-ಬೆಳಗಾವಿ ಸುವರ್ಣಸೌಧ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭರವಸೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಮಾರ್ಚ್-2028 ರ ಅಂತ್ಯಕ್ಕೆ ಅನುದಾನದ ಲಭ್ಯತೆಗೆ ಅನುಗುಣವಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಕೇಳಿದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯ ಪ್ರಗತಿಯ ಕುರಿತು ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಿಗೆ ಅವಶ್ಯವಿರುವ ಜಮೀನಿನ ಭೂಸ್ವಾಧೀನದ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರ್ಥಿಕ ಪ್ರಗತಿ: ಭದ್ರ ಮೇಲ್ದಂಡೆ ಯೋಜನೆಗಾಗಿ 2024-25ನೇ ಸಾಲಿನಲ್ಲಿ ರು.1430 ಕೋಟಿಗಳ ಅನುದಾನ ಹಂಚಿಕೆಯಾಗಿದ್ದು, 2024ರ ಅಕ್ಟೋಬರ್ ಅಂತ್ಯಕ್ಕೆ ಒಟ್ಟಾರೆ ಸಂಚಿತ ರು.10,115.13 ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದೆ.
ಕೇಂದ್ರಕ್ಕೆ ಶಿಫಾರಸ್ಸು: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸಚಿವ ಸಂಪುಟ ಸಭೆಗೆ ಅನುಮೋದನೆಗೆ ಶಿಫಾರಸ್ಸು ಮಾಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯು ತಾಂತ್ರಿಕ, ಆರ್ಥಿಕವಾಗಿ ಕಾರ್ಯಸಾಧ್ಯತೆಯ ಬಗ್ಗೆ ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದ ತಾಂತ್ರಿಕ ಸಲಹಾ ಸಮಿತಿಯು ತಿಳುವಳಿಕೆ ನೀಡಿರುತ್ತದೆ. ಕೇಂದ್ರದ ಇನ್‍ವೆಸ್ಟ್ ಮೆಂಟ್ ಕ್ಲಿಯರೆನ್ಸ್ ಸಮಿತಿಯು ರು. 16,125.48 ಕೋಟಿಗಳ ಯೋಜನಾ ಮೊತ್ತಕ್ಕೆ ಸ್ಥಿರೀಕರಿಸಿ ಅನುಮೋದನೆ ನೀಡಿದೆ. 2022ರ ಫೆ.15ರ ಕೇಂದ್ರದ ಹೈ ಪವರ್ಡ್ ಸ್ಟ್ರೀಂಗ್ ಕಮಿಟಿಯ 14ನೇ ಸಭೆಯು ಮಾಡಿದ ಶಿಫಾರಸ್ಸಿನಂತೆ ಕೇಂದ್ರ ಹಣಕಾಸು ಸಚಿವಾಲಯದ ಪಬ್ಲಿಕ್ ಇನ್‍ವೆಸ್ಟ್ ಮೆಂಟ್ ಬೋರ್ಡ್ ಮಂಡಳಿಯು ಪ್ರಸ್ತಾವನೆ ಅಂಗೀಕರಿಸಿ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸಚಿವ ಸಂಪುಟ ಸಭೆಗೆ ಅನುಮೋದನೆಗೆ ಶಿಫಾರಸ್ಸು ಮಾಡಿದೆ.ರಾಣಿಕೆರೆಗೆ ವೇದಾವತಿ ನದಿ ನೀರು: ಚಳ್ಳಕೆರೆ ತಾ. ರಾಣಿಕೆರೆಗೆ ವೇದಾವತಿ ನದಿಯ ನೀರನ್ನು 39 ಕಿ.ಮೀ ನಾಲೆಯ ಮುಖಾಂತರ ಹರಿಸುವ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮದಿಂದ ವಿಶ್ವೇಶ್ವರಯ್ಯ ಜಲನಿಗಮಕ್ಕೆ ಅನುದಾನ ಸಹಿತ ಹಸ್ತಾಂತರಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ.
----
ಫೋಟೊ: ಡಿ.ಕೆ.ಶಿವಕುಮಾರ (ಮಗ್‌ಶಾಟ್)