ಕೃಷಿ ಪಂಪ್‌ ಸೆಟ್‌ಗೆ ಆಧಾರ್‌ ಜೋಡಣೆ: ಸೆ.2ರಂದು ಪ್ರತಿಭಟನೆ

KannadaprabhaNewsNetwork |  
Published : Aug 29, 2024, 12:56 AM IST
28ಕೆಡಿವಿಜಿ3-ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ.  | Kannada Prabha

ಸಾರಾಂಶ

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್‌ ನಂಬರ್ ಅಳವಡಿಸಲು ಮುಂದಾಗಿರುವುದನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತೀವ್ರವಾಗಿ ವಿರೋಧಿಸುತ್ತದೆ. ಅಲ್ಲದೇ, ಸೆ.2ರಂದು ಸರ್ಕಾರದ ನಡೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್‌ ನಂಬರ್ ಅಳವಡಿಸಲು ಮುಂದಾಗಿರುವುದನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತೀವ್ರವಾಗಿ ವಿರೋಧಿಸುತ್ತದೆ. ಅಲ್ಲದೇ, ಸೆ.2ರಂದು ಸರ್ಕಾರದ ನಡೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ತಿಳಿಸಿದ್ದಾರೆ.

ಹಿಂದಿನ ಮತ್ತು ಪ್ರಸ್ತುತ ಸರ್ಕಾರಗಳು ಒಂದಲ್ಲ ಒಂದು ರೂಪದಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ನಡೆಸುತ್ತಿವೆ. ಹಿಂದಿನ ಸರ್ಕಾರದಲ್ಲಿ ಪ್ರತಿ ರೈತನಿಗೆ 10 ಎಚ್‌.ಪಿ.ವರೆಗೂ ಮಾತ್ರ ಉಚಿತ ವಿದ್ಯುತ್ ನೀಡುತ್ತಿತ್ತು. ಉಳಿದ ವಿದ್ಯುತ್ ಬಳಕೆಗೆ ಶುಲ್ಕ ಭರಿಸಬೇಕೆಂಬ ಕಾಯ್ಜೆ ಜಾರಿಗೆ ತರಲಾಗಿತ್ತು. ಅದರ ಭಾಗವಾಗಿ ಆಗಿನ ಸರ್ಕಾರ ರೈತರ ಎಲ್ಲ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಆಗಬೇಕೆಂದು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡು, ಎಲ್ಲ ಕೃಷಿ ಪಂಪ್‌ಸೆಟ್‌ಗಳ ಆರ್‌ಆರ್ ನಂಬರ್‌ಗೆ ಆಧಾರ್ ನಂಬರ್ ಜೋಡಣೆ ಮಾಡುವ ಸಂಚು ರೂಪಿಸಿತ್ತು. ಇದರ ಮುಖ್ಯ ಉದ್ದೇಶ ಒಬ್ಬ ರೈತನಿಗೆ 10 ಎಚ್‌.ಪಿ.ವರೆಗೂ ಮಾತ್ರ ಉಚಿತ ವಿದ್ಯುತ್ ನೀಡುವುದು, ಉಳಿದ ವಿದ್ಯುತ್ ಬಳಕೆಗೆ ಶುಲ್ಕ ನಿಗದಿಪಡಿಸುವುದಾಗಿದೆ ಎಂದು ಆರೋಪಿಸಿದ್ದಾರೆ.

ಇಂಧನ ಸಚಿವ ಕೆ.ಜೆ.ಜಾರ್ಜ್ ಸಾಕಷ್ಟು ಬಾರಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ, ರೈತರ ವಿರೋಧ ವ್ಯಕ್ತವಾದ ತಕ್ಷಣ ಸಚಿವ ಜಾರ್ಜ್‌ ರೈತರು ಎಷ್ಟು ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯುವ ಸಲುವಾಗಿ ಆಧಾರ್ ನಂಬರ್ ಜೋಡಣೆ ಮಾಡುತ್ತಿರುವುದಾಗಿ ಸಮಜಾಯಿಷಿ ನೀಡಿದ್ದಾರೆ. ಆದರೆ, ಇದರ ಉದ್ದೇಶವೇ ರೈತರ ಪಂಪ್ ಸೆಟ್‌ಗಳಿಗೆ ಶುಲ್ಕ ನಿಗದಿಪಡಿಸುವುದಾಗಿದೆ ಎಂದು ಟೀಕಿಸಿದ್ದಾರೆ.

ರೈತರಿಗೆ ಉಚಿತ ವಿದ್ಯುತ್ ಘೋಷಿಸಿದ ಮೇಲೆ ಕೊಳವೆಬಾವಿ ಆಧಾರಿತ ತೋಟ, ತರಕಾರಿ, ಇತರೆ ವಾಣಿಜ್ಯ ಬೆಳೆ ಬೆಳೆಯಲು ಆರಂಭಿಸಿದ್ದಾರೆ. 1000 ಅಡಿ ಆಳಕ್ಕೆ ಅಂತರ್ಜಲ ಕುಸಿದಿದೆ. 1 ಎಕರೆ ಜಮೀನಿನಲ್ಲಿ 2ರಿಂದ 3 ಕೊಳವೆಬಾವಿ ಹಾಕಿಸಿಕೊಂಡು ಸಣ್ಣ ಪ್ರಮಾಣದಲ್ಲಿ ಬರುವ ನೀರನ್ನು ತೊಟ್ಟಿಗೆ ಸರಬರಾಜು ಮಾಡಿ, ಅಲ್ಲಿಂದ ಹನಿ ನೀರಾವರಿ ಮೂಲಕ ತೋಟ ಉಳಿಸಿಕೊಳ್ಳಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ 10 ಎಚ್‌ಪಿ ನಂತರ ಶುಲ್ಕ ನಿಗದಿಪಡಿಸುವುದಾಗಿ ಸರ್ಕಾರ ಹೇಳಿದರೆ, 3 ಬೋರ್‌ವೆಲ್ ಇರುವ ಒಬ್ಬ ರೈತ 15 ಎಚ್‌ಪಿ ಸಾಮರ್ಥ್ಯದ ಮೋಟಾರ್‌ಗಳನ್ನು ಹೊಂದಿರುತ್ತಾನೆ. ಹಾಗಾದರೆ, 10 ಎಚ್‌ಪಿ ಉಚಿತ. ಉಳಿದ 5 ಎಚ್‌ಪಿಗೆ ಶುಲ್ಕ ಭರಿಸಬೇಕೆಂದು ಸರ್ಕಾರ ಹೇಳಿದರೆ, ರೈತರು ತೋಟ ನಿರ್ವಹಣೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ