ಕನ್ನಡಪ್ರಭ ವಾರ್ತೆ ಉಡುಪಿ
ಎರಡು ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥೆ, ಬಿಹಾರದ ಮಹಿಳೆ ತನ್ನ ಕುಟುಂಬ ತೊರೆದು ಬೀದಿಪಾಲಾಗಿ ಉಡುಪಿಯಲ್ಲಿ ಪತ್ತೆಯಾಗಿದ್ದರು. ಅವರೀಗ ಮರಳಿ ತಮ್ಮ ಕುಟುಂಬವನ್ನು ಸೇರಿದ್ದು, ಅವರ ಮನೆಯವರ ಭಾವೋದ್ವೇಗ, ಸಂತೋಷ ಮುಗಿಲು ಮುಟ್ಟಿತ್ತು.ಕಳೆದ ವರ್ಷ ಉಡುಪಿ ನಗರದ ಬೀದಿಯಲ್ಲಿ ಅಸಹಾಯಕರಾಗಿ ತಿರುಗಾಡುತ್ತಿದ್ದ ಈ ಮಹಿಳೆಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಮಂಜೇಶ್ವರದ ಶ್ರೀ ಸಾಯಿ ಸೇವಾಶ್ರಮಕ್ಕೆ ದಾಖಲಿಸಿದ್ದರು. ಆಕೆ ಆಶ್ರಮದ ಚಿಕಿತ್ಸೆಯ ಜೊತೆಗೆ ದೈನಂದಿನ ಯೋಗ - ಧ್ಯಾನ, ಕೃಷಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ಆಪ್ತ ಸಮಾಲೋಚನೆಗೆ ಸ್ಪಂದಿಸಿ, ತನ್ನ ಹೆಸರು ರಮಾದೇವಿ ಎಂದೂ, ತನ್ನ ಕುಟುಂಬದ ವಿಳಾಸ ವಿವರಗಳನ್ನು ನೀಡಿದ್ದರು.ಈ ಮಾಹಿತಿಯ ಮೇರೆಗೆ ಆಕೆಯನ್ನು ಮುಂಬೈನ ಶ್ರದ್ಧಾ ಪುನರ್ವಸತಿ ಕೇಂದ್ರ ಕುಟುಂಬಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ರಮಾದೇವಿಯನ್ನು ಬಿಹಾರಕ್ಕೆ ಕಳುಹಿಸಿ ಕುಟುಂಬವನ್ನು ಸೇರಿಸಲಾಗಿದೆ. 2 ವರ್ಷಗಳ ನಂತರ ತಮ್ಮ ತಾಯಿಯನ್ನು ಕಂಡು ಆಕೆಯ ಮಕ್ಕಳು ಹಾಗೂ ಕುಟುಂಬಸ್ಥರು ಭಾವೊದ್ವೇಗದಿಂದ ಕಣ್ಣೀರು ಸುರಿಸಿದ್ದಾರೆ. ಆಕೆಯ ಆರೈಕೆ ಮಾಡಿ, ಕುಟುಂಬವನ್ನು ಸೇರಿಸಿದ ಆಶ್ರಮದ ಮುಖ್ಯಸ್ಥರಾದ ಡಾ. ಉದಯ್ ಕುಮಾರ್ ದಂಪತಿ ಹಾಗೂ ಆಶ್ರಮದ ಸಿಬ್ಬಂದಿಗೆ ವಿಶು ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.ಜಿಲ್ಲಾಡಳಿತ ಸ್ಪಂದಿಸಬೇಕು:ಬೀದಿಯಲ್ಲಿ ತಿರುಗಾಡುವ ಇಂತಹ ಮನೋರೋಗಿಗಳನ್ನು ನಿರ್ಲಕ್ಷ್ಯ ಮಾಡದೇ ಸ್ಪಂದಿಸಿದಲ್ಲಿ ಅವರು ಮರಳಿ ಕುಟುಂಬ ಸೇರುವುದಕ್ಕೆ ಸಾಧ್ಯವಿದೆ. ನಾನು ಉಡುಪಿಯಲ್ಲಿ ರಕ್ಷಿಸಿದ ನೂರಾರು ಮನೋರೋಗಿಗಳಿಗೆ ಮಂಜೇಶ್ವರದ ಶ್ರೀ ಸಾಯಿ ಸೇವಾಶ್ರಮ ಹಾಗೂ ಸ್ನೇಹಾಲಯದಲ್ಲಿ ಚಿಕಿತ್ಸೆ ಪಡೆದು, ಕುಟುಂಬ ಸೇರಿದ ಘಟನೆ ಬಹಳಷ್ಟು ನಡೆದಿವೆ. ಇದಕ್ಕೆ ಅಧಿಕಾರಿಗಳ ಸಹಕಾರ ಬೇಕು. ಕೆಲವೊಮ್ಮೆ 5 ನಿಮಿಷದ ಕಾನೂನು ಪ್ರಕ್ರಿಯೆಗೆ 5 ದಿನ ಕಾಯಬೇಕಾದ ಸಂದರ್ಭ ಬಂದಿದೆ. ಜಿಲ್ಲಾಡಳಿತದ ವರ್ತನೆ ಹಲವು ಬಾರಿ ನೋವು ತಂದಿದೆ. ಇಂತಹ ಮಾನವೀಯ ಕೆಲಸಗಳಿಗೆ ಸರ್ಕಾರಿ ಅಧಿಕಾರಿಗಳು ಸ್ಪಂದಿಸಿದಲ್ಲಿ ಸಮಾಜವೂ ಕೈ ಜೋಡಿಸುತ್ತದೆ ಎಂದು ವಿಶು ಶೆಟ್ಟಿ ಹೇಳಿದ್ದಾರೆ.