ಹಿರಿಯ ಪತ್ರಕರ್ತ, ಸಾಹಿತಿ ಸ. ಗಿರಿಜಾಶಂಕರ
ಹಾಡು ಕೇಳುವಾಗ ರಾಗ ನಮ್ಮನ್ನು ಸೆಳೆಯುತ್ತದೆ. ರಾಗದ ಶ್ರವಣ ಅರ್ಥ ಗ್ರಹಿಸುವುದಕ್ಕಿಂತಲೂ ಮಿಗಿಲಾದ ಅನುಭವ ನೀಡುತ್ತದೆ. ದನಿಯ ಜೇನು ನಮ್ಮನ್ನು ಭಾವಪರವಶಗೊಳಿಸಿದರೆ, ಗಾಯಕ-ಗಾಯಕಿಯರ ಮಧುರ ಕಂಠ ಸಂತಸ ನೀಡುತ್ತದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಸ. ಗಿರಿಜಾಶಂಕರ ಹೇಳಿದರು.ನಗರದ ಗಾಂಧಿನಗರದ ಬಿ.ಎನ್. ವೆಂಕಟೇಶ್ ನಿವಾಸದಲ್ಲಿ ಕಲ್ಕಟ್ಟೆ ಪುಸ್ತಕದ ಮನೆ, ಲಯನ್ಸ್ ಸಂಸ್ಥೆ ಹಾಗೂ ತ್ರಯಿ ಕಲ್ಚರಲ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಕವಿ ನಾಗರಾಜರಾವ್ ಕಲ್ಕಟ್ಟೆ ಅವರ ‘ರಾಧೆಯ ಗೋಕುಲ’ ಭಾವಗೀತೆಗಳ ಗುಚ್ಛವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.‘ರಾಧೆಯ ಗೋಕುಲ’ದಲ್ಲಿ ಕೃಷ್ಣನೇ ಕೇಂದ್ರಬಿಂದು. ಕೃಷ್ಣ ಭಾರತದ ಸಾಂಸ್ಕೃತಿಕ ಶಕ್ತಿ. ಆತನ ವ್ಯಕ್ತಿತ್ವ ಮನುಷ್ಯರಿಗೆ ಹತ್ತಿರವಾಗಿದ್ದು, ಪ್ರೀತಿ, ಶಕ್ತಿ, ರಸಿಕತೆ, ಅಧ್ಯಾತ್ಮ ಹಾಗೂ ಶೌರ್ಯ ಸೇರಿದಂತೆ ಹಲವು ಗುಣಗಳ ಸಂಗಮ. ಇಷ್ಟೆಲ್ಲ ಗುಣ ಗಳನ್ನು ಹೊಂದಿದ್ದರೂ ಕೃಷ್ಣ ‘ಮಾ ಫಲೇಷು ಕದಾಚನ’ ಎಂಬ ನಿಷ್ಕಾಮ ಕರ್ಮದ ಸಂದೇಶ ಸಾರುತ್ತಾನೆ ಎಂದು ವಿವರಿಸಿದರು.ಪ್ರಾಪಂಚಿಕತೆಯಿಂದ ಪಾರಮಾರ್ಥಿಕತೆಯತ್ತ ಕರೆದೊಯ್ಯುವ ಪ್ರಜ್ಞೆಯಾಗಿ ಕೃಷ್ಣನ ಭಕ್ತಿ ಮತ್ತು ಪ್ರೀತಿ ಜಗತ್ತಿನಲ್ಲಿ ರಾಧೆ ನೆಲೆಸಿದ್ದಾಳೆ. ರಾಧೆ ಕೃಷ್ಣನನ್ನು ಅರಿಯುವ ಕಿಟಕಿಯಿದ್ದಂತೆ. ಆಕೆಯನ್ನು ಅರ್ಥಮಾಡಿಕೊಳ್ಳದೆ ಕೃಷ್ಣನ ವ್ಯಕ್ತಿತ್ವ ಸಂಪೂರ್ಣ ವಾಗಿ ತಿಳಿಯಲು ಸಾಧ್ಯವಿಲ್ಲ. ಸ್ತ್ರೀಗೆ ದೈವತ್ವದ ಸ್ಥಾನ ನೀಡಿದ ಹಿಂದೂ ಧರ್ಮದಲ್ಲಿ ರಾಧಾ-ಕೃಷ್ಣರ ಪ್ರೀತಿಯೂ ದೈವತ್ವ ಪಡೆದುಕೊಂಡಿದೆ ಎಂದರು.ನಾಗರಾಜರಾವ್ ಕಲ್ಕಟ್ಟೆ ನಮ್ಮ ನಡುವಿನ ಅದಮ್ಯ ಪ್ರತಿಭೆ. ಈ ಗೀತಗುಚ್ಛದಲ್ಲಿ ‘ಕೃಷ್ಣ ಕೊಟ್ಟ ಕೊಳಲನ್ನು ನನ್ನ ಕೈಗೆ’, ‘ಒಂದೇ ಮಳೆಗೆ ಗರಿಕೆ ಚಿಗುರು’, ‘ಬಿಸಿಲು ಬಾರದೇ ಹೂವು ಅರಳದು’, ‘ಗಾಳಿಗೆ ಹಾರಿದೆ ಹೂವು’, ‘ರುಕ್ಮಿಣಿಯೊಮ್ಮೆ’, ‘ರಾಧೆಯ ಕಣ್ಣಿಗೆ’ ಹಾಗೂ ‘ಒಮ್ಮೆಯೂ ಮಧುರೆಗೆ’ ಸೇರಿದಂತೆ ಏಳು ಗೀತೆಗಳನ್ನು ರಚಿಸಿದ್ದಾರೆ. ಸಾಹಿತ್ಯ, ಸಂಗೀತ ಹಾಗೂ ಗಾಯನದ ಸಮನ್ವಯ ಗೀತೆಗಳಿಗೆ ವಿಶೇಷ ಮೆರುಗು ನೀಡಿದೆ. ರುಕ್ಮಿಣಿ ಹೃನ್ಮುಖದಿಂದ ರಾಧೆ ಹೊರಹೊಮ್ಮುವ ಸಾಲುಗಳು ಮನಸೂರೆಗೊಳ್ಳುತ್ತವೆ. ಕೆಲವು ಸಾಲುಗಳ ಅಂತಃಸತ್ವ ಶಾಶ್ವತವಾಗಿ ಉಳಿಯುವಂತಿದ್ದು, ರಾಧಾ-ಕೃಷ್ಣರ ಪ್ರೀತಿ ಸಕಾರಾತ್ಮಕ ಮೌಲ್ಯಗಳನ್ನು ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಲಯನ್ಸ್ ವಲಯಾಧ್ಯಕ್ಷ ಜಿ. ರಮೇಶ್ ಮಾತನಾಡಿ ಕಲ್ಕಟ್ಟೆ ಪುಸ್ತಕದ ಮನೆ ಲಯನ್ಸ್ ಸಂಸ್ಥೆಯೊಂದಿಗೆ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಕೈಜೋಡಿಸಿರುವುದು ಸಂತಸದ ಸಂಗತಿ. ನಿರ್ಮಾಪಕಿ ರೇಖಾ ನಾಗರಾಜರಾವ್ ಅವರ ಸಾಂಸ್ಕೃತಿಕ ಚಟುವಟಿಕೆಗಳ ನಿರಂತರತೆ ಎಲ್ಲರಿಗೂ ಸ್ಫೂರ್ತಿ ಎಂದರು.ಟಿ.ಎಂ.ಎಸ್. ಅಧ್ಯಕ್ಷೆ ನೇತ್ರಾ ವೆಂಕಟೇಶ್ ಮಾತನಾಡಿ, ಗೀತೆಗಳಿಗೆ ತಾಂತ್ರಿಕ ನೆರವು ನೀಡುತ್ತಿರುವ ನವನೀತ್ ರೆಡ್ಡಿ, ವೈಷ್ಣವಿ ಎನ್. ರಾವ್ ಹಾಗೂ ಚಿನ್ಮಯಿ ರಮೇಶ್ ಅವರಂತಹ ಯುವ ಪ್ರತಿಭೆಗಳು ಭಾರತೀಯ ಸಂಸ್ಕೃತಿ ಸಂರಕ್ಷಣೆಗೆ ಆಧುನಿಕ ತಂತ್ರಜ್ಞಾನವಬಳಸಿಕೊಳ್ಳುತ್ತಿರುವುದು ಮಾದರಿ ಎಂದು ಹೇಳಿದರು.ಲಯನ್ಸ್ ಅಧ್ಯಕ್ಷ ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಧಾ-ಕೃಷ್ಣರ ಮೌಲ್ಯಯುತ ಪ್ರೀತಿ ಹಾಗೂ ಗೋಕುಲದ ವಾತಾವರಣವನ್ನು ಏಳು ಗೀತೆಗಳ ಮೂಲಕ ಕಲ್ಕಟ್ಟೆ ಸತ್ವಯುತವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.ಲಯನ್ಸ್ ಖಜಾಂಚಿ ಅಣ್ಣಾವೇಲು, ಬಾಲಕೃಷ್ಣ ಕೆ.ಇ., ಸಾಹಿತಿ ರಮೇಶ್ ಬೊಂಗಾಳೆ, ಪಶುವೈದ್ಯಕೀಯ ಇಲಾಖೆಯ ಗಿರೀಶ್, ಡಾ. ಮಂಜುಳಾ ನಾರಾಯಣಸ್ವಾಮಿ, ಲಯನ್ ಕುಮಾರ್ ಸಿ.ಎನ್., ರೂಪಾ ಗಿರೀಶ್, ಕವಿತಾ ರಮೇಶ್, ಕವಿತಾ ಶಂಕರ್, ಕೃತ್ತಿಕಾ, ಉಮಾ ಗಜೇಂದ್ರ, ಸಾತ್ವಿಕ್ ಶೆಟ್ಟಿ ಹಾಗೂ ಸಾನ್ವಿ ಶೆಟ್ಟಿ ,. ಕೃತ್ತಿಕಾ ಉಪಸ್ಥಿತರಿದ್ದರು.
ನಾಗರಾಜರಾವ್ ಕಲ್ಕಟ್ಟೆ ಸ್ವಾಗತಿಸಿ ನಿರೂಪಿಸಿದರು. ರೇಖಾ ನಾಗರಾಜರಾವ್ ವಂದಿಸಿದರು.