ಆಧಾರ್ ತಿದ್ದುಪಡಿ ಕಾರ್ಯ ವಿಳಂಬ; ಜನತೆ ಆಕ್ರೋಶ

KannadaprabhaNewsNetwork |  
Published : May 30, 2024, 12:52 AM IST
29ಕೆಪಿಕೆವಿಟಿ01: | Kannada Prabha

ಸಾರಾಂಶ

ಕವಿತಾಳ ಪಟ್ಟಣದಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರದ ಮುಂದೆ ಆಧಾರ್ ತಿದ್ದುಪಡಿಗಾಗಿ ಸಾಲುಗಟ್ಟಿ ನಿಂತಿರುವ ಜನ.

ಕನ್ನಡಪ್ರಭ ವಾರ್ತೆ ಕವಿತಾಳ

ಕಂಪ್ಯೂಟರ್ ಸ್ಥಳಾಂತರ, ವಿದ್ಯುತ್ ಪೂರೈಕೆ ಸ್ಥಗಿತ ಹಾಗೂ ಸರ್ವರ್ ಸಮಸ್ಯೆಗಳಿಂದ ಆಧಾರ್ ತಿದ್ದುಪಡಿ ಕಾರ್ಯ ವಿಳಂಬವಾಗುತ್ತಿದ್ದು ವಿವಿಧ ಹಳ್ಳಿಗಳಿಂದ ಆಧಾರ್ ತಿದ್ದುಪಡಿಗೆ ಬರುವ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿನ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಆಧಾರ್ ತಿದ್ದುಪಡಿಗೆ ನಿತ್ಯ ಜನರು ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಈಚೆಗೆ ಹೊಸದಾಗಿ ಬಂದಿರುವ ಉಪ ತಹಸೀಲ್ದಾರರು ಕಚೇರಿಯಲ್ಲಿ ಪೀಠೋಪಕರಣಗಳು ಮತ್ತು ಕಂಪ್ಯೂಟರ್‌ಗಳನ್ನು ವಾಸ್ತು ಪ್ರಕಾರ ಸರಿಯಾದ ಜಾಗದಲ್ಲಿಲ್ಲ ಎಂದು ಜಾಗ ಬದಲಿಸಿದ್ದಾರೆ ಎಂದು ಸಿಬ್ಬಂದಿ ಹೇಳುತ್ತಾರೆ. ಆದರೆ ಜಾಗ ಬದಲಿಸಿದ ಕಾರಣ ಕಿರಿದಾದ ಜಾಗದಲ್ಲಿ ಭಾವಚಿತ್ರ ತೆಗೆಯಲು ತೊಂದರೆಯಾಗುತ್ತಿದೆ ಎಂದು ಆಪರೇಟರ್ ಹೇಳುತ್ತಾರೆ.

ಪಹಣಿಗೆ ಆಧಾರ್ ಜೋಡಣೆಗೆ ರೈತರು ಆಗಮಿಸುತ್ತಿರುವುದು ಮತ್ತು ಶಾಲಾ ಕಾಲೇಜು ಆರಂಭವಾದ ಹಿನ್ನೆಲೆ ಆಧಾರ್ ತಿದ್ದುಪಡಿಗೆ ಹೆಚ್ಚಿನ ಜನರು ಬರುತ್ತಿದ್ದು ವಿವಿಧ ಸಮಸ್ಯೆಗಳಿಂದ ತಿದ್ದುಪಡಿ ಕಾರ್ಯ ನಿಧಾನವಾಗುತಿರುವುದಕ್ಕೆ ಸಾರ್ವನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಿಂದ ನಿತ್ಯ ಕಚೇರಿಗೆ ಬರುತ್ತಿದ್ದು ತಿದ್ದುಪಡಿ ಸಾಧ್ಯವಾಗುತ್ತಿಲ್ಲ. ಸರದಿ ಸಾಲಿನಲ್ಲಿ ಸಂಜೆ ವರೆಗೆ ನಿಂತು ವಾಪಸು ಹೋಗುತ್ತಿದ್ದೇವೆ ಎಂದು ನಿಂಗಮ್ಮ, ಗೌರಮ್ಮ, ಸಿದ್ದಯ್ಯಸ್ವಾಮಿ ಶಿವಗೇನಪ್ಪ ಮತ್ತು ರಂಗಪ್ಪ ಆರೋಪಿಸಿದರು.

ಮಳೆ ಗಾಳಿಗೆ ವಿದ್ಯುತ್ ಕಂಬ ಬಿದ್ದಿರುವುದರಿಂದ ದುರಸ್ತಿ ಹಾಗೂ ಮರಗಳ ಕೊಂಬೆ ಕತ್ತಿರಿಸುವ ಕೆಲಸ ಕೈಗೊಂಡ ಕಾರಣ ವಿದ್ಯುತ್ ಸ್ಥಗಿತವಾಗುತ್ತಿದೆ. ಜನಸ್ನೇಹಿ ಕಚೇರಿಯಲ್ಲಿ ಇನ್‌ವರ್ಟರ್ ಇಲ್ಲದ ಕಾರಣ ಕೆಲಸ ಸ್ಥಗಿತವಾಗುತ್ತದೆ. ಕರೆಂಟ್ ಇದ್ದರೆ ಸರ್ವರ್ ಬ್ಯುಜಿ ಇರುತ್ತದೆ. ವಿದ್ಯುತ್ ಮತ್ತು ಸರ್ವರ್ ಇದ್ದರೆ ಫೋಟೋ ತೆಗೆಯಲು ಜಾಗದ ಸಮಸ್ಯೆ ಹೀಗೆ ವಿವಿಧ ಸಮಸ್ಯೆಗಳಿಂದ ತಿದ್ದುಪಡಿಗೆ ಜನರು ಹರಸಾಹಸ ಪಡುವಂತಾಗಿದೆ.

ವಾಸ್ತು ಪ್ರಕಾರ ಪೀಠೋಪಕರಣ ಮತ್ತು ಕಂಪ್ಯೂಟರ್‌ ಜಾಗ ಬದಲವಾಣೆ ಬಗ್ಗೆ ಹಾಗೂ ಸಮಸ್ಯೆ ಕುರಿತು ತಿಳಿಸಲು ಸಂಪರ್ಕಿಸಿದಾಗ ಉಪ ತಹಸೀಲ್ದಾರ್‌ ಮಂಜುನಾಥ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇಲ್ಲಿನ ಸಮಸ್ಯೆ ಬಗ್ಗೆ ತಮಗೆ ಮಾಹಿತಿ ಇಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿರವಾರ ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಗೇರ ತಿಳಿಸಿದ್ದಾರೆ.

ವಾಸ್ತು ಪ್ರಕಾರ ಪೀಠೋಪಕರಣಗಳು ಮತ್ತು ಕಂಪ್ಯೂಟರ್ ಗಳನ್ನು ಬದಲಾವಣೆ ಮಾಡಿಲ್ಲ, ಈಚೆಗೆ ಪ್ರಿಂಟರ್ ಕಳ್ಳತನವಾದ ಹಿನ್ನೆಲೆ ಸಾರ್ವಜನಿಕರು ಕಚೇರಿ ಒಳಗೆ ನುಗ್ಗಿ ಬರದಂತೆ ಟೇಬಲ್ ಬದಲಿಸಲಾಗಿದೆ. ಅದಕ್ಕೂ ತಿದ್ದುಪಡಿಗೂ ಸಂಬಂಧವಿಲ್ಲ ಸರ್ವರ್ ಸಮಸ್ಯೆಯಿಂದ ವಿಳಂಬವಾಗುತ್ತಿರಬಹುದು ಎಂದು ಗ್ರಾಮ ಆಡಳಿತಾಧಿಕಾರಿ ಸದಾಕ್ ಅಲೀ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ