ಕನ್ನಡಪ್ರಭ ವಾರ್ತೆ ಮಡಿಕೇರಿ
ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನಾಭರಣ ಇಟ್ಟು ಸಾಲ ಪಡೆಯಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿದ್ದ ಮಾಸ್ಟರ್ ಮೈಂಡ್ ಸೇರಿದಂತೆ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿ ಮಡಿಕೇರಿ ಮುಖ್ಯ ಶಾಖೆಯಲ್ಲಿ ಡಿ.4ರಂದು ಮೊಹಮ್ಮದ್ ರಿಜ್ವಾನ್. ಕೆ.ಎ 8 ಚಿನ್ನದ ಬಳೆಗಳನ್ನು ಅಡಮಾನ ಮಾಡಿ ಸಾಲ ಪಡೆದುಕೊಳ್ಳುವ ಸಂದರ್ಭದಲ್ಲಿ ಆಭರಣವನ್ನು ಪರಿಶೀಲಿಸಿದಾಗ ನಕಲಿ ಆಭರಣ ಎಂದು ತಿಳಿದುಬಂದಿದೆ.ಇದಲ್ಲದೆ ಎಮ್ಮೆಮಾಡು ನಿವಾಸಿಗಳಾದ ರಿಯಾಜ್, ಖತೀಜಾ ಮತ್ತು ಮಹಮ್ಮದ್ ಅನೀಫ್, ಕುಂಜಿಲ ಗ್ರಾಮದ ನಿವಾಸಿಗಳಾದ ಅಬ್ದುಲ್ ನಾಸೀರ್, ಮೂಸಾ ಮತ್ತು ಹಂಸ ಎಂಬುವವರು ಮಡಿಕೇರಿ, ಭಾಗಮಂಡಲ, ವಿರಾಜಪೇಟೆ, ಕಡಂಗ ಗಳಲ್ಲಿನ ಕೆಡಿಸಿಸಿ ಬ್ಯಾಂಕ್, ಮಡಿಕೇರಿಯ ಮುತ್ತೂಟ್ ಫಿನ್ ಭಾಗಮಂಡಲದ ವಿಎಸ್ಎಸ್ಎನ್ ಬ್ಯಾಂಕ್‌ಗಳಲ್ಲಿ ಒಟ್ಟು 625 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಅಡಮಾನ ಮಾಡಿ ಒಟ್ಟು 34, 95, 016 ರು. ಹಣವನ್ನು ಸಾಲವಾಗಿ ಪಡೆದಿರುತ್ತಾರೆ.
ಪ್ರಕರಣದ ವಿಚಾರಣೆ ಸಂದರ್ಭ ಕೇರಳ ರಾಜ್ಯ ಮಲ್ಲಪುರಂ ಜಿಲ್ಲೆ ನಿವಾಸಿ ನವಾಜ್, 47 ವರ್ಷ ಎಂಬಾತನು ನಕಲಿ ಚಿನ್ನವನ್ನು ನೀಡಿರುವುದು ಕಂಡುಬಂದಿರುತ್ತದೆ ಎಂದು ತಿಳಿಸಿದರು.ತನಿಖೆಯಲ್ಲಿ ಈ ಕೃತ್ಯದ ಮಾಸ್ಟರ್ ಮೈಂಡ್ ಕೇರಳ ರಾಜ್ಯದ ಎರ್ನಕುಲಂ ಜಿಲ್ಲೆಯ ಮೊಹಮ್ಮದ್ ಕುಂಞ(48), ಈತನು ಪ್ರದೀಪ್(60) ವರ್ಷ ಎಂಬಾತನಿಗೆ ಹಣವನ್ನು ನೀಡಿ ನಕಲಿ ಚಿನ್ನ ಲೇಪಿತ ಆಭರಣಗಳನ್ನು ತಯಾರಿಸಿರುವುದು ಕಂಡಬಂದಿದೆ.
ಮಾಸ್ಟರ್ ಮೈಂಡ್ ಮೊಹಮ್ಮದ್ ಕುಂಞ ಈತನಿಂದ ಮಧ್ಯವರ್ತಿಯಾದ ನಿಶಾದ್ ಎಂಬಾತನು ನಕಲಿ ಚಿನ್ನವನ್ನು ಪಡೆದು ನವಾಜ್ ಎಂಬಾತನಿಗೆ ನೀಡಿರುವುದು ತನಿಖೆ ಸಂದರ್ಭ ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು.ಪ್ರದೀಪ್ ವಿರುದ್ಧ 2024 ನೇ ಸಾಲಿನಲ್ಲಿ 3 ಪ್ರಕರಣಗಳು, ಒಟ್ಟು 15 ಪ್ರಕರಣಗಳು ದಾಖಲಾಗಿರುತ್ತದೆ. ನಿಶಾದ್ ವಿರುದ್ಧ 1 ದರೋಡೆ ಪ್ರಕರಣ, ಒಟ್ಟು 4 ಪ್ರಕರಣಗಳು ದಾಖಲಾಗಿರುತ್ತದೆ.
ಈ ಪ್ರಕರಣದ ಆರೋಪಿಗಳು ವಿಚಾರಣಾಧಿಕಾರಿಗಳ ಅಧಿಕಾರ ವ್ಯಾಪ್ತಿಯನ್ನು ದುರುಪಯೋಗ ಪಡಿಸಿಕೊಂಡು ವಿಚಾರಣೆ ಮುಗಿಯುವ ವೇಳೆಯಲ್ಲಿ ಜಾಮೀನಿನ ಮೇಲೆ ಹೊರಗೆ ಬಂದು ಮತ್ತೆ ಇದೇ ರೀತಿಯ ಕೃತ್ಯದಲ್ಲಿ ತೊಡಗಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಾಯ್ದೆಯ ಕಲಂ: 111 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.ಇಂತಹ ಕೃತ್ಯ ನಡೆಸಿದ ಆರೋಪಿಗಳಿಗೆ ಜಾಮೀನು ನೀಡದಂತೆ ಘನ ನ್ಯಾಯಾಲಯಕ್ಕೆ ಆಕ್ಷೇಪಣೆಯನ್ನು ಸಲ್ಲಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹೇಳಿದರು.
ಮಡಿಕೇರಿ ನಗರ, ವಿರಾಜಪೇಟೆ ನಗರ, ಭಾಗಮಂಡಲ ಮತ್ತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಪ್ರತ್ಯೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮಡಿಕೇರಿ ಉಪವಿಭಾಗ ಡಿಎಸ್ಪಿ ಮಹೇಶ್ ಕುಮಾರ್, ಸೆನ್ ಪೊಲೀಸ್ ಠಾಣೆ ಡಿಎಸ್ ಪಿ ರವಿ, ಮಡಿಕೇರಿ ನಗರ ವೃತ್ತ ಸಿಪಿಐ ರಾಜು.ಪಿ.ಕೆ, ಮಡಿಕೇರಿ ಗ್ರಾಮಾಂತರ ವೃತ್ತ ಸಿಪಿಐ, ಅನೂಪ್ ಮಾದಪ್ಪ.ಪಿ, ಡಿಸಿಆರ್.ಬಿ ಪಿಐ ಮೇದಪ್ಪ, ಮಡಿಕೇರಿ ನಗರ ಪ್ರೊ.ಠಾ ಪಿಎಸ್ಐ ಲೋಕೇಶ್, ಭಾಗಮಂಡಲ ಪೊ.ಠಾ ಪಿಎಸ್ಐ ಶೋಭಾ ಲಾಮಣಿ, ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿ, ಡಿಸಿಆರ್‌ಬಿ ಮತ್ತು ತಾಂತ್ರಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ವಿವರಿಸಿದರು.ಆರೋಪಿಗಳ ವಿವರ : ಕುಂಜಿಲ ಗ್ರಾಮ ಕಕ್ಕಬ್ಬೆ ಗ್ರಾಮದ ಮೊಹಮ್ಮದ್ ರಿಜ್ವಾನ್.ಕೆ.ಎ(35), ಪಡಿಯಾನಿ ಎಮ್ಮೆಮಾಡು ಗ್ರಾಮದ ರಿಯಾಜ್ಪಿ.ಹೆಚ್(39), ಕುಂಜಿಲ ಗ್ರಾಮ ಕಕ್ಕಬ್ಬೆಯ ಅಬ್ದುಲ್ ನಾಸೀರ್(50), ಕೇರಳ ರಾಜ್ಯ ಮಲಪುರಂ ಜಿಲ್ಲೆಯ ನವಾಸ್.ಕೆ.ಪಿ(47), ಕೇರಳ ರಾಜ್ಯ ಎರ್ನಾಕುಲಂ ಜಿಲ್ಲೆಯ ನಿಶಾದ್.ಕೆ.ಎ (43), ಕೇರಳ ರಾಜ್ಯ ಎರ್ನಾಕುಲಂನ ಮಹಮ್ಮದ್ ಕುಂಞ.ಸಿ.ಎಂ. (48), ಪ್ರದೀಪ್.ಪಿಜೆ (60), ಪಡಿಯಾನಿ ಎಮ್ಮೆಮಾಡು ಗ್ರಾಮ ಮೂಸಾ.ಬಿ.ಎ, (37), ಮಹಮ್ಮದ್ ಅನೀಫ್.ಎಂ.ಎಂ, (42), ಖತೀಜಾ (32), ಅಯ್ಯಂಗೇರಿ, ಭಾಗಮಂಡಲ ರಫೀಕ್ (38), ಫಾರಾನ್ (33) ಬಂಧಿತ ಆರೋಪಿಗಳು.
ಬಂಧಿತರಿಂದ 223 ಗ್ರಾಂ ತೂಕದ ಚಿನ್ನ ಲೇಪಿತ 28 ಬಳೆಗಳು, ನಗದು 2 ಲಕ್ಷ, ಬ್ಯಾಂಕ್ ಖಾತೆ ಫ್ರೀಜ್ ಮೊತ್ತ ರು.2,08,221, ವಿಮೆ ಮೇಲೆ ಹಣ ಹೂಡಿಕೆ ರು. 1,26,504, ರು.1,40,000 ಮೌಲ್ಯದ ಒಂದು ಐಫೋನ್ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.