ಕಾಸ್ಮೊಸ್ ಹೂ ಬೆಳೆದ ಯುವ ರೈತ

KannadaprabhaNewsNetwork |  
Published : Dec 20, 2024, 12:45 AM IST
ಪೋಟೊ18ಕೆಎಸಟಿ1: ಕುಷ್ಟಗಿ ತಾಲೂಕಿನ ಗುಡಿಕಲಕೇರಿ ಗ್ರಾಮದ ಯುವ ರೈತ ಮುತ್ತಣ್ಣ ಬಲಕುಂದಿ ಅವರು ತೋಟದಲ್ಲಿ ಕಾಸ್ಮೋಸ್ ಹೂಗಳನ್ನು ಬೆಳೆಯುತ್ತಿರುವದು. | Kannada Prabha

ಸಾರಾಂಶ

ತಾಲೂಕಿನ ಗುಡಿಕಲಕೇರಿ ಗ್ರಾಮದ ಯುವ ರೈತ ಒಂದು ಎಕರೆ ಜಮೀನಿನಲ್ಲಿ ಕಾಸ್ಮೊಸ್ ಹೂ ಬೆಳೆಯುವ ಮೂಲಕ ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದಾನೆ.

ದಾರಿಹೋಕರ ಆಕರ್ಷಿಸುವ ಜಮೀನು । ವಿಭಿನ್ನ ಪ್ರಯತ್ನ । ಉತ್ತಮ ಆದಾಯದ ನಿರೀಕ್ಷೆಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ಗುಡಿಕಲಕೇರಿ ಗ್ರಾಮದ ಯುವ ರೈತ ಒಂದು ಎಕರೆ ಜಮೀನಿನಲ್ಲಿ ಕಾಸ್ಮೊಸ್ ಹೂ ಬೆಳೆಯುವ ಮೂಲಕ ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದಾನೆ.

ಮುತ್ತಣ್ಣ ನರಸಪ್ಪ ಬಲಕುಂದಿ ಎಂಬ ಯುವ ರೈತ ತಮ್ಮ ಒಂದು ಎಕರೆಯ ಭೂಮಿಯಲ್ಲಿ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳುವ ಮೂಲಕ ಕಾಸ್ಮೊಸ್ ಎಂಬ ಹೂವು ಬೆಳೆದಿದ್ದು ಜಮೀನು ಕಲರ್‌ಫುಲ್ ಆಗಿ ಕಾಣುತ್ತಿದೆ.

ಈ ಜಮೀನಿನ ತುಂಬಾ ಕೆಂಪು, ಬಿಳಿ, ಹಳದಿ, ನೀಲಿ ಸೇರಿದಂತೆ ಇತರೆ ಬಣ್ಣ ಬಣ್ಣದ ಹೂವುಗಳು ಬೆಳೆದು ನಿಂತು ದಾರಿಹೋಕರನ್ನು ತನ್ನತ್ತ ಆಕರ್ಷಿಸುತ್ತಿದೆ. ದಾರಿಹೋಕರು ಈ ಜಮೀನಿಗೆ ಭೇಟಿ ನೀಡಿ ಹೂವುಗಳ ಜೊತೆಯಲ್ಲಿ ಫೋಟೋ ಶೂಟ್ ಮಾಡುವುದು, ವಿಡಿಯೋ ಚಿತ್ರಕರಣ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಕಾಸ್ಮೊಸ್ ಹೂ ಬೆಳೆಯುವ ಮೂಲಕ ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ.

ಮುತ್ತಣ್ಣ ಈ ಮೊದಲು ಎಲ್ಲರಂತೆ ಮೆಕ್ಕೆಜೋಳ, ಹತ್ತಿ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರ ಬೆಳೆ ಬೆಳೆಯುತ್ತಿದ್ದರು. ಏನಾದರೂ ಒಂದು ಹೊಸತನ ಮಾಡಬೇಕು ಅಂದುಕೊಂಡು ಈ ವರ್ಷದ ಹಿಂಗಾರು ಹಂಗಾಮಿಗೆ ಕಾಸ್ಮೊಸ್ ಹೂ ಬೆಳೆದು, ಬೀಜೋತ್ಪಾದನೆ ಮಾಡುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಫಸಲು ಸಹಿತ ಉತ್ತಮವಾಗಿ ಬರುತ್ತಿದ್ದು, ಲಾಭದ ನಿರೀಕ್ಷೆಯಲ್ಲಿದ್ದಾರೆ.

ಅಕ್ಟೋಬರ್ ಮೊದಲನೇ ವಾರದಲ್ಲಿ ಮೊದಲು ಜಮೀನನ್ನು ಹದಗೊಳಿಸಿ ನಂತರ ನೀರು ಹಾಯಿಸಿ ಒಂದು ಸಾಲಿನಿಂದ ಒಂದು ಸಾಲಿಗೆ ಮೂರು ಅಡಿ ಅಂತರದಲ್ಲಿ ಬದುವು ನಿರ್ಮಾಣ ಮಾಡಿ. ಬದುಗಳ ಮಧ್ಯಭಾಗದಲ್ಲಿ ಬೀಜದಿಂದ ಬೀಜಕ್ಕೆ ಒಂದು ಅಡಿ ಅಂತರದಲ್ಲಿ ಬೀಜ ನಾಟಿ ಮಾಡಿದ್ದಾರೆ. ಪ್ರಸ್ತುತ ಈಗ ಜಮೀನು ತುಂಬಾ ಹೂ ಬಿಟ್ಟು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಡ್ರಿಪ್ ಮೂಲಕ ಹನಿ ನೀರಾವರಿ ಪದ್ದತಿ ಅಳವಡಿಸಲಾಗಿದೆ. ಜಮೀನು ಹದಗೊಳಿಸುವುದು. ಬಿತ್ತನೆ ಬೀಜ ಸೇರಿದಂತೆ ಸುಮಾರು ₹25 ಸಾವಿರ ಖರ್ಚು ಮಾಡಲಾಗಿದೆ. ಒಂದು ಎಕರೆಗೆ ಎರಡು ಕೆಜಿ ಬೀಜ ಬಿತ್ತನೆ ಮಾಡಲಾಗಿದೆ. ಅಂದಾಜು 4 ಕ್ವಿಂಟಲ್ ಬೀಜ ಉತ್ಪಾದನೆಯಾಗುವ ಸಾಧ್ಯತೆ ಇದೆ. ಬೀಜ ಒಂದು ಕ್ವಿಂಟಲ್‌ಗೆ ₹35 ಸಾವಿರದಂತೆ ಖರೀದಿಸಲಾಗುತ್ತದೆ.

ಮೊದಲು ನಾನೂ ಸಹ ಎಲ್ಲರಂತೆ ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆಯುತ್ತಿದ್ದೆ. ಈ ವರ್ಷ ಗಜೇಂದ್ರಗಡದ ಏಜೆನ್ಸಿಯೊಂದರ ಮೂಲಕ ಕಾಸ್ಮೊಸ್ ಹೂ ಬೆಳೆದಿದ್ದೇನೆ. ಇದರಲ್ಲಿ ಖರ್ಚು ಕಡಿಮೆ ಅಧಿಕ ಲಾಭ, ಈಗಾಗಲೇ ಹೂ ಬಿಟ್ಟಿದ್ದು. ಇನ್ನೊಂದು ವಾರದಲ್ಲಿ ಕಟಾವಿಗೆ ಬರುವ ಸಾಧ್ಯತೆ ಇದೆ. ಅಂದಾಜು ₹ 1 ಲಕ್ಷಕ್ಕೂ ಅಧಿಕ ಲಾಭದ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ ಮುತ್ತಣ್ಣ ಬಲಕುಂದಿ

.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ