ಪೊಲೀಸರ ಸಹಾಯದಿಂದ ಆಟೋ ಖರೀದಿಸಿದ ಯುವಕ : ಪೊಲೀಸರ ಆಶೀರ್ವಾದ ಎಂದು ಬರೆಸಿ ಅಭಿಮಾನ

KannadaprabhaNewsNetwork |  
Published : Oct 14, 2024, 01:23 AM ISTUpdated : Oct 14, 2024, 11:22 AM IST
Microsoft engineer drives autorickshaw

ಸಾರಾಂಶ

  ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರು ವಾರ್ಡ್ ನಲ್ಲಿ ಅಡ್ಡಾಡುವ ಆಟೋದ ಹಿಂಬರಹ ಎಲ್ಲರೂ ಗಮನ ಸೆಳೆದು ಅಚ್ಚರಿ ಮತ್ತು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ.

ಎಂ.ನರಸಿಂಹಮೂರ್ತಿ

 ಬೆಂಗಳೂರು ದಕ್ಷಿಣ : ವಾಹನಗಳ ಹಿಂದೆ ತಮ್ಮ ನೆಚ್ಚಿನವರ ಹೆಸರು ಬರೆಸಿಕೊಂಡು ಅಭಿಮಾನ, ಪ್ರೀತಿ, ವಿಶ್ವಾಸ ವ್ಯಕ್ತಪಡಿಸುವುದನ್ನು ನಾವೆಲ್ಲರೂ ನೋಡಿದ್ದೇವೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರು ವಾರ್ಡ್ ನಲ್ಲಿ ಅಡ್ಡಾಡುವ ಆಟೋದ ಹಿಂಬರಹ ಎಲ್ಲರೂ ಗಮನ ಸೆಳೆದು ಅಚ್ಚರಿ ಮತ್ತು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ.

ಸಾಮಾನ್ಯವಾಗಿ ಎಲ್ಲರೂ ತಮ್ಮ ವಾಹನದಲ್ಲಿ ಹಿಂಬದಿಯಲ್ಲಿ ಅಪ್ಪ-ಅಮ್ಮನ ಆಶೀರ್ವಾದ, ಹಿತಶತ್ರುಗಳ ಆಶೀರ್ವಾದ, ಗಾದೆಗಳು, ವೇದಾಂತಗಳು, ಸ್ಪೂರ್ತಿಧಾಯಕ ಬರಹಗಳು ಹಾಗೂ ನೆಚ್ಚಿನ ನಟನ ಚಿತ್ರ ಬರೆಸಿ ಅವರು ಅಂತರಾಳದ ಮನಸ್ಸಿನ ಮಾತುಗಳನ್ನು ಹಿಂಬರಹ ಮೂಲಕ ವ್ಯಕ್ತಪಡಿಸಿರುತ್ತಾರೆ.ಬಡಕುಟುಂಬದಲ್ಲಿ ಹುಟ್ಟಿದ ಬೇಗೂರು ನಿವಾಸಿ ನಾಗೇಶ್ ಎಂಬಾತ ಬೇಗೂರು ಪೊಲೀಸ್ ಠಾಣೆಯಲ್ಲಿ ಸ್ವಚ್ಛಗೊಳಿಸುವ ಹಾಗೂ ಕಾಫಿ ಟೀ ತಂದು ಕೊಡುವುದು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಪೊಲೀಸರು ನೀಡುವ ಹಣದಲ್ಲಿ ಜೀವನ ನಡೆಸುತ್ತಿರುತ್ತಾನೆ.

ಕಾಲಕಳೆದಂತೆ ಜೀವನ ನಿರ್ವಹಣೆ ಸಾಗಿಸಲು ಕಷ್ಟಕರವಾದ ಹಿನ್ನಲೆ ಪೊಲೀಸರಲ್ಲಿ ಅಲವತ್ತುಕೊಂಡಿದ್ದಾನೆ. ಬೇಗೂರು ಪೊಲೀಸ್ ಠಾಣೆಯ ಎಲ್ಲಾ ಸಹೃದಯಿ ಪೋಲಿಸರು ತಮ್ಮ ಕೈಲಾದಷ್ಟು ಹಣ ಸಹಾಯ ಮಾಡಿ ಆಟೋವನ್ನು ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪೊಲೀಸರ ಸಹಾಯದಿಂದ ಆಟೋ ಓಡಿಸುತ್ತಾ ಜೀವನ ನಿರ್ವಹಣೆಗೆ‌ ಸಹಾಯ‌ಹಸ್ತ ನೀಡಿದ ಕೃತಜ್ಞತೆಗಾಗಿ ಆಟೋ ಹಿಂದೆ ಪೊಲೀಸರ ಆಶೀರ್ವಾದ ಎಂದು ಬರೆಸಿ ಅಭಿಮಾನ ಮೆರೆದಿದ್ದಾನೆ.

ಪೊಲೀಸರೆಂದರೆ ಭಯ, ಕಲ್ಲು ಮನಸ್ಸಿನವರು, ಭ್ರಷ್ಟರು, ಅವ್ಯಾಚ ಶಬ್ದಗಳನ್ನು ಬಳಸುತ್ತಾರೆ, ಅಧಿಕಾರಿ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬ ಹಲವಾರು ದೂರುಗಳ ಮಧ್ಯೆ ವಿಶಾಲವಂತಿಕೆ, ಕರುಣೆ ಹಾಗೂ ಸಹಾಯ ಮನೋಭಾವ ಹೊಂದಿರುವ ಪೋಲಿಸರ ನಡವಳಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈತ ಬಿಬಿಎಂಪಿಯಲ್ಲಿ ಅರೆಕಾಲಿಕ ಪೌರಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲಸ ಮುಗಿದ ನಂತರ ಆಟೋ ಓಡಿಸುತ್ತಿದ್ದಾನೆ.

ಎಲ್ಲಾ ಪೊಲೀಸರು ಕೆಟ್ಟವರಲ್ಲಾ ಪೊಲೀಸರಲ್ಲೂ ಮನುಷ್ಯತ್ವ ಗುಣವಿದೆ. ಅನೇಕ ಪೊಲೀಸರು ಇಂದು ಸಹಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ. ಸಮಾಜಕ್ಕೆ ತಿಳಿಯದ‌ ಹಾಗೆ ತೆರೆಮರೆಯಲ್ಲಿ ಸಹಾಯಹಸ್ತ ಚಾಚುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟಲ್ಲಿ ಹೇಳಿದಂತೆ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಶೀಘ್ರ: ಮಧು
ಬೆಂಗಳೂರಿನ ಕೊಳಚೆ ನೀರಿಂದ ತರಕಾರಿಯೂ ವಿಷ : ಸಂಸತ್ತಲ್ಲಿ ಗೌಡ