ಅಜೀಜಅಹ್ಮದ ಬಳಗಾನೂರ
ಉನ್ನತ ಶಿಕ್ಷಣ, ಸಂಶೋಧನೆ, ಸ್ವಂತ ಮನೆ ಕಟ್ಟುವ ಕನಸುಗಳನ್ನೆಲ್ಲ ಬದಿಗಿಟ್ಟು ಅಸಹಾಯಕರ ಸೇವೆಗೆ ಬದುಕು ಮುಡಿಪಾಗಿಟ್ಟಿರುವ ಅಮೃತ್ ಅವರ ಪಾಲಿಗೆ ಮೌನವೇ ಅಸ್ತ್ರವನ್ನಾಗಿಸಿಕೊಂಡು ಮುನ್ನಡೆಯುತ್ತಿದ್ದಾರೆ.ಬಾಯಾರಿದ ಕಾರ್ಮಿಕರು:
ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ದೃಶ್ಯ ಅಮೃತ ಅವರ ಬದುಕಿಗೆ ಹೊಸ ತಿರುವು ನೀಡಿತು. ನೀರು ಕೇಳಿದ ಕಾರ್ಮಿಕರಿಗೆ ಬಾಟಲಿ ನೀರು ಖರೀದಿಸಿ ಕುಡಿಯುವಂತೆ ಕೆಲವರು ಸೂಚಿಸಿದ್ದರು. ಬಡವರು ಕುಡಿಯುವ ನೀರಿಗೂ ಹಣ ನೀಡಬೇಕಾದ ಪರಿಸ್ಥಿತಿ ಅವರನ್ನು ಕಾಡಿತು. ಪ್ರಕೃತಿ ನೀಡುವ ಜೀವಜಲ ವ್ಯಾಪಾರದ ಸರಕಾಗಬಾರದು ಎಂದು ನಿರ್ಧರಿಸಿದ ಅವರು, ಎಲ್ಲರಿಗೂ ಉಚಿತವಾಗಿ ನೀರು ಸಿಗುವ ವರೆಗೂ ಮಾತನಾಡುವುದಿಲ್ಲ ಎಂಬ ಸಂಕಲ್ಪ ತೊಟ್ಟರು. ಅಂದಿನಿಂದ ಮೌನವೇ ಅವರ ಪ್ರತಿಭಟನೆಯ ಭಾಷೆಯಾಯಿತು.ಜನಸೇವೆಯತ್ತ ಡಾಕ್ಟರ್:ಬೆಂಗಳೂರು ವಿವಿಯಲ್ಲಿ ಎಂಎ ಪದವಿ ಪಡೆದ ಅಮೃತ್, ಯುಜಿಸಿ ಪರೀಕ್ಷೆಯನ್ನೂ ಪೂರ್ಣಗೊಳಿಸಿದ್ದರು. ಮುಂದೆ ಪಿಎಚ್.ಡಿ ಸಂಶೋಧನೆ ನಡೆಸುವ ಕನಸು ಕಂಡಿದ್ದರು. ಆದರೆ, ರೈತ ಚಳವಳಿಗಳ ಸಂಪರ್ಕ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಕರ್ನಾಟಕ ರಾಜ್ಯ ರೈತ ಸಂಘದ ಪ್ರೊ. ನಂಜುಂಡಸ್ವಾಮಿ ಅವರ ಸಂಪರ್ಕಕ್ಕೆ ಬಂದ ಬಳಿಕ ರೈತರ ಹೋರಾಟಗಳಲ್ಲಿ ಸಕ್ರಿಯರಾದರು. ರೈತ ಮುಖಂಡ ಶೇಷಾರೆಡ್ಡಿ ಅವರು ಅಂಬ್ರೋಸ್ಗೆ "ಅಮೃತ್ " ಎಂದು ಹೆಸರಿಟ್ಟರು. ಮುಂದೆ ಅದೇ ಅವರ ಹೋರಾಟದ ಗುರುತಾಯಿತು.ರಟ್ಟಿನ ಪೆಟ್ಟಿಗೆಗಳೇ ಹಾಸಿಗೆ:
ಮೌನದ ಹಿಂದೆ ಮಾನವೀಯ ಧ್ವನಿ:ಅಮೃತ್ ಅವರ ಬದುಕಿನಲ್ಲಿ ಐಷಾರಾಮಿಗೆ ಜಾಗವಿಲ್ಲ. ಆದರೆ, ಸಮಾಜದ ಬಗ್ಗೆ ಅಪಾರ ಕಾಳಜಿಯಿದೆ. ತುಟಿಗಳ ಮೇಲೆ ಮಾತಿಲ್ಲ, ಕಾಲಿನ ಕೆಳಗೆ ಚಪ್ಪಲಿಯಿಲ್ಲ. ಆದರೂ ಅವರ ಬದುಕು ಸಮಾಜದ ಮುಂದೆ ಹಲವು ಪ್ರಶ್ನೆಗಳನ್ನು ಇಡುತ್ತದೆ. ನೀರು ಲಾಭದ ಸರಕಲ್ಲ, ಪ್ರತಿಯೊಬ್ಬರ ಬದುಕಿನ ಹಕ್ಕು ಎಂಬ ಅವರ ಸಂದೇಶಕ್ಕೆ ಧ್ವನಿಯ ಅಗತ್ಯವಿಲ್ಲ. ಅವರ ಮೌನವೇ ವ್ಯವಸ್ಥೆಯನ್ನು ಪ್ರಶ್ನಿಸುವ ಪ್ರತಿಭಟನೆ ನೋಡುಗರಿಗೆ ಅಚ್ಚರಿಯನ್ನುಂಟು ಮಾಡಿದೆ.
ಹರಿಯಾಣದಲ್ಲಿ ದಲಿತರ ಹತ್ಯೆಯ ಘಟನೆ ಮನಸ್ಸನ್ನು ಕಲಕಿದ ಬಳಿಕ ಚಪ್ಪಲಿ ಧರಿಸುವುದನ್ನೂ ತ್ಯಜಿಸಿದ ಅಮೃತ್, ಇಂದಿಗೂ ಬರಿಗಾಲಿನಲ್ಲೇ ಸಂಚರಿಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿ ವರೆಗೆ ನಡೆದ ಪಾದಯಾತ್ರೆಯಲ್ಲೂ ಪಾಲ್ಗೊಂಡಿದ್ದರು. ದೇಶದ ಬಹುತೇಕ ರಾಜ್ಯಗಳಲ್ಲಿ ಕಾಲ್ನಡಿಗೆಯ ಮೂಲಕ ಒಂದು ಲಕ್ಷ ಕಿ.ಮೀ.ಗೂ ಅಧಿಕ ದೂರ ಕ್ರಮಿಸಿರುವುದಾಗಿ ತಿಳಿಸುತ್ತಾರೆ. ಗುರುವಾರ ಹುಬ್ಬಳ್ಳಿಗೆ ಆಗಮಿಸಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.