ಮಹಿಳೆ ಎಂದಿಗೂ ಆತ್ಮಹತ್ಯೆ ದಾರಿ ಹಿಡಿಯಬಾರದು

KannadaprabhaNewsNetwork |  
Published : Mar 20, 2025, 01:16 AM IST
19ಎಚ್ಎಸ್ಎನ್10 : ಚನ್ನರಾಯಪಟ್ಟಣದಲ್ಲಿ ಹೇಮಾವತಿ ಒಕ್ಕಲಿಗ ಮಹಿಳಾ ಮಂಡಳಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಚಿತ್ರನಟಿ ಮಾಳವಿಕಾ ಉದ್ಘಾಟಿಸಿದರು, ಚಿತ್ರನಟಿ ಸೋನುಗೌಡ ಇತರರಿದ್ದರು. | Kannada Prabha

ಸಾರಾಂಶ

ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರ "ಗೃಹಭಂಗ " ಕಾದಂಬರಿಯಲ್ಲಿನ ನಂಜಮ್ಮ ಅನುಭವಿಸುವ ಕಷ್ಟಗಳನ್ನು ನಾವು ಜೀವನದಲ್ಲಿ ಅನುಭವಿಸುತ್ತಿಲ್ಲ. ಆದರೂ ಸಾಕಷ್ಟು ಮಹಿಳೆಯರು ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ತರವಲ್ಲ ಎಂದು ಚಿತ್ರನಟಿ ಮಾಳವಿಕಾ ಅವಿನಾಶ್ ತಿಳಿಸಿದರು. ಜೀವನ ನಡೆಸುವ ಬಗ್ಗೆ ಮಹಾನಗರದಲ್ಲಿ ಸಾಕಷ್ಟು ಮಂದಿ ಮಾರ್ಗದರ್ಶನ ನೀಡುತ್ತಾರೆ, ಇದನ್ನು ಹಣಕೊಟ್ಟು ಕೇಳುತ್ತಾರೆ, ಇದರ ಬದಲಾಗಿ ಭಗವದ್ಗೀತೆ ಓದಿದರೆ ಯಾವ ರೀತಿಯಲ್ಲಿ ಬದುಕಬೇಕು ಎನ್ನುವುದು ತಿಳಿಯುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರ "ಗೃಹಭಂಗ " ಕಾದಂಬರಿಯಲ್ಲಿನ ನಂಜಮ್ಮ ಅನುಭವಿಸುವ ಕಷ್ಟಗಳನ್ನು ನಾವು ಜೀವನದಲ್ಲಿ ಅನುಭವಿಸುತ್ತಿಲ್ಲ. ಆದರೂ ಸಾಕಷ್ಟು ಮಹಿಳೆಯರು ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ತರವಲ್ಲ ಎಂದು ಚಿತ್ರನಟಿ ಮಾಳವಿಕಾ ಅವಿನಾಶ್ ತಿಳಿಸಿದರು.

ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಹೇಮಾವತಿ ಒಕ್ಕಲಿಗ ಮಹಿಳಾ ಮಂಡಳಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತಿ ಎಸ್.ಎಲ್.ಭೈರಪ್ಪ ಅವರ ಜೀವನಕಥೆ ಎಂದು ಹೇಳುವ ಗೃಹಭಂಗದಲ್ಲಿ ಒಂದು ಹೊತ್ತು ಊಟಕ್ಕೆ ಯಾವ ರೀತಿಯಲ್ಲಿ ಕಷ್ಟಪಡುತ್ತಿದ್ದರು, ಪ್ರತಿ ಮನೆಯ ಮಹಿಳೆಯರು ತಮ್ಮ ಮಕ್ಕಳಿಗಾಗಿ ತ್ಯಾಗ ಮಾಡುತ್ತಿದ್ದನ್ನು ಹೇಳಿದ್ದಾರೆ. ಈ ಮಣ್ಣಿನಲ್ಲಿ ಜನ್ಮ ಪಡೆದ ಭೈರಪ್ಪ ಇಲ್ಲಿನ ಜನರ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಇಂತಹ ಕಾದಂಬರಿಯನ್ನು ಈ ತಾಲೂಕಿನವರು ಮಾತ್ರವಲ್ಲ ದೇಶದ ಪ್ರತಿಯೊಬ್ಬರೂ ಓದಬೇಕು, ಆಗ ತಿಳಿಯುತ್ತದೆ ನಾವು ಕಷ್ಟ ಪಡುತ್ತಿರುವುದು ಏನೇನು ಅಲ್ಲ ಎನ್ನುವುದು, ಅಂದು ಊಟಕ್ಕಾಗಿ ಕಷ್ಟ ಪಡುತ್ತಿದ್ದರು ಇಂದು ಎಲ್ಲವೂ ಸಿಗುತ್ತಿದೆ ಆದರೆ ನಮ್ಮಲ್ಲಿ ಹೃದಯ ಶ್ರೀಮಂತಿಕೆ ಕಡಿಮೆಯಾಗಿದೆ ಎಂದರು.

ಜೀವನ ನಡೆಸುವ ಬಗ್ಗೆ ಮಹಾನಗರದಲ್ಲಿ ಸಾಕಷ್ಟು ಮಂದಿ ಮಾರ್ಗದರ್ಶನ ನೀಡುತ್ತಾರೆ, ಇದನ್ನು ಹಣಕೊಟ್ಟು ಕೇಳುತ್ತಾರೆ, ಇದರ ಬದಲಾಗಿ ಭಗವದ್ಗೀತೆ ಓದಿದರೆ ಯಾವ ರೀತಿಯಲ್ಲಿ ಬದುಕಬೇಕು ಎನ್ನುವುದು ತಿಳಿಯುತ್ತದೆ. ಭಗವಾನ್ ಶ್ರೀಕೃಷ್ಣನಿಗಿಂತ ಮಾರ್ಗದರ್ಶನವನ್ನು ಯಾರು ನೀಡಲಾರರು, ಆದರೆ ನಾವು ನಮ್ಮ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಓದಲು ಸಮಯ ಕೊಡುತ್ತಿಲ್ಲ ಹಾಗಾಗಿ ನಮಗೆ ಜೀವನವನ್ನು ಯಾವ ರೀತಿಯಲ್ಲಿ ನಡೆಸಬೇಕು ಎನ್ನುವುದು ಅರ್ಥವಾಗುತ್ತಿಲ್ಲ ಎಂದರು. ಇತ್ತೀಚಿನ ದಿವಸಗಳಲ್ಲಿ ವಿವಾಹವಾಗಿ ವಾರಕ್ಕೆ ವಿಚ್ಛೇಧನ ನೀಡುತ್ತಾರೆ. ಇಂತಹ ಪ್ರಸಂಗಗಳು ಬರಬಾರದು ಎಂದರೆ ಸನಾತನ ಧರ್ಮದ ಪವಿತ್ರ ಗ್ರಂಥ ರಾಮಾಯಣವನ್ನು ಓದಿದರೆ ಅಲ್ಲಿ ಸೀತೆ ಪಟ್ಟ ಕಷ್ಟದ ಮುಂದೆ ನಮ್ಮಗಳ ಕಷ್ಟ ಶೂನ್ಯ, ಸೀತೆ ನಡೆದ ಹಾದಿಯನ್ನು ಶೇ.೧ರಷ್ಟು ಮಾತ್ರ ಮಹಿಳೆಯರು ಅನುಸರಿಸಿದರೆ ದೇಶದ ಪ್ರತಿ ಮನೆ ನಂದಾಗೋಕುಲವಾಗಲಿದೆ ಎಂದು ಹೇಳಿದರು.

ವಿದೇಶಿ ವ್ಯಾಮೋಹ ಬೇಡ:

ವಿದೇಶಿ ವ್ಯಾಮೋಹಕ್ಕೆ ಮಾರುಹೋಗಿ ಮಹಿಳೆಯರನ್ನು ಆಗೌರವದಿಂದ ನೋಡಲಾಗುತ್ತಿದೆ. ಭಾರತೀಯತೆ ಪ್ರತಿ ಮಹಿಳೆಗೆ ಗೌರವ ಕೊಡುವುದನ್ನು ಕಲಿಸುತ್ತದೆ. ಅದೇ ಪರಕೀಯರು ಮಹಿಳೆಯನ್ನು ಒಂದು ಭೋಗದ ವಸ್ತುವಾಗಿ ನೋಡುತ್ತಾರೆ, ಇಲ್ಲಿ ನದಿ, ಭೂಮಿ, ಪರಿಸರ ಹೀಗೆ ಪ್ರತಿಯೊಂದನ್ನು ಮಹಿಳೆಯ ಹೆಸರಿನಲ್ಲಿ ಕರೆಯುತ್ತಾರೆ. ಅಂತಹ ಪವಿತ್ರವಾದ ಈ ನೆಲದ ಸಂಸ್ಕಾರವನ್ನು ಮರೆಯಬಾರದು, ವಿದೇಶಿ ವ್ಯಾಮೋಹಕ್ಕೆ ಯಾರೂ ಮಾರುಹೋಗದೆ ನಮ್ಮ ಸಂಸ್ಕಾರವನ್ನು ಮಕ್ಕಳಿಗೆ ಕಲಿಸೋಣ ಎಂದರು.

ಸಾಮರ್ಥ್ಯ ಅರಿಯಿರಿ:

ಮಹಿಳೆಯರಲ್ಲಿ ಅಗಾಧವಾದ ಶಕ್ತಿ ಇದೆ. ಅದನ್ನು ಅರಿಯದೆ ನಾವು ಗೆರೆ ಹಾಕಿಕೊಂಡು ಕೂರುತ್ತಿದ್ದೇವೆ, ಯಾರೂ ಸಹ ನೀನು ಗೃಹಿಣಿಯಾಗು ಎಂದು ಹೇಳುತ್ತಿಲ್ಲ. ಬಲವಂತ ಮಾಡುತ್ತಿಲ್ಲ. ಆದರೂ ನಾವೇ ಗೃಹಿಣಿಯ ಪಾತ್ರವನ್ನು ಆಯ್ಕೆ ಮಾಡಿಕೊಂಡು ಕುಟುಂಬ ನಿಭಾಯಿಸುತ್ತಿದ್ದೇವೆ. ನಮ್ಮ ಮೌಲ್ಯವನ್ನು ಅರಿತು ಸಾಮರ್ಥ್ಯಕ್ಕೆ ತಕ್ಕ ಕೆಲಸ ಮಾಡಬೇಕು. ಸಮಾಜಕ್ಕೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.

ದೇಶ ರಕ್ಷಣೆಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ. ಒನಕೆ ಓಬವ್ವ, ಝಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರರಾಣಿ ಚನ್ನಮ್ಮ ಅವರು ತಮ್ಮ ನಾಡ ರಕ್ಷಣೆಗಾಗಿ ಪುರಷರೊಂದಿಗೆ ಹೋರಾಟ ಮಾಡಿದ್ದಾರೆ. ಇದೇ ಹಾದಿಯಲ್ಲಿ ನವಯುಗದ ಮಹಿಳೆಯರು ಸಾಗಬೇಕು ಎಂದು ಪ್ರಧಾನಿ ಮೋದಿ ವಾಯಪಡೆ, ನೌಕಾಪಡೆ ಹಾಗೂ ಸೇನೆಯನ್ನು ಮುನ್ನೆಡೆಸಲು ಅವಕಾಶ ನೀಡಿದ್ದು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.ಚಿತ್ರನಟಿ ಸೋನುಗೌಡ ಮಾತನಾಡಿ, ತಾಯಿ ಎಲ್ಲವನ್ನು ಕೊಡುತ್ತಾಳೆ. ಆಕೆ ತ್ಯಾಗ ಹಾಗೂ ಬಲಿದಾನಕ್ಕೂ ಸಿದ್ಧವಾಗಿರುತ್ತಾರೆ. ಇಂತಹ ತಾಯಿಯಾಗಿ ಜನ್ಮ ಪಡೆದ ನಾವುಗಳು ಪುಣ್ಯವಂತರು. ಯಾರಿಗೂ ಹೆಣ್ಣು ಮಗುವಾದರೆ ಅಂಜಿಕೆ ಬೇಡ. ಪ್ರತಿ ಮನೆಯ ಕಷ್ಟಕ್ಕೆ ಮರುಗುವುದು ಹೆಣ್ಣು. ಹೆಣ್ಣು ಹೆಣ್ಣಿಗೆ ಶತ್ರು ಎನ್ನುವ ಕಾಲ ಬದಲಾಗಿದೆ. ಹೆಣ್ಣು ಜೀವನ ಮಾರ್ಗದರ್ಶಕಿಯಾಗಿ ಬದಲಾಗಿದ್ದಾಳೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಕೆ.ಕುಸುಮಾರಾಣಿ ಮಾತನಾಡಿ, ಮಹಿಳೆ ದೇಶದಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ನಾವು ಹಕ್ಕುಗಳನ್ನು ಕೇಳುವುದಕ್ಕೆ ಮಾತ್ರ ಸೀಮಿತವಾಗದೆ ಕರ್ತವ್ಯವನ್ನು ಮಾಡಬೇಕು, ಪ್ರತಿ ಮನೆಯಲ್ಲಿ ಮೊದಲು ಮಹಿಳೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ನಿಮ್ಮ ಆರೋಗ್ಯ ಕೆಟ್ಟರೆ ಇಡೀ ಕುಟುಂಬದ ಆನಾರೋಗ್ಯದಿಂದ ಬಳಲುತ್ತದೆ ಎನ್ನುವುದನ್ನು ಮರೆಯಬಾರದು ಎಂದರು.

ಕಾರ್ಯಕ್ರಮದಲ್ಲಿ ಹೇಮಾವತಿ ಮಹಿಳಾ ಮಂಡಳಿ ಗೌರವ ಅಧ್ಯಕ್ಷೆ ಕುಸುಮಾ ಬಾಲಕೃಷ್ಣ, ಅಧ್ಯಕ್ಷೆ ಮೀನಾ ರಾಜಶೇಖರ್, ಖಜಾಂಚಿ ಮಮತಾ ಮಂಜೇಗೌಡ, ನಿರ್ದೇಶಕಿಯರಾದ ಗಿತಾಶ್ರೀ, ಜಯಮ್ಮ ಮಂಜಪ್ಪ, ನಿರ್ಮಲಾಪ್ರಕಾಶ್, ಹೇಮಾಶಂಕರ್, ಭಾಗ್ಯ ಚಂದ್ರಪ್ಪ, ವೀಣಾಮಂಜಣ್ಣ, ನಾಗರತ್ನ ಶೇಖರ್, ಕಲ್ಪನಾ ಸತ್ತಿಗೌಡ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''