ಕಳೆದ ಮೂರೂವರೆ ವರ್ಷಗಳಿಂದ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬರ ಅಧ್ಯಯನದ ವಿಚಾರದಲ್ಲೂ ಕಾಂಗ್ರೆಸ್ ಶಾಸಕರ ನಡುವೆಯೇ ಭಿನ್ನಮತ ಸ್ಫೋಟಗೊಂಡಿದೆ. ಈಗ ಬಡವರನ್ನು ಒಕ್ಕಲೆಬ್ಬಿಸಲು ಸರ್ಕಾರ ಮುಂದಾಗಿದ್ದು, ಇದನ್ನು ಖಂಡಿಸಿ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು.
ಹೊನ್ನಾವರ: ಸರ್ಕಾರಿ ಜಾಗ ಹಾಗೂ ಅರಣ್ಯಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವವರನ್ನು ಒಕ್ಕಲೆಬ್ಬಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದೆ. ಇದನ್ನು ಖಂಡಿಸಿ ಪಕ್ಷದ ನಿರ್ಧಾರದಂತೆ ಜಿಲ್ಲೆಯ ಜನರ ಪರವಾಗಿ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಮಾಜಿ ಸಚಿವ ಶಿವಾನಂದ ನಾಯ್ಕ ಎಚ್ಚರಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರೂವರೆ ವರ್ಷಗಳಿಂದ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬರ ಅಧ್ಯಯನದ ವಿಚಾರದಲ್ಲೂ ಕಾಂಗ್ರೆಸ್ ಶಾಸಕರ ನಡುವೆಯೇ ಭಿನ್ನಮತ ಸ್ಫೋಟಗೊಂಡಿದೆ. ಈಗ ಬಡವರನ್ನು ಒಕ್ಕಲೆಬ್ಬಿಸಲು ಸರ್ಕಾರ ಮುಂದಾಗಿದ್ದು, ಇದನ್ನು ಖಂಡಿಸಿ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದರು. ಬಿಜೆಪಿ ಮುಖಂಡ ಈಶ್ವರ ನಾಯ್ಕ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಬಹುತೇಕ ಭೂಭಾಗ ಅರಣ್ಯದಿಂದ ಆವೃತವಾಗಿದ್ದು, ಜನರು ಜೀವನೋಪಾಯಕ್ಕಾಗಿ ಅರಣ್ಯಭೂಮಿಯನ್ನೇ ನೆಚ್ಚಿಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಬಡ ಕುಟುಂಬಗಳನ್ನು ಬೀದಿಗೆ ತಳ್ಳಲು ಯತ್ನಿಸುತ್ತಿರುವ ಸರ್ಕಾರದ ಧೋರಣೆ ಖಂಡನೀಯ. ಈ ಅನ್ಯಾಯದ ವಿರುದ್ಧ ಸಾರ್ವಜನಿಕರೆಲ್ಲರೂ ಒಗ್ಗೂಡಿ ಹೋರಾಡಬೇಕಿದೆ ಎಂದರು.ಬಿಜೆಪಿ ಮುಖಂಡ ಶಿವಾನಂದ ಹೆಗಡೆ ಕಡತೋಕ ಮಾತನಾಡಿ, ಸರ್ಕಾರಿ ಜಮೀನಿನಲ್ಲಿ ನೆಲೆಸಿರುವವರನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡಲು ಹುನ್ನಾರ ನಡೆಸಲಾಗುತ್ತಿದೆ. ಗ್ರಾಮೀಣ ಭಾಗದ ಗುಂಡಿಬಿದ್ದ ರಸ್ತೆಗಳಿಗೆ ಪ್ಯಾಚ್‌ವರ್ಕ್ ಮಾಡಲೂ ಸರ್ಕಾರದ ಬಳಿ ಅನುದಾನವಿಲ್ಲ. ಕೇವಲ ಭರವಸೆಗಳು ಮತ್ತು ಯೋಜನೆಗಳ ಹೆಸರಿನಲ್ಲಿ ಕಾಲಹರಣ ಮಾಡದೆ, ಹೊರಡಿಸಿರುವ ಅವೈಜ್ಞಾನಿಕ ಆದೇಶಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ತಲೆತಲಾಂತರಗಳಿಂದ ಅರಣ್ಯ ಭೂಮಿಯನ್ನೇ ನಂಬಿ ಬದುಕುತ್ತಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲು ಸರ್ಕಾರ ಮುಂದಾಗಿದ್ದು, ಅವರ ಹಕ್ಕಿನ ಸಾಕ್ಷ್ಯಗಳನ್ನೇ ನಾಶಪಡಿಸಲು ಹೊರಟಿದೆ. ಜನವಿರೋಧಿ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದರು.ಬಿಜೆಪಿ ಹಿಂದುಳಿದ ವರ್ಗದ ಮುಂಖಂಡ ಬಿ.ಟಿ. ಗಣಪತಿ ಮಾತನಾಡಿ, ಸರ್ಕಾರದ ಪ್ರಜಾಸೇವಾ ಕಾರ್ಯಕ್ರಮಗಳು ಯಾವುದೇ ಶಿಷ್ಟಾಚಾರ(ಪ್ರೋಟೋಕಾಲ್) ಇಲ್ಲದೆ ನಡೆಯುತ್ತಿವೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ವೇದಿಕೆಯ ಮೇಲೆ ತಂದು ಕೂರಿಸಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದರು.ಹೊನ್ನಾವರ ಮಂಡಲ ಅಧ್ಯಕ್ಷ ಯೋಗೇಶ ಮೇಸ್ತ, ಮಂಕಿ ಪಪಂ ಅಧ್ಯಕ್ಷೆ ಸವಿತಾ ನಾಯ್ಕ, ಬಿಜೆಪಿ ಪ್ರಮುಖರಾದ ಎಂ.ಎಸ್. ಹೆಗಡೆ, ಬಿ.ಟಿ. ಗಣಪತಿ, ಗಣಪತಿ ಗೌಡ, ವಿಘ್ನೇಶ ಹೆಗಡೆ, ಗೋವಿಂದ ಗೌಡ, ನವೀನ ನಾಯ್ಕ, ಶೋಭಾ ಮೇಸ್ತ, ಕಿರಣ ಮೇಸ್ತ, ನಾಗರಾಜ ಮೇಸ್ತ, ಕೃಷ್ಣ ನಾಯ್ಕ, ಹರೀಶ ನಾಯ್ಕ ಹಾಗೂ ಕಾರ್ಯಕರ್ತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.