ದೊಡ್ಡಬಳ್ಳಾಪುರ: ತಾಲೂಕಿನ ಆರೂಢಿ ಗ್ರಾಮದಲ್ಲಿ ಬೃಂದಾವನ ಸಂಜೀವಿನಿ ಒಕ್ಕೂಟ, ಗ್ರಾಪಂ, ಸ್ತ್ರೀ ಶಕ್ತಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕೋಡಿ ಮಲ್ಲೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗರಾಜಮ್ಮ ರಾಮಕೃಷ್ಣಪ್ಪ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.ಪಿಡಿಒ ಮಲ್ಲೇಶ್ ಮಾತನಾಡಿ, ಮಹಿಳೆಯು ಸಮಾಜದ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿ ಕ್ಷೇತ್ರದಲ್ಲಿ ಮಹಿಳೆಯು ಗುರುತಿಸಿಕೊಂಡು ಸಮಾಜದ ಪ್ರಗತಿಯ ಪ್ರಮುಖ ಭಾಗವಾಗಿದ್ದಾರೆ ಎಂದು ಹೇಳಿದರು.ಗ್ರಾಪಂ ಮಾಜಿ ಅಧ್ಯಕ್ಷೆ ಜಯಮ್ಮ ಪ್ರಭು ಮಾತನಾಡಿ, ಪ್ರತಿಯೊಬ್ಬ ಮಹಿಳೆಯಲ್ಲಿ ಅಗಾಧವಾದ ಶಕ್ತಿಯಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುವ ಮನೋಸ್ಥೆರ್ಯವನ್ನು ಬೆಳೆಸಿಕೊಳ್ಳಬೇಕು. ಮಹಿಳೆಯರಿಗೆ ಅಗತ್ಯ ಪ್ರೋತ್ಸಾಹ ನೀಡಿದರೆ ಎಂತಹ ಸಾಧನೆಯನ್ನೂ ಮಾಡುತ್ತಾರೆ ಎಂಬುದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಮುಂದಿವೆ ಎಂದರು.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮತ್ತು ಸುರಕ್ಷತೆಗಾಗಿ ಕಾನೂನುಗಳು ಬಿಗಿಯಾಗಬೇಕು. ಇದಕ್ಕೂ ಮುನ್ನ ಇದೇ ತಿಂಗಳ 6ರಂದು ಮಹಿಳೆಯರಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ 55 ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಅನಿತಾಲಕ್ಷ್ಮೀ, ಸದಸ್ಯರಾದ ನವೀನ್ ಕುಮಾರ್, ರಾಧ ಮಂಜುನಾಥ್, ವೆಂಕಟರಮಣಪ್ಪ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸಿದ್ದರಾಮಯ್ಯ, ಅಂಗನವಾಡಿ ಕಾರ್ಯಕರ್ತೆಯರಾದ ಶಕುಂತಲಮ್ಮ, ಸುವರ್ಣಮ್ಮ, ಎನ್‌ಆರ್‌ಎಲ್ಎಂ (ಬೃಂದಾವನ ಸಂಜೀವಿನಿ ಒಕ್ಕೂಟ) ಮೇಲ್ವಿಚಾರಕಿ ಚೈತ್ರ, ವಲಯ ಮೇಲ್ವಿಚಾರಕ ಶ್ರೀನಿವಾಸ್, ಒಕ್ಕೂಟದ ಅಧ್ಯಕ್ಷೆ ವಿಜಯಾಂಭಿಕೆ, ವ್ಯವಸ್ಥಾಪಕಿಯರಾದ ಆಶಾ, ನಳಿನ, ಸಖಿಯರಾದ ಮಂಗಳ, ಪ್ರಫುಲ್ಲ, ಲಕ್ಷ್ಮೀದೇವಮ್ಮ ಮತ್ತಿತರರಿದ್ದರು.10ಕೆಡಿಬಿಪಿ8-
ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.