ಸಾಮಾಜಿಕ ತುರ್ತು ಸಂದರ್ಭದಲ್ಲಿ ಮೌನಕ್ಕೆ ಜಾರುವ ಸಾಹಿತಿ ಅಪಾಯಕಾರಿ: ಎಂ.ವಿ.ಪ್ರತಿಭಾ

KannadaprabhaNewsNetwork |  
Published : Jun 17, 2024, 01:42 AM IST
ಆರು ಲಘು ನಾಟಕಕೃತಿ ಲೋಕಾರ್ಪಣೆ ಮಾಡಲಾಯಿತು. | Kannada Prabha

ಸಾರಾಂಶ

ಸಾಗರದಲ್ಲಿ ಸಾಹಿತಿ ಅ.ರಾ.ಶ್ರೀನಿವಾಸರ ಗುಚ್ಛ, ಆರು ಲಘು ನಾಟಕಕೃತಿಯನ್ನು ರಂಗಕರ್ಮಿ ಎಂ.ವಿ.ಪ್ರತಿಭಾ ಲೋಕಾರ್ಪಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ನೇರ ನಿಷ್ಠುರತೆ ಹೊಂದಬೇಕಾದ ಸಾಮಾಜಿಕ ತುರ್ತು ಸಂದರ್ಭದಲ್ಲಿ ಹೆಚ್ಚಿನ ಸಾಹಿತಿಗಳು ಮೌನಕ್ಕೆ ಜಾರುವ ಮನಸ್ಥಿತಿ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ರಂಗಕರ್ಮಿ ಎಂ.ವಿ.ಪ್ರತಿಭಾ ಅಭಿಪ್ರಾಯಪಟ್ಟರು.

ಇಲ್ಲಿನ ಅಂತರಂಗ ಪ್ರಕಾಶನದವರು ಪ್ರಕಟಿಸಿರುವ ಅ.ರಾ.ಶ್ರೀನಿವಾಸ ಅವರ ಗುಚ್ಛ, ಆರು ಲಘು ನಾಟಕಗಳು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಶ್ರೀನಿವಾಸ ಅವರ ಕೃತಿಗಳು ಸಮಾಜದ ಸಾಕ್ಷಿಪ್ರಜ್ಞೆಯನ್ನು ಎತ್ತಿ ತೋರಿಸುತ್ತದೆ. ಮುಂದಿನ ತಲೆಮಾರಿಗೆ ಅಂತಹ ಜವಾಬ್ದಾರಿಯನ್ನು ಕೊಡಬೇಕಾದ್ದು ನಮ್ಮ ಕರ್ತವ್ಯ ಎಂದರು.

ಪತ್ರಕರ್ತರು ಅವರ ದೈನಂದಿನ ಸುದ್ದಿ ಸಂಬಂಧಿತ ಕಾರ್ಯದಲ್ಲಿ ತೊಡಗಿಕೊಂಡು ಒತ್ತಡದಲ್ಲೇ ಬದುಕುವುದರಿಂದ ತಮ್ಮೊಳಗಿನ ಸಾಹಿತಿಯನ್ನು ಕಾಪಾಡಿ ಕೊಳ್ಳುವುದು ಕಷ್ಟ. ಆದರೆ ಅ.ರಾ.ಶ್ರೀನಿವಾಸ್ ಅವರು ಇದಕ್ಕೆ ವ್ಯತಿರಿಕ್ತವಾಗಿ ವೈಚಾರಿಕತೆಯ ಕತೆ, ಕಾದಂಬರಿ ಮೊದಲಾದ ಸಾಹಿತ್ಯ ಕೃತಿಗಳನ್ನು ರಚಿಸಿ ಲೇಖಕ ಸಮಾಜದ ಪ್ರತಿಧ್ವನಿ ಎನ್ನುವುದನ್ನು ಹೇಳಿದ್ದಾರೆ ಎಂದು ಹೇಳಿದರು.

ಆರು ಲಘು ನಾಟಕ ಕೃತಿ ಕುರಿತು ಸಾಹಿತಿ ಜಯಪ್ರಕಾಶ ಮಾವಿನಕುಳಿ ಮಾತನಾಡಿ, ಚಿಕ್ಕಚಿಕ್ಕ ವಸ್ತು, ಸನ್ನಿವೇಶಗಳನ್ನು ಒಳಗೊಂಡಿರುವ ಸ್ಕಿಟ್ ಮಾದರಿಯ ಕೃತಿಯಲ್ಲಿ ಲೇಖಕರ ಅಂತರಂಗದ ದುಗುಡ, ದುಮ್ಮಾನಗಳು ಹಾಸುಹೊಕ್ಕಾಗಿದೆ. ಆದ್ದರಿಂದಲೇ ಕೃತಿಯು ಯಾವುದೇ ರೂಪಕ, ಸಂಕೇತಗಳ ಮೊರೆ ಹೋಗದೆ, ಇದ್ದಿದ್ದನ್ನು ಇದ್ದಂತೆ ನೇರವಾಗಿ ವಿಷಯ ಮಂಡನೆಗೆ ಬದ್ಧವಾಗಿದೆ ಎಂದರು.

ಇಲ್ಲಿನ ೧೯೭೫ರ ತುರ್ತುಪರಿಸ್ಥಿತಿಯ ಕುರಿತ ಧ್ವಜಾರೋಹಣ ನಾಟಕದಲ್ಲಿ ಒಂದಲ್ಲಾ ಒಂದು ದಿನ ಸರ್ವಾಧಿಕಾರಿಯೂ ಪ್ರತಿಭಟನೆಗೆ ಮಣಿಯಲೇಬೇಕು ಎನ್ನುವ ಮಾತು ಯಾವತ್ತಿಗೂ ಪ್ರಸ್ತುತತೆ ಪಡೆದುಕೊಂಡಿದೆ. ಪ್ರೇಕ್ಷಕರನ್ನೇ ಪಾತ್ರಧಾರಿಗಳನ್ನಾಗಿ ತೋರಿಸುವುದು, ಸಾಂಸ್ಕೃತಿಕ ಲೋಕದ ಡಂಬಾಚಾರಗಳನ್ನು ವ್ಯಂಗ್ಯ ವಾಗಿ ಟೀಕಿಸುವ, ಓದುಗರನ್ನು ವೈಚಾರಿಕತೆಯೆಡೆಗೆ ಕೊಂಡೊಯ್ಯುವ ಲೇಖಕರ ಕಲೆಗಾರಿಕೆ ನಾಟಕದ ಕುತೂಹಲಕಾರಿ ವಿಷಯವಾಗಿದೆ ಎಂದು ವಿವರಿಸಿದರು.

ಇತ್ತೀಚಿನ ವರ್ಷದಲ್ಲಿ ಸಹೃದಯ ಓದುಗರನ್ನು, ಮಾತು ಕೇಳುವವರನ್ನು ಕಳೆದುಕೊಳ್ಳುತ್ತಿದ್ದೇವೆ. ಇದರಿಂದ ಸಾಂಸ್ಕೃತಿಕ, ಸಾಹಿತ್ಯಿಕ ಲೋಕಕ್ಕೆ ತೀವ್ರ ಹಿನ್ನಡೆಯಾಗಿದ್ದು, ಎಡ-ಬಲದಾಚೆಗೂ ವೇದಿಕೆ ಕಾರ್ಯಕ್ರಮದಲ್ಲಿ ಮಾತು ಕೇಳುವ ವ್ಯವಧಾನ ಬೆಳೆಸಿಕೊಳ್ಳಬೇಕಿದೆ. ತಾಲೂಕು ಮಟ್ಟದಲ್ಲಿ ಸಾಹಿತ್ಯ ವೃದ್ಧಿಗೆ ಸಾಕಷ್ಟು ಅವಕಾಶವಿದ್ದು, ಯಾರೇ ಬಂದರೂ ಅವರ ಮಾತು ಕೇಳುವ ಸಹೃದಯರನ್ನು ಕಟ್ಟಿಕೊಳ್ಳಬೇಕಾದ್ದು ಇಂದಿನ ಅಗತ್ಯ ಎಂದು ಪ್ರತಿಪಾದಿಸಿದರು.

ಗುಚ್ಛ ಪುಸ್ತಕದ ಕುರಿತು ಸಹಕಾರಿ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಜಯಪ್ರಕಾಶ ತಲವಾಟ ಮಾತನಾಡಿದರು. ಅ.ರಾ.ಲಂಬೋದರ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಅ.ರಾ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಸ್ವಾಗತಿಸಿದರು. ಪರಮೇಶ್ವರ ದೂಗೂರು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!