ಮೈಸೂರು ಬೃಹತ್ ನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವುದು ಹೆಮ್ಮೆಯ ಸಂಗತಿ

KannadaprabhaNewsNetwork | Published : Mar 12, 2025 12:46 AM

ಸಾರಾಂಶ

ರಾಜ್ಯಾಡಳಿತ ವ್ಯವಸ್ಥೆಯ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಂದಾಲೋಚನೆಯಂತೆಯೇ, ಪ್ರಸ್ತುತ ನಾಡಿನ ಹೆಮ್ಮೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿತ್ವ

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಮೈಸೂರು ನಗರ ಎರಡನೇ ಸ್ಥಾನದಲ್ಲಿದೆ. ಇಂತಹ ಸುಸಜ್ಜಿತ ನಗರವನ್ನು ಬೃಹತ್ ನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ರಾಜ್ಯ ಸರ್ಕಾರದ ನಡೆದ ಹೆಮ್ಮೆಯ ಸಂಗತಿ ಎಂದು ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ನಗರ ಪಾಲಿಕೆಯ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ತಿಳಿಸಿದ್ದಾರೆ.

ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿಯ ಫಲವಾಗಿ ಈ ಯೋಜನೆ ತ್ವರಿತವಾಗಿ ಅನುಷ್ಠಾನಕ್ಕೆ ತರಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮುತುವರ್ಜಿ ವಹಿಸಿರುವುದು ಮೈಸೂರಿಗರ ಪಾಲಿಗೆ ಭಾಗ್ಯವೇ ಸರಿ ಎಂದು ಹೇಳಿದ್ದಾರೆ.

ರಾಜ್ಯಾಡಳಿತ ವ್ಯವಸ್ಥೆಯ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಂದಾಲೋಚನೆಯಂತೆಯೇ, ಪ್ರಸ್ತುತ ನಾಡಿನ ಹೆಮ್ಮೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿತ್ವದ ಪರಿಣಾವೇ ಈ ಬೃಹತ್ ಮೈಸೂರು ಮಹಾನಗರಪಾಲಿಕೆ ಯೋಜನೆಯಾಗಿದೆ. ಬೃಹತ್ ನಗರಪಾಲಿಕೆಯಾಗಿ ಮಾಡುವ ಹೊತ್ತಿನಲ್ಲಿ ಅದಕ್ಕೆ ಪೂರಕವಾದ ಎಲ್ಲಾ ಯೋಜನೆಗಳು ಒಂದೇ ಹಂತದಲ್ಲಿ ಎಲ್ಲಾ ಅನುಷ್ಠಾನಗೊಂಡಲ್ಲಿ ಮೈಸೂರು ಸುಸಜ್ಜಿತ‌ನಗರವಾಗುವುದರಲ್ಲಿ ಯಾವುದೇ ರೀತಿಯ ಅನುಮಾನ ಇಲ್ಲ. ಆ ಯೋಜನೆಗಳನ್ನೂ ಕಾರ್ಯಗತಗೊಳಿಸಲು ಮುಖ್ಯಮಂತ್ರಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮೈಸೂರು ನಗರ ಬೃಹತ್ ನಗರಪಾಲಿಕೆ ಆದಲ್ಲಿ ಅದಕ್ಕೆ ಪೂರಕವಾಗಿ ಪೊಲೀಸ್ ವ್ಯವಸ್ಥೆ, ಆರೋಗ್ಯ ಕೇಂದ್ರಗಳು, ಶಾಲೆಗಳು, ಕಸ ವಿಲೇವಾರಿ, ರಸ್ತೆಗಳ ನಿರ್ಮಾಣ, ಸಮರ್ಪಕ ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರಿಗಾಗಿ ಕಾವೇರಿ ಹಾಗೂ ಕಬಿನಿ ನೀರಿನ ಜಾಲ ವಿಸ್ತರಣೆ, ನಗರ ಸಾರಿಗೆ ವ್ಯವಸ್ಥೆ, ಭವಿಷ್ಯದ ದೃಷ್ಟಿಯಿಂದ ಮೆಟ್ರೋ ಯೋಜನೆ ಸೇರಿದಂತೆ ಪೂರಕವಾದ ಯೋಜನೆಗಳನ್ನು ಏಕಕಾಲದಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಅವರು ಕೋರಿದ್ದಾರೆ.

ನಗರದ ಹೊರಭಾಗದಲ್ಲಿರುವ ಹೊಸ ಬಡಾವಣೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸಿಎ ನಿವೇಶನಗಳಿದ್ದು, ಅವುಗಳ ಸಮರ್ಪಕ ಬಳಕೆ ಆಗಬೇಕಿದೆ. ಮಾತ್ರವಲ್ಲ, ಕಂದಾಯ ನಿವೇಶನಗಳಲ್ಲಿ ನೆಲೆಸಿರುವವರ ಬವಣೆಗಳನ್ನೂ ಈಡೇರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ. 2ನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಸಿದ್ದರಾಮಯ್ಯ ಅವರ ಪಾಲಿಗೆ ಬೃಹತ್ ಮೈಸೂರು ಮಹಾನಗರ ಪಾಲಿಕೆ ಯೋಜನೆ ಎಂಬುದು ಕನಸಿನ ಯೋಜನೆ ಆಗಿದ್ದು, ಮೈಸೂರಿನ ಪಾಲಿಗೆ ಹೆಗ್ಗುರುತೇ ಆಗಿದೆ. ಈ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಮೈಸೂರಿಗರು ಸರ್ಕಾರದೊಂದಿಗೆ ಕೈಜೋಡಿಸುವ ಮೂಲಕ ಬೃಹತ್ ಯೋಜನೆಯೊಂದರ ಸಮರ್ಪಕ ಅನುಷ್ಠಾನಕ್ಕೆ ನೆರವಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

Share this article