ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಸನ್ಮಾನ
ಲಿಂಗಾಪುರ ಗ್ರಾಮದ ಎಂ.ಎಸ್.ರಜನಿ ಎಂಬ ಮಹಿಳೆ ಏಕಾಂಗಿಯಾಗಿ ಹೆಚ್ಚು ಪ್ರಚಾರವಿಲ್ಲದೆ ಕೋಳಿ ಫಾರಂ, ತೋಟ ನಿರ್ಮಿಸಿ ಕೃಷಿ ಸಾಧನೆ ಮಾಡಿದ್ದು ಅವರನ್ನು ಜೇಸಿ ಸಂಸ್ಥೆಯಿಂದ ಸನ್ಮಾನಿಸಲಾಗುತ್ತಿದೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ. ಗೌಡ ತಿಳಿಸಿದರು.
ಮಂಗಳವಾರ ಲಿಂಗಾಪುರ ಗ್ರಾಮಕ್ಕೆ ತೆರಳಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಪ್ರಗತಿ ಪರ ಕೃಷಿಕ ಮಹಿಳೆ ಎಂ.ಎಸ್.ರಜನಿ ಅವರನ್ನು ಸನ್ಮಾನಿಸಿ ಮಾತನಾಡಿದರು. ರಜನಿ ಅವರು 10 ಸಾವಿರ ಕೋಳಿ ಮರಿಗಳನ್ನು ಸಾಕಿದ್ದಾರೆ. ತಮ್ಮ ತೋಟಗಳಿಗೆ ಸಾವಯವ ಗೊಬ್ಬರ ಬಳಸಿ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಅವರ ಸಾಧನೆಯನ್ನು ಜೇಸಿ ಸಂಸ್ಥೆ ಗುರುತಿಸಿ ಸನ್ಮಾನಿಸುತ್ತಿದೆ ಎಂದರು.ಜೇಸಿ ಸಂಸ್ಥೆ ಪೂರ್ವಾಧ್ಯಕ್ಷ ಅಭಿನವ ಗಿರಿರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆ ಸಾಧನೆಯನ್ನು ಜೇಸಿ ಸಂಸ್ಥೆ ಗುರುತಿಸಿದೆ. ಅವರು ತಮ್ಮ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆದು ಆರ್ಥಿಕವಾಗಿ ಲಾಭ ಪಡೆದಿದ್ದಾರೆ ಎಂದರು. ಜೇಸಿ ನಿರ್ದೇಶಕ ಹೊನ್ನೇಕೊಡಿಗೆ ಎಲ್ದೋ ಮಾತನಾಡಿ, ಲಿಂಗಾಪುರದ ಕೃಷಿಕ ಮಹಿಳೆ ಎಂ.ಎಸ್.ರಜನಿ ಸ್ವಾವಲಂಭಿಯಾಗಿ ಹೇಗೆ ಬದುಕಬಹುದು ಎಂಬುದನ್ನು ತೋರಿಸಿದ್ದಾರೆ. ತೋಟವನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಇತರ ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದರು.