ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ಮೃತಪಟ್ಟ ಕಜಕಿಸ್ತಾನದ ಮಹಿಳೆಯೊಬ್ಬಳ ಶವವನ್ನು ಸಂಬಂಧಿಕರು ಪಡೆಯದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತದ ವತಿಯಿಂದ ನಗರದ ಸಿ.ಎಸ್.ಐ. ಚರ್ಚಿನ ದಫನ ಭೂಮಿಯಲ್ಲಿ ಮಂಗಳವಾರ ಅಂತ್ಯಸಂಸ್ಕಾರ ನಡೆಸಲಾಯಿತು.ಸುಲ್ತಾನೆಟ್ ಬೆಕ್ಟೆನೋವಾ (51) ಎಂಬ ಮಹಿಳೆ 2009ರಲ್ಲಿ ಕುಲಿನ್ ಮಹೇಂದ್ರ ಷಾ ಎಂಬರ ಜೊತೆ ವಿವಾಹವಾಗಿದ್ದು, ಷಾ ಅವರು ಮೃತಪಟ್ಟ ಮೇಲೆ ಆಕೆ ತನ್ನ ಅಪ್ರಾಪ್ತ ವಯಸ್ಸಿನ ಮಗಳೊಂದಿಗೆ ಉಡುಪಿಯಲ್ಲಿ ವಾಸಿಸುತ್ತಿದ್ದರು. ಮಹಿಳೆ ಮೃತಪಟ್ಟು 35 ದಿನಗಳ ಬಳಿಕ ಸೋಮವಾರ ಅಂತ್ಯಸಂಸ್ಕಾರ ನಡೆಯಿತು.
ಮೇ 7ರಂದು ಆಕೆ ಸ್ನಾನದ ಕೋಣೆಯಲ್ಲಿ ಕುಸಿದುಬಿದ್ದಿದ್ದರು. ಮಾಹಿತಿ ತಿಳಿದ ಸಮಾಜಸೇವಕ ನಿತ್ಯಾನಂದ ಒಳಕಾಡು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕೆ ಅದಾಗಲೇ ಮೃತಪಟ್ಟಿದ್ದರು. ನಂತರ ನಗರ ಠಾಣೆಯ ಪೊಲೀಸರು ಭಾರತದ ರಾಯಭಾರಿ ಕಚೇರಿಯ ಸಹಕಾರದಿಂದ ಕಜಕಿಸ್ತಾನದಲ್ಲಿರುವ ಆಕೆಯ ಮಗನನ್ನು ಸಂಪರ್ಕಿಸಿದ್ದರು. ಆದರೆ ಆತ ಶವ ಪಡೆಯಲು ಭಾರತಕ್ಕೆ ಬರಲು ಸಾಧ್ಯವಿಲ್ಲ, ಸಿ.ಎಸ್.ಐ ಚರ್ಚಿನಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ವಿನಂತಿಸಿದ್ದ. ಅಷ್ಟರಾಗಲೇ ಆಕೆ ಮೃತಪಟ್ಟು 35 ದಿನಗಳಾಗಿದ್ದವು.ಮಂಗಳವಾರ ನಗರ ಪೊಲೀಸ್ ಠಾಣೆಯ ಎಸ್ಐ ಪುನೀತ್ ಕುಮಾರ್, ತನಿಖಾ ಸಹಾಯಕಿ ಸುಷ್ಮಾ ಹಾಗೂ ಠಾಣೆಯ ಸಿಬ್ಬಂದಿ ಕಾನೂನು ಪ್ರಕ್ರಿಯೆ ನಡೆಸಿದ ಮೇಲೆ, ಚರ್ಚಿನ ಸಭಾಪಾಲಕ ರೆವೆರೆಂಡ್ ಜೋಸ್ ಬೆನೆಡಿಕ್ಟ್ ಅಮ್ಮನ್ನ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಪತಿಯ ಸಮಾಧಿಯ ಬಳಿಯಲ್ಲಿಯೇ ಆಕೆ ಶವವನ್ನು ದಫನ ಮಾಡಲಾಯಿತು.
ವಿಶ್ರಾಂತ ಸಭಾಪಾಲಕ ರೆವೆ ಐಸನ್ ಸುಕುಮಾರ ಪಾಲನ್ನ, ಪಾಸ್ಟರ್ ಅಬ್ರಹಾಂ, ಪಾಸ್ಟರ್ ಜೋಯ್ಸ್ ಕುರಿಯ ಕೋನ್, ಸಮಾಜಸೇವಕ ನಿತ್ಯಾನಂದ ಒಳಕಾಡು, ಉಡುಪಿ ಚರ್ಚಿನ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.