ಉಡುಪಿಯಲ್ಲಿ ಒಂದೂವರೆ ದಿನಕ್ಕೊಬ್ಬರು ರಸ್ತೆ ಅಪಘಾತದಲ್ಲಿ ಸಾವು: ಎಸ್ಪಿ ಅರುಣ್ ಆತಂಕ

KannadaprabhaNewsNetwork | Published : Dec 20, 2024 12:45 AM

ಸಾರಾಂಶ

ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಉಪ ವಿಭಾಗದ ವತಿಯಿಂದ ಅಪರಾಧ ತಡೆ ಮಾಸಾಚರಣೆ-2024 ಕಾರ್ಯಕ್ರಮ ನಡೆಯಿತು.

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ತಡೆ ಮಾಸಾಚರಣೆ

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಸರಾಸರಿ ಒಂದೂವರೆ ದಿನಕ್ಕೆ ಒಬ್ಬರಂತೆ ಅಪಘಾತದಿಂದ ಜೀವ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ. ವಾಹನ ಚಾಲನೆಯ ವೇಳೆ ಅಗತ್ಯ ಮುಂಜಾಗೃತ ಕ್ರಮಗಳನ್ನು ವಹಿಸಿದರೆ ಅಪಘಾತಗಳನ್ನು ತಡೆಗಟ್ಟಬಹುದು ಎಂದು ಉಡುಪಿ ಎಸ್ಪಿ ಡಾ.ಅರುಣ್ ಆಶಿಸಿದರು.ಅವರು ಗುರುವಾರ ನಗರದ ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಉಪ ವಿಭಾಗದ ವತಿಯಿಂದ ಅಪರಾಧ ತಡೆ ಮಾಸಾಚರಣೆ-2024 ಕಾರ್ಯಕ್ರಮದಲ್ಲಿ ಮಾತನಾಡಿದರು.ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಬೇಕು. ಕಾರು ಚಾಲಕರು ಸೀಟ್ ಬೆಲ್ಟ್ ಹಾಕಿಕೊಂಡೇ ಕಾರು ಓಡಿಸಬೇಕು ಎಂಬ ಕಾನೂನು ಇದೆ. ಇದು ಕೇವಲ ಕಾನೂನಲ್ಲ, ವಾಹನ ಚಾಲಕರ ಜೀವವನ್ನು ಉಳಿಸಲು ಸಹಕಾರಿ. ಅನೇಕ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸಿದವರು, ಸೀಟ್ ಬೆಲ್ಟ್ ಹಾಕಿಕೊಂಡವರು ಪ್ರಾಣಪಾಯದಿಂದ ಪಾರಾದ ನಿದರ್ಶನಗಳಿವೆ. ನಮ್ಮ ಜೀವವನ್ನು ಉಳಿಸಿಕೊಳ್ಳಲು ಮುಂಜಾಗ್ರತಾ ಕ್ರಮವನ್ನು ಅನುಸರಿಸಬೇಕು‌ ಎಂದರು.250 ಮಂದಿ ಎಂದರೆ ಸಣ್ಣ ಸಂಖ್ಯೆಯಲ್ಲ. 250 ಕುಟುಂಬಗಳು ಅಘಾತಕ್ಕೊಳಗಾಗುತ್ತದೆ, ಸುಮಾರು 1,000 ಜನರು ಇದರಿಂದ ಸಂಕಷ್ಟಕೀಡಾಗುತ್ತಾರೆ. ಮನೆಯಿಂದ ಹೊರಕ್ಕೆ ಹೋದವರು ಮನೆಗೆ ಮರಳುತ್ತಾರೆ ಎಂಬ ನಂಬಿಕೆಯಲ್ಲಿ ತಾಯಿ, ತಂದೆ, ಮಡದಿ, ಸಹೋದರರು, ಮಕ್ಕಳು ಇರುತ್ತಾರೆ. ಆ ನಂಬಿಕೆಗೆ ಘಾಸಿಯಾಗದಂತೆ ವಾಹನ ಚಲಾಯಿಸಿ, ನಿಮ್ಮ ಜೀವವನ್ನು ಕಾಪಾಡಿಕೊಳ್ಳುವ ಜೊತೆಗೆ ಇತರರ ಜೀವಕ್ಕೂ ಹಾನಿ ಮಾಡಬೇಡಿ ಎಂದು ಕಿವಿಮಾತನ್ನು ಹೇಳಿದರು‌. ವೇದಿಕೆಯಲ್ಲಿ ಹೆಚ್ಚುವರಿ ಎಸ್ಪಿ ಪರಮೇಶ್ವರ್ ಹೆಗಡೆ, ಉಡುಪಿ ಡಿವೈಎಸ್ಪಿ ಪ್ರಭು ಉಪಸ್ಥಿತರಿದ್ದರು. ಬ್ರಹ್ಮಾವರ ಸಿಪಿಐ ದಿವಾಕರ್ ಸ್ವಾಗತಿಸಿದರು. ಅನಿತಾ ಚೇತನ್ ನಿರೂಪಿಸಿದರು. ಇದೇ ವೇಳೆ ಸಾರ್ವಜನಿಕರಲ್ಲಿ ಅಪರಾಧ ಕೃತ್ಯ ಮತ್ತು ಜಾಗೃತಿ ಮೂಡಿಸುವ ಕರಪತ್ರ ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಅರವಿಂದ್ ಬೋಳಾರ್, ಪತ್ರಕರ್ತ ವಾಲ್ಟರ್ ನಂದಳಿಕೆ, ಮದುಮೇಹ ತಜ್ಞೆ ಡಾ.ಶ್ರುತಿ ಬಲ್ಲಾಳ್, ಮಾಡೆಲ್ ಸ್ಪೂರ್ತಿ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು‌.

Share this article