ಕನ್ನಡ ಜ್ಯೋತಿ ರಥಯಾತ್ರೆಗೆ ಗಡಿಭಾಗದಲ್ಲಿ ಆತ್ಮೀಯ ಸ್ವಾಗತ

KannadaprabhaNewsNetwork | Published : Aug 25, 2024 1:51 AM

ಸಾರಾಂಶ

ಮಳವಳ್ಳಿ ಪಟ್ಟಣ ಪ್ರವೇಶಿಸಿದ ಕನ್ನಡ ರಥಕ್ಕೆ ಪುರಸಭೆ ಕಚೇರಿ ಮುಂಭಾಗ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಅವರ ನೇತೃತ್ವದ ಅಧಿಕಾರಿಗಳು ಹಾಗೂ ಕೆಲ ಸದಸ್ಯರು ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಕನ್ನಡ ರಥದೊಂದಿಗೆ ಹೆಜ್ಜೆ ಹಾಕಿದರು.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆ ತಾಲೂಕು ಗಡಿಭಾಗಕ್ಕೆ ಆಗಮಿಸಿದ ವೇಳೆ ತಾಲೂಕು ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.

ಪೂರ್ಣಕುಂಭ ಕಳಸ ಹಾಗೂ ಜಾನಪದ ಕಲಾಮೇಳದೊಂದಿಗೆ ತಹಸೀಲ್ದಾರ್ ಕೆ.ಎನ್.ಲೋಕೇಶ್ ಹಾಗೂ ಅಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಮ್ಮುಖದಲ್ಲಿ ಕನ್ನಡ ಮಾತೆಗೆ ಪೂಜೆ ಮಾಡಿ ಪುಷ್ಪನಮನ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕರ್ನಾಟಕ ಎಂದು ನಾಮಕರಣ ಆಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿ ಕಲೆ ಸಾಹಿತ್ಯವನ್ನು ನಾಡಿನಾಧ್ಯಂತ ಫಸರಿಸುವ ಉದ್ದೇಶದಿಂದ ಕನ್ನಡಜ್ಯೋತಿ ರಥಯಾತ್ರೆ ಹಮ್ಮಿಕೊಂಡು ಕನ್ನಡದ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಲಾಗುತ್ತಿದೆ ಎಂದರು.

ಮಂಡ್ಯದಿಂದ ಆಗಮಿಸಿದ ರಥಯಾತ್ರೆಯನ್ನು ತಾಲೂಕಿನ ನೆಲಮಾಕನಹಳ್ಳಿ ಗ್ರಾಪಂ ಮೂಲಕ ಕನ್ನಡ ಹಬ್ಬದ ಸಂಭ್ರಮದಂತೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ದಾರಿ ಉದ್ದಕ್ಕೂ ಮೆರವಣಿಗೆ ಬಂದ ನಂತರ ಪಟ್ಟಣದ ಅಂಬೇಡ್ಕರ್‌ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ನಂತರ ನಾಗೇಗೌಡನದೊಡ್ಡಿ, ಪಂಡಿತಹಳ್ಳಿ, ಹೊಸಹಳ್ಳಿ ಮೂಲಕ ತೆರಳಿ ಬೆಳಕವಾಡಿಯಲ್ಲಿ ವಾಸ್ತವ್ಯ ಹೂಡಿ ಭಾನುವಾರ ಬೆಳಗ್ಗೆ ಸತ್ಯೆಗಾಲ ಸೇತುವೆ ಸಮೀಪ ಚಾಮರಾಜನಗರ ಜಿಲ್ಲೆಗೆ ಹಸ್ತಾಂತರ ಮಾಡಲಾಗುವುದು ಎಂದರು.

ಈ ವೇಳೆ ತಾಪಂ ಇಒ ಶ್ರೀನಿವಾಸ್, ಬಿಇಒ ಎಸ್.ಚಂದ್ರಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಚೇತನ್ ಕುಮಾರ್, ಕರವೇ ತಾಲೂಕು ಘಟಕದ ಅಧ್ಯಕ್ಷ ಅಪ್ಪೇಗೌಡ, ಮುಖಂಡ ಎನ್.ಎಲ್.ಭರತ್ ರಾಜ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಮುಖಂಡರು ಕನ್ನಡಾಂಬೆಗೆ ಪುಷ್ಪಾರ್ಚೆನೆ ಮಾಡಿದರು.

ನಂತರ ಪಟ್ಟಣ ಪ್ರವೇಶಿಸಿದ ಕನ್ನಡ ರಥಕ್ಕೆ ಪುರಸಭೆ ಕಚೇರಿ ಮುಂಭಾಗ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಅವರ ನೇತೃತ್ವದ ಅಧಿಕಾರಿಗಳು ಹಾಗೂ ಕೆಲ ಸದಸ್ಯರು ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಕನ್ನಡ ರಥದೊಂದಿಗೆ ಹೆಜ್ಜೆ ಹಾಕಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹಲವು ಕನ್ನಡ ಉಪನ್ಯಾಸಕರು ಕನ್ನಡ ನಾಡು-ನುಡಿಯ ಬಗ್ಗೆ ಉಪನ್ಯಾಸ ನೀಡಿದರು. ಪ್ರವಾಸಿ ಮಂದಿರ ಮುಂಭಾಗ ಆಗಮಿಸಿದ ವೇಳೆ ತಹಸೀಲ್ದಾರ್ ಸೇರಿದಂತೆ ಹಲವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ರಸ್ತೆ ಉದ್ದಕ್ಕೂ ಕನ್ನಡದ ಭಾವುಟ ರಾರಾಜಿಸುತ್ತಿದ್ದವು. ಕನ್ನಡದ ಅಭಿಮಾನವನ್ನು ಮೂಡಿಸುವ ಗೀತೆ, ತಮಟೆ ಪೂಜಾಕುಣಿತಗಳು ಗಮನಸೆಳೆಯಿತು.

Share this article