ವೈದ್ಯರು ಉದಾರ ಮನೋಭಾವ ಹೊಂದಿರಬೇಕು: ಸಚಿವ ಶರಣಪ್ರಕಾಶ ಪಾಟೀಲ

KannadaprabhaNewsNetwork |  
Published : Oct 14, 2024, 01:23 AM IST
ಪಿಇಎಸ್‌ ವಿಶ್ವವಿದ್ಯಾಲಯದ ಎಲೆಕ್ಟಾನಿಕ್‌ ಸಿಟಿ ಕ್ಯಾಂಪಸ್‌ನಲ್ಲಿ   ಪ್ರಥಮ ವರ್ಷದ ಎಂಬಿಬಿಎಸ್‌ ತರಗತಿಗಳನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಉದ್ಘಾಟಿಸಿದರು.  ಜೈಪುರದ ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಕುಲಪತಿ ಡಾ.ಅಚಲ್‌ ಗುಲಾಟಿ, ಪಿಇಎಸ್‌ ವಿವಿ ಕುಲಾಧಿಪತಿ ಡಾ.ಎಂ.ಆರ್‌.ದೊರೆಸ್ವಾಮಿ,  ಸಮ ಕುಲಾಧಿಪತಿ ಪ್ರೊ.ಡಿ.ಜವಹರ್‌, ವೈದ್ಯಕೀಯ ನಿರ್ದೇಶಕ ಡಾ.ಸುರೇಶ್‌ ಕೃಷ್ಣ ಮೂರ್ತಿ, ಕುಲಸಚಿವ ಡಾ.ಕೆ.ಎಸ್‌.ಶ್ರೀಧರ್‌ ಮತ್ತಿತರಿದ್ದರು. | Kannada Prabha

ಸಾರಾಂಶ

ವೈದ್ಯರಾದವರು ಹಣಕ್ಕೆ ಬೆಲೆ ಕೊಡದೆ ಎಲ್ಲ ಜನರಿಗೂ ಉತ್ತಮ ಚಿಕಿತ್ಸೆ ನೀಡುವ ಉದಾರ ಮನೋಭಾವ ಹೊಂದಿದಾಗ ಮಾತ್ರ ತಮ್ಮ ವೃತ್ತಿ ಜೀವನ ಸಾರ್ಥವಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವೈದ್ಯರಾದವರು ಹಣಕ್ಕೆ ಬೆಲೆ ಕೊಡದೆ ಎಲ್ಲ ಜನರಿಗೂ ಉತ್ತಮ ಚಿಕಿತ್ಸೆ ನೀಡುವ ಉದಾರ ಮನೋಭಾವ ಹೊಂದಿದಾಗ ಮಾತ್ರ ತಮ್ಮ ವೃತ್ತಿ ಜೀವನ ಸಾರ್ಥವಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹೇಳಿದ್ದಾರೆ.

ಪಿಇಎಸ್‌ ವಿಶ್ವವಿದ್ಯಾಲಯವು ಎಲೆಕ್ಟಾನಿಕ್‌ ಸಿಟಿ ಕ್ಯಾಂಪಸ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಎಂಬಿಬಿಎಸ್‌ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಮುಗಿಸಿದವರು ನಗರ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಭಾಗದ ಜನರಿಗೂ ಉತ್ತಮ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಮಾಡಬೇಕು. ಸಮಾಜದ ಋಣ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಬಡವ, ಶ್ರೀಮಂತರ ಎನ್ನದೆ ಎಲ್ಲರಿಗೂ ಸಮಾಜವಾಗಿ ಉತ್ತಮ ಚಿಕಿತ್ಸೆ ನೀಡುವ ಉದಾತ್ತ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ವೃತ್ತಿ ಜೀವನ ಸಾರ್ಥಕವಾಗುವುದಿಲ್ಲ ಎಂದರು.

ಕರ್ನಾಟಕದಲ್ಲಿ ದೇಶದಲ್ಲೇ ಹೆಚ್ಚು 71 ವೈದ್ಯಕೀಯ ಕಾಲೇಜುಗಳಿವೆ. ಇವುಗಳ ಜೊತೆಗೆ ಈ ವರ್ಷ ಪಿಇಎಸ್‌, ಬಿಜಿಎಸ್‌ ಮತ್ತು ಎಸ್‌.ಆರ್‌.ಪಾಟೀಲ್‌ ವೈದ್ಯಕೀಯ ಕಾಲೇಜುಗಳು ಸೇರ್ಪಡೆಯಾಗಿವೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಸಂವಹನ ಕೌಶಲ್ಯ ಮುಖ್ಯ. ಇಲ್ಲದಿದ್ದರೆ ರೋಗಿಗಳ ಸಮಸ್ಯೆಯನ್ನು ಸರಿಯಾಗಿ ತಿಳಿಯಲು ಹಾಗೂ ಅವರ ಆರೋಗ್ಯ ಸುಧಾರಣೆಗೆ ಸರಿಯಾಗಿ ಮಾರ್ಗದರ್ಶನ ಮಾಡಲು ಸಾಧ್ಯವಾಗದೆ ಹೋಗಬಹುದು ಎಂದರು.

ಪಿಇಎಸ್‌ ಕುಲಾಧಿಪತಿ ಡಾ.ಎಂ.ಆರ್‌.ದೊರೆಸ್ವಾಮಿ ಮಾತನಾಡಿ, ದೇಶದಲ್ಲಿ ವೈದ್ಯರು ಮತ್ತು ನರ್ಸ್‌ಗಳು ಸೇರಿ ವೈದ್ಯಕೀಯ ಸೇವೆ ಕೊರತೆ ಇದೆ. ಇದನ್ನು ನೀಗಿಸಲು ಕನಿಷ್ಠ ದೇಶದ ಪ್ರತಿ ಜಿಲ್ಲೆಯಲ್ಲೊಂದು ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ನಾವು ಎಂಜಿನಿಯರಿಂಗ್‌ ಸೇರಿ ಬೇರೆ ಬೇರೆ ಕೋರ್ಸುಗಳ ಜೊತೆಗೆ ಈಗ ವೈದ್ಯಕೀಯ ಕೋರ್ಸುಗಳನ್ನೂ ಆರಂಭಿಸಿದ್ದೇವೆ. ಮೊದಲು ಆಂಧ್ರಪ್ರದೇಶದ ಕುಪ್ಪಂನಲ್ಲಿ ಪಿಇಎಸ್‌ ವೈದ್ಯಕೀಯ ಕಾಲೇಜು ಆರಂಭಿಸಿತ್ತು. 20 ವರ್ಷಗಳ ನಂತರ ಕರ್ನಾಟಕದಲ್ಲೂ ಆರಂಭಿಸಿದ್ದೇವೆ. ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡುವುದು ನಮ್ಮ ಗುರಿ. ಮೊದಲ ಬ್ಯಾಚ್ ಆಗಿದ್ದರೂ ನಾವು ಯಾವುದೇ ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟದಲ್ಲಿ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಜೈಪುರದ ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಕುಲಪತಿ ಡಾ.ಅಚಲ್‌ ಗುಲಾಟಿ, ಪಿಇಎಸ್‌ ಸಮ ಕುಲಾಧಿಪತಿ ಪ್ರೊ.ಡಿ.ಜವಹರ್‌, ವೈದ್ಯಕೀಯ ನಿರ್ದೇಶಕ ಡಾ.ಸುರೇಶ್‌ ಕೃಷ್ಣ ಮೂರ್ತಿ, ಕುಲಸಚಿವ ಡಾ.ಕೆ.ಎಸ್‌.ಶ್ರೀಧರ್‌, ಪಿಇಎಸ್‌ಯುಐಎಂಎಸ್‌ಆರ್‌ ಡೀನ್‌ ಡಾ.ಹರಿಪ್ರಸಾದ್‌ ಟಿ.ಆರ್‌., ಸಿಒಒ ಪ್ರೊ.ಅಜೊಯ್‌ ಕುಮಾರ್‌ ಉಪಸ್ಥಿತರಿದ್ದರು.

11 ಜಿಲ್ಲೆಯಲ್ಲಿ ಹಂತ ಹಂತವಾಗಿ ಸರ್ಕಾರಿ ವೈದ್ಯ ಕಾಲೇಜು: ವೈದ್ಯರಾಗಬಯಸುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೆರಿಟ್‌ ಮೇಲೆ ಸರ್ಕಾರಿ ಕೋಟಾ ಸೀಟು ಸಿಗಬೇಕಾದರೆ ರಾಜ್ಯದಲ್ಲಿ ಇನ್ನಷ್ಟು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಆರಂಭವಾಗಬೇಕು. ರಾಜ್ಯದ 22 ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಉಳಿದ 11 ಜಿಲ್ಲೆಗಳಲ್ಲಿ ಕೂಡ ಹಂತ ಹಂತವಾಗಿ ಸರ್ಕಾರಿ ವೈದ್ಯ ಕಾಲೇಜುಗಳನ್ನು ಆರಂಭಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಮುಂದೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯುವ ಪ್ರಯತ್ನ ಮಾಡಲಾಗುವುದು ಎಂದು ಇದೇ ವೇಳೆ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ