದರು.
ಟೋಕನ್ ಹಂಚಿದ ಕಾಂಗ್ರೆಸ್ ಅದನ್ನು ತೋರಿಸಿದವರಿಗೆ ಹಣ ಕೊಟ್ಟು ಕಳಿಸುವ ವ್ಯವಸ್ಥೆ ಮಾಡಿದೆ ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಉಲ್ಲೇಖಿಸಿದ ಸಚಿವರು, ಕಾಂಗ್ರೆಸ್ ಲೂಟಿ ಮಾಡಿದ್ದನ್ನು ಹೀಗೆ ಹಂಚುತ್ತಿದೆ ಎಂದು ದೂರಿದರು.ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅದೆಷ್ಟೇ ಟೋಕನ್, ಹಣ ಹಂಚಿದರೂ ಗೆಲ್ಲುವುದು ನಾವೇ ಎಂದ ಜೋಶಿ, ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಪರ ಒಲವಿದೆ. ಪ್ರಚಾರ ವೇಳೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹಾಗಾಗಿ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಲಿದೆ. ಸಂಡೂರು, ಶಿಗ್ಗಾಂವಿಯಲ್ಲಿ ಬಿಜೆಪಿ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಕ್ಫ್ ವಿವಾದದಲ್ಲಿ ಕಾಂಗ್ರೆಸ್ ಪಕ್ಷ "ಜನರ ದಿಕ್ಕು ತಪ್ಪಿಸೋ ಅಭಿಯಾನ " ಶುರು ಮಾಡಿದೆ ಎಂದು ಆರೋಪಿಸಿದ ಅವರು, ಯಾವುದೇ ವಿವಾದ, ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವುದು, ಮಿಸ್ ಗೈಡ್ ಮಾಡುವುದು ಕಾಂಗ್ರೆಸ್ ಸಂಸ್ಕೃತಿ ಆಗಿಬಿಟ್ಟಿದೆ ಎಂದು ಹರಿಹಾಯ್ದರು.
ಈಗ ವಕ್ಫ್ ವಿಚಾರದಲ್ಲೂ ಕಾಂಗ್ರೆಸ್ ಜನರನ್ನು ಕನ್‌ಫ್ಯೂಸ್ ಮಾಡುತ್ತಿದೆ. ಆದರೆ, ಬಿಜೆಪಿ ಯಾವತ್ತೂ ಸ್ಪಷ್ಟ ನಿಲುವು ತೋರಿದೆ. ವಕ್ಫ್ ಅತಿಕ್ರಮಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಕ್ಫ್ ಆಸ್ತಿ ಸಂರಕ್ಷಿಸುವ ಕೆಲಸವನ್ನು ಬಿಜೆಪಿ ಹಿಂದೆಯೂ ಮಾಡಿದೆ, ಮುಂದೆಯೂ ಮಾಡುತ್ತದೆ. ಆದರೆ, ವಕ್ಫ್ ಅಥವಾ ವಕ್ಫ್ ಹೆಸರಲ್ಲಿ ಭೂಗಳ್ಳರು ಬಡವರ, ರೈತರ, ಜನಸಾಮಾನ್ಯರ ಆಸ್ತಿ ಕಬಳಿಸಲು ಹೊರಟರೆ ಬಿಡುವುದಿಲ್ಲ ಎಂದು ಜೋಶಿ ಎಚ್ಚರಿಸಿದರು.