ಉಮೇಶ್ ಅವರು ರಾಮನಗರದ ಶಾಂತಿಲಾಲ್ ಲೇಔಟ್‌ನಲ್ಲಿ ಮನೆ ಕಟ್ಟಿಸುತ್ತಿದ್ದರು. ಅದಕ್ಕಾಗಿ ವಿಶಾಲ್ ಅವರು ಮೇ 27ರಂದು ಕೆಂಪನಹಳ್ಳಿಯಿಂದ ಎಂ. ಸ್ಯಾಂಡ್ ಕಲ್ಲಿನಪುಡಿಯನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಬರುತ್ತಿದ್ದರು.
ಕನ್ನಡಪ್ರಭ ವಾರ್ತೆ ರಾಮನಗರ
ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದ ಯುವಕನೊಬ್ಬ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದನು. ಸಾವು- ಬದುಕಿನ ನಡುವಿನ ಹೋರಾಟದಲ್ಲಿ ಸಾವನ್ನು ಗೆಲ್ಲಲಾಗದೆ ಯುವಕ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.
ತಾಲೂಕಿನ ಅರಳೀಮರದೊಡ್ಡಿಯ ಅಂಚೆ ಇಲಾಖೆ ಅಧಿಕಾರಿ ಉಮೇಶ್ ಅವರ ಪುತ್ರ ವಿಶಾಲ್ (23) ಮೃತಪಟ್ಟ ಯುವಕ.
ಎಂಜಿನಿಯರಿಂಗ್ ಪದವಿ ಮುಗಿಸಿದ್ದ ವಿಶಾಲ್ ಉನ್ನತ ಶಿಕ್ಷಣಕ್ಕಾಗಿ ಕೆಲವೇ ದಿನಗಳಲ್ಲಿ ದೂರದ ಜರ್ಮನಿಗೆ ಹೋಗಲು ಸಕಲ ಸಿದ್ದತೆ ಮಾಡಿಕೊಂಡಿದ್ದನು. ಆದರೆ, ವಿಧಿಯಾಟವೇ ಬೇರೆ ಆಗಿತ್ತು. ಟ್ರ್ಯಾಕ್ಟರ್‌ನಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿ ತರುವಾಗ ಸಂಭವಿಸಿದ ಅಪಘಾತ ಬದುಕಿಗೆ ಮುಳುವಾಯಿತು.
ಉಮೇಶ್ ಅವರು ರಾಮನಗರದ ಶಾಂತಿಲಾಲ್ ಲೇಔಟ್‌ನಲ್ಲಿ ಮನೆ ಕಟ್ಟಿಸುತ್ತಿದ್ದರು. ಅದಕ್ಕಾಗಿ ವಿಶಾಲ್ ಅವರು ಮೇ 27ರಂದು ಕೆಂಪನಹಳ್ಳಿಯಿಂದ ಎಂ. ಸ್ಯಾಂಡ್ ಕಲ್ಲಿನಪುಡಿಯನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಬರುತ್ತಿದ್ದರು.
ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಚಾಮುಂಡೀಪುರ ಬಳಿ ಶಾಂತಿಲಾಲ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ಎತ್ತರದ ತಿರುವು ತೆಗೆದುಕೊಳ್ಳುವಾಗ, ಟ್ರ್ಯಾಲಿಯ ಭಾರಕ್ಕೆ ಒಮ್ಮೆಲೆ ಟ್ರ್ಯಾಕ್ಟರ್ ಎಂಜಿನ್ ಮೇಲಕ್ಕೇರಿದೆ. ಸ್ಟೇರಿಂಗ್ ವಿಶಾಲ್ ಅವರ ಹೊಟ್ಟೆಗೆ ಬಲವಾಗಿ ಗುದ್ದಿದೆ. ಅದಾದ ಎರಡು ತಾಸು ಚೆನ್ನಾಗಿದ್ದ ವಿಶಾಲ್ ನಂತರ ನೋವಿನಿಂದ ಕುಸಿದು ಬಿದ್ದಿದ್ದರು. ಕೂಡಲೇ ಮನೆಯವರು ಸಮೀಪದ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಒಂದು ವಾರ ಆಸ್ಪತ್ರೆಯಲ್ಲಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ವಿಶಾಲ್ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಒಂದು ವಾರದಲ್ಲಿ ಜರ್ಮನಿಗೆ ಹೋಗಬೇಕಿದ್ದ ವಿಶಾಲ್, ಇದೀಗ ಕೊನೆಯುಸಿರೆಳೆದಿದ್ದಾರೆ.
ವಿಶಾಲ್ ಅವರಿಗೆ ತಂದೆ- ತಾಯಿ ಹಾಗೂ ಸಹೋದರ ಇದ್ದು, ಪುತ್ರನನ್ನು ಕಳೆದುಕೊಂಡ ಪೋಷಕರು ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ಬಳಿಕ, ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಕಂಬನಿ ಮಿಡಿದ ನಿಖಿಲ್:
ಜೆಡಿಎಸ್‌ನಲ್ಲಿ ಸಕ್ರಿಯವಾಗಿದ್ದ ವಿಶಾಲ್ ಅವರ ಅನಿರೀಕ್ಷಿತ ಸಾವಿನ ಸುದ್ದಿ ತಿಳಿದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.
ಪೋಸ್ಟ್‌ಮ್ಯಾನ್ ಪುತ್ರನಾಗಿ ಕಷ್ಟಪಟ್ಟು ಓದಿದ್ದ ವಿಶಾಲ್ ಅವರು, ವಿದೇಶದಲ್ಲಿ ಎಂ.ಎಸ್ ಉನ್ನತ ಶಿಕ್ಷಣ ಮಾಡುವ ಕನಸು ಕಂಡು, ಅದಕ್ಕಾಗಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದರು. ನನ್ನ ಮೇಲೆ ಅಪಾರ ಅಭಿಮಾನ ಹೊಂದಿದ್ದ ಅವರು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಚುನಾವಣೆ ಸಂದರ್ಭದಲ್ಲಿ ಕೆಲಸ ಮಾಡಿದ್ದರು. ಅಂತಹ ನಿಸ್ವಾರ್ಥಿ ಯುವಕನನ್ನು ಕಳೆದುಕೊಂಡಿರುವುಕ್ಕೆ ಮನಸ್ಸು ಭಾರವಾಗಿದೆ ಎಂದು ನಿಖಿಲ್ ಬೇಸರ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.