ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಮಹಾಸಭಾದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಶಿಲ್ಪಕಲೆಯೇ ಇಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಶಿಲ್ಪಕಲೆ ಭಗವಂತ ನಮಗೆ ನೀಡಿದ ವರ. ಜಕಣಾಚಾರಿಯಂತಹ ಮಹಾನ್ ಶಿಲ್ಪಿಯನ್ನು ನೀಡಿದ ಅವರ ತಾಯಿಗೆ ನಮ್ಮ ನಮನಗಳು. ನಮ್ಮದು ಶಿಲ್ಪಕಲೆ, ಸಾಹಿತ್ಯ, ಭವ್ಯ ಸಾಂಸ್ಕೃತಿಕ ನೆಲಗಟ್ಟಿನ ನಾಡು. ಅನೇಕ ಸಾಧು-ಸಂತರು, ದಾರ್ಶನಿಕರು ಭವ್ಯವಾದ ಭಾರತ ದೇಶ ಕಟ್ಟಲು ತಮ್ಮನ್ನು ತಾವೇ ಧಾರೆ ಎರೆದುಕೊಂಡಿದ್ದು, ಅವರನ್ನೆಲ್ಲ ನಾವು ಸದಾ ಸ್ಮರಿಸಬೇಕು ಎಂದರು.
ಬೇಲೂರು, ಹಳೇಬೀಡು, ಸೋಮನಾಥಪುರ, ಶೃಂಗೇರಿ, ಬಾದಾಮಿ, ಬನವಾಸಿ ಹೀಗೆ ರಾಜ್ಯದೆಲ್ಲೆಡೆ ವಿಶೇಷ ಶಿಲ್ಪಕಲೆಗಳ ಸುಂದರ ಇತಿಹಾಸವನ್ನು ನಾವು ಹೊಂದಿದ್ದೇವೆ ಎಂದರು.ನಗರದ ಪ್ಲೈಓವರ್ ಅಥವಾ ಯಾವುದಾದರೂ ಮುಖ್ಯ ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರಿಗಳ ಹೆಸರನ್ನು ನಾಮಕರಣ ಮಾಡಬೇಕೆಂದು ಸಮಾಜದವರು ಮನವಿ ಮಾಡಿದ್ದೀರ. ಅಮರಶಿಲ್ಪಿಗಳ ಹೆಸರನ್ನು ನಾಮಕರಣ ಮಾಡುವುದು ನಮ್ಮ ಕರ್ತವ್ಯ ಕೂಡ ಆಗಿದೆ. ಇಲಾಖೆಯಿಂದ ಒಂದು ಪ್ರಸ್ತಾವನೆಯನ್ನು ಸಲ್ಲಿಸಿರಿ, ಖಂಡಿತವಾಗಿಯೂ ಅವರ ಹೆಸರನ್ನು ನಗರದ ಆಯಕಟ್ಟಿನ ಜಾಗಕ್ಕೆ ನಾಮಕರಣ ಮಾಡಲು ಸಹಕರಿಸುವುದಾಗಿ ಭರವಸೆ ನೀಡಿದರು.
ರಾಣೆಬೆನ್ನೂರಿನ ಶ್ರೀ ವಿಶ್ವವಿಭು ರೇಕಿ ಧ್ಯಾನಪೀಠದ ಮೌನೇಶ್ವರ ಆಚಾರ್ಯ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವಿಶ್ವಕರ್ಮ ಪರಂಪರೆ ಪ್ರತಿಭಾವಂತರ, ತಂತ್ರಜ್ಞಾನರ, ಪಂಚವೇದದ, ಪಂಚ ಶಕ್ತಿ, ಪಂಚ ವಿಜ್ಞಾನಗಳ ಪರಂಪರೆ ಹೊಂದಿದೆ. ಶಿಲ್ಪಗಳ ರಚನೆಯಿಂದ ಸೌಂದರ್ಯದ ಬೀಡು ಮತ್ತು ಭಕ್ತಿಯ ನೆಲೆಯಾಗಿ ಈ ನಾಡನ್ನು ರೂಪಿಸಿದೆ ಎಂದರು.
ಜಿಲ್ಲಾ ವಿಶ್ವಕರ್ಮ ಮಹಾಸಭಾದ ಗೌರವಾಧ್ಯಕ್ಷ ಸತ್ಯನಾರಾಯಣ, ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಅಗರದಹಳ್ಳಿ ನಿರಂಜನಮೂರ್ತಿ, ವಿಶ್ವಕರ್ಮ ಸಮಾಜದ ಅನ್ನಪೂರ್ಣ ಕಾಳಾಚಾರ್, ರಮೇಶ್, ಶ್ರೀನಿವಾಸಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ , ಸಮಾಜದ ಮುಖಂಡರು ಪಾಲ್ಗೊಂಡಿದ್ದರು.