ಹಾನಗಲ್ಲ: ಬದುಕನ್ನು ಕಲಿಸುವ ಕನ್ನಡ ರಂಗಭೂಮಿಗೆ ಹೊಸ ಅರಿವಿನ ಹರಿವು ಬೇಕಾಗಿದ್ದು, ವೈಚಾರಿಕತೆ ಮುಕ್ಕಾಗದಂತೆ ನಾಡ ತುಂಬ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ಖ್ಯಾತ ನಿರ್ದೇಶಕ ಪ್ರಕಾಶರಾಜ ನೇತೃತ್ವ ನಿರ್ದಿಗಂತದ ರಂಗ ಕಲಾವಿದ ನಿರ್ದೇಶಕ ಶಕೀಲಅಹಮ್ಮದ್ ಮಾತನಾಡಿ, ಕನ್ನಡ ರಂಗಭೂಮಿಯ ಮೂಲಕ ಜನಮನ ಕಟ್ಟುವ ಕೆಲಸ ಆಗಬೇಕಾಗಿದೆ. ರಂಗ ಎಲ್ಲರನ್ನೂ ಜತೆಯಲ್ಲಿ ಕೊಂಡೊಯ್ಯುವ ಶಕ್ತಿ ಹೊಂದಿದೆ. ರಂಗದ ಮರು ವಿಕಾಸ ಈಗಿನ ಅಗತ್ಯ. ಕಲಾವಿದರ ಕನಸುಗಳೂ ಸಾಕಾರವಾಗಬೇಕಾಗಿದೆ. ಇದಕ್ಕಾಗಿ ನಿರ್ದಿಗಂತ ಹೊಸ ಆಯಾಮದೊಂದಿಗೆ ರಂಗಭೂಮಿ ಕಲಾವಿದರಿಗೆ ಹೊಸ ಚೈತನ್ಯ ನೀಡುವ ಕಾರ್ಯದಲ್ಲಿ ಹೆಜ್ಜೆ ಹಾಕುತ್ತಿದೆ ಎಂದರು.
ನಿರ್ದೇಶಕ ಸಂತೋಷ ಸಂಕೊಳ್ಳಿ ಮಾತನಾಡಿ, ಕಲೆ ಸಾಹಿತ್ಯ ರಾಜಕೀಕರಣಗೊಳ್ಳಬಾರದು. ಹಲವು ಸ್ಥಿತ್ಯಂತರ ಪಲ್ಲಟಗಳ ನಡುವೆಯೂ ಕನ್ನಡ ರಂಗಭೂಮಿ ವಿಕಾಸದ ಹಾದಿಯಲ್ಲೇ ಸಾಗಿದೆ. ಈಗ ಬದಲಾವಣೆಯ ಕಾಲದಲ್ಲಿದ್ದೇವೆ. ಕಾಲ ಕಾಲಕ್ಕೆ ಇಂತಹ ಬದಲಾವಣೆಗಳು ಇದ್ದೇ ಇರುತ್ತವೆ. ಏನೇ ಆದರೂ ರಂಗಭೂಮಿಗೆ ಎಲ್ಲ ಕಾಲದಲ್ಲೂ ಸಕಾಲಿಕವಾದ ಸ್ಪಂದನೆ ದೊರೆತೇ ಇದೆ ಎಂದರು.ಸ್ಕೌಟ್ ಹಾಗೂ ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಪರಮೇಶ ಚಿಕ್ಕಳ್ಳಿ ಅಧ್ಯಕ್ಷತೆವಹಿಸಿದ್ದರು. ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಗಜಾನನ ಯುವಕ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ, ಕಾರ್ಯದರ್ಶಿ ನಾಗರಾಜ ಧಾರೇಶ್ವರ, ಕಲಾವಿದ ಶಿವಮೂರ್ತಿ ಹುಣಸಿಹಳ್ಳಿ ಉಪಸ್ಥಿತರಿದ್ದರು. ಕಲಾವಿದೆ ಸಹನಾ ರಂಗಗೀತೆ ಹಾಡಿದರು.