6 ವರ್ಷಗಳಿಂದ ಬೆಳೆವಿಮೆ ನೀಡದೇ ವಂಚನೆ: ಸುಪ್ರೀತ್ ಆರೋಪ

KannadaprabhaNewsNetwork | Published : Mar 12, 2025 12:46 AM

ಸಾರಾಂಶ

ತಾಲೂಕಿನ ಅಣಜಿ ಗ್ರಾಮದ ಮಾದಿಹಳ್ಳಿ ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಬೆಳೆ ವಿಮೆಗಾಗಿ 2016-17ರಲ್ಲಿ ಹಣ ಪಾವತಿಸಿದ್ದರೂ ಬೆಳೆ ವಿಮೆ ಬಂದಿಲ್ಲ. ಈ ಹಿಂದೆ ಬ್ಯಾಂಕ್‌ ವ್ಯವಸ್ಥಾಪಕ ಹಾಗೂ ವಿಮಾ ಕಂಪನಿಯವರು ಸೇರಿ ಹಗರಣ ನಡೆಸಿರುವ ಶಂಕೆ ಇದೆ ಎಂದು ರೈತ ಕುಟುಂಬದ ಕೆ.ಜಿ.ಸುಪ್ರೀತ್ ಆರೋಪಿಸಿದ್ದಾರೆ.

- ಮಾದಿಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌, ವಿಮಾ ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ತಾಲೂಕಿನ ಅಣಜಿ ಗ್ರಾಮದ ಮಾದಿಹಳ್ಳಿ ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಬೆಳೆ ವಿಮೆಗಾಗಿ 2016-17ರಲ್ಲಿ ಹಣ ಪಾವತಿಸಿದ್ದರೂ ಬೆಳೆ ವಿಮೆ ಬಂದಿಲ್ಲ. ಈ ಹಿಂದೆ ಬ್ಯಾಂಕ್‌ ವ್ಯವಸ್ಥಾಪಕ ಹಾಗೂ ವಿಮಾ ಕಂಪನಿಯವರು ಸೇರಿ ಹಗರಣ ನಡೆಸಿರುವ ಶಂಕೆ ಇದೆ ಎಂದು ರೈತ ಕುಟುಂಬದ ಕೆ.ಜಿ.ಸುಪ್ರೀತ್ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಟಿಯಲ್ಲಿ ಮಾತನಾಡಿದ ಅವರು, ಮಾದಿಹಳ್ಳಿ ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ವ್ಯವಸ್ಥಾಪಕ ಕೆ.ಎಂ.ಶ್ರೀಕಾಂತ ಹಾಗೂ ವಿಮಾ ಕಂಪನಿಯವರು ದೊಡ್ಡ ಹಗರಣ ನಡೆಸಿರುವ ಸಾಧ್ಯತೆ ಇದೆ. ರೈತರಿಗೆ ಮೊದಲು ಅಧಿಕಾರಿಗಳು ಬೆಳೆ ವಿಮೆ ಕೊಡಿಸಬೇಕು ಎಂದರು.

ಅಜ್ಜ ದಿವಂಗತ ಅಜ್ಜನಗೌಡರ, ಚಿಕ್ಕಪ್ಪ ಪ್ರಭುದೇವ 2016-17ರಲ್ಲೇ ಬೆಳೆ ವಿಮೆ ಪಾವತಿಸಿದ್ದಾರೆ. ಬೆಳೆ ವಿಮೆ ಪರಿಹಾರದ ಹಣ ಬಂದಿರಲಿಲ್ಲ. ವಿಮಾ ಕಂಪನಿಗೆ ಕೇಳಿದರೆ ತಮಗೆ ಪ್ರೀಮಿಯಂ ಮೊತ್ತವೇ ಬಂದಿಲ್ಲವೆಂಬ ಹಾರಿಕೆ ಉತ್ತರ ನೀಡಿದ್ದರು. ರೈತರು ತಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ಮಾಡಲಿಲ್ಲ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆಗೆ ಮೊರೆಹೋದಾಗ ಬ್ಯಾಂಕ್‌ಗೆ ವೇದಿಕೆ ನೋಟಿಸ್ ನೀಡಿತ್ತು ಎಂದು ತಿಳಿಸಿದರು.

ನೋಟಿಸ್‌ ನೀಡಿದರೂ ಬ್ಯಾಂಕ್ ವ್ಯವಸ್ಥಾಪಕ ಹಾಜರಾಗಲಿಲ್ಲ. ದಾಖಲೆಗಳನ್ನು ಪರಿಶೀಲಿಸಿ, ಮ್ಯಾನೇಜರ್ ಶ್ರೀಕಾಂತ್‌ ತಪ್ಪಿತಸ್ಥರೆಂದು ಪರಿಹಾರದ ಮೊತ್ತ ನೀಡುವಂತೆ ಆಯೋಗ ಆದೇಶಿಸಿತ್ತು. ಆದರೆ, ವ್ಯವಸ್ಥಾಪಕ ಶ್ರೀಕಾಂತ್ ಅಪೀಲು ಹೋಗಿ, 6 ವರ್ಷವೇ ಕಳೆದಿವೆ. ಇದುವರೆಗೂ ತಮಗೆ ನ್ಯಾಯ ಸಿಕ್ಕಿಲ್ಲ. ಬೆಳೆ ವಿಮೆಯಲ್ಲಿ ಭ್ರಷ್ಟಾಚಾರ ಮಾಡಿ, ರೈತರಿಗೆ ಅನ್ಯಾಯ ಮಾಡಿದ ವ್ಯವಸ್ಥಾಪಕ ಹಾಗೂ ವಿಮಾ ಕಂಪನಿಯಾದ ಯುನಿವರ್ಸಲ್ ಸೋಂಪಿ ಜನರಲ್‌ ಇನ್ಶೂರೆನ್ಸ್‌ ಕಂಪನಿಯವರಿಗೆ ಶಿಕ್ಷೆಯಾಗಬೇಕು ಎಂದು ಸುಪ್ರೀತ್‌ ಒತ್ತಾಯಿಸಿದರು.

- - -

ಬಾಕ್ಸ್‌ * ನೋಟಿಸ್ ತಲುಪಿಲ್ಲವೆಂಬ ನೆಪ ಮೂರು ಕಂತಿನಲ್ಲಿ ಪರಿಹಾರದ ಮೊತ್ತ ₹11,08,221, ₹7,64,290 ಹಾಗೂ ₹1.35 ಲಕ್ಷಗಳು ಹಾಗೂ ಬಡ್ಡಿ ಹಣವಾದ ₹85 ಸಾವಿರ ಪಾವತಿಸುವಂತೆ 2016ರಲ್ಲೇ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆ ಆದೇಶಿಸಿದೆ. ಆದರೆ, ಬ್ಯಾಂಕ್‌ನ ವ್ಯವಸ್ಥಾಪಕ ತಮಗೆ ಗ್ರಾಹಕರ ವೇದಿಕೆ ನೋಟಿಸ್ ತಲುಪಿಲ್ಲವೆಂಬ ನೆಪ ಹೇಳಿಕೊಂಡು, ಹಾಜರಾಗದೇ, ಬೆಂಗಳೂರಿನ ರಾಜ್ಯಮಟ್ಟದ ಗ್ರಾಹಕ ವ್ಯಾಜ್ಯಗಳ ವೇದಿಕೆಗೆ 2018ರಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಅಲ್ಲಿಂದ ಈವರೆಗೂ ವ್ಯಾಜ್ಯ ಬಗೆಹರಿದಿಲ್ಲ. ಇಂದಿಗೂ ಬ್ಯಾಂಕ್ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಸುಪ್ರೀತ್ ಅಳಲು ತೋಡಿಕೊಂಡರು.

- - - -10ಕೆಡಿವಿಜಿ70:

ದಾವಣಗೆರೆಯಲ್ಲಿ ಸೋಮವಾರ ರೈತ ಕುಟುಂಬದ ಕೆ.ಜಿ.ಸುಪ್ರೀತ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article