ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Aug 29, 2024 12:56 AM

ಸಾರಾಂಶ

ನಮ್ಮ ದೇಶದ ಉದ್ದಗಲಕ್ಕೂ ಪ್ರತಿ ದಿನ, ಪ್ರತಿ ಕ್ಷಣ, ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದೊಂದು ಆಘಾತಕಾರಿ ಸಂಗತಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಮಹಿಳಾ ಆಯೋಗ ರಕ್ಷಣೆಗಾಗಿ ಹಲವು ಕಾರ್ಯಕ್ರಮಗಳ ಮೂಲಕ ಯೋಜನೆ ರೂಪಿಸಿದ್ದರೂ ಕಾರ್ಯ ನಿರ್ವಹಣೆಯಲ್ಲಿ ವಿಫಲವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೊಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಎಸಗಿದ ಆರೋಪಿಯನ್ನು ಕೂಡಲೇ ಬಂಧಿಸಿ ಅವರಿಗೆ ಮರಣ ದಂಡನೆ ವಿಧಿಸಬೇಕು ಎಂದು ಆಗ್ರಹಿಸಿ ಮಹಿಳೋದಯ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದರು.

ನಮ್ಮ ದೇಶದ ಉದ್ದಗಲಕ್ಕೂ ಪ್ರತಿ ದಿನ, ಪ್ರತಿ ಕ್ಷಣ, ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದೊಂದು ಆಘಾತಕಾರಿ ಸಂಗತಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಮಹಿಳಾ ಆಯೋಗ ರಕ್ಷಣೆಗಾಗಿ ಹಲವು ಕಾರ್ಯಕ್ರಮಗಳ ಮೂಲಕ ಯೋಜನೆ ರೂಪಿಸಿದ್ದರೂ ಕಾರ್ಯ ನಿರ್ವಹಣೆಯಲ್ಲಿ ವಿಫಲವಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಮಹಿಳೆಯರ ಮೇಲಿನ ಹೀನಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆಯ ವಾತವರಣ ನಿರ್ಮಿಸಬೇಕು, ಎಲ್ಲಾ ಹೆಣ್ಣು ಮಕ್ಕಳ ವಸತಿ ನಿಲಯಗಳ ಬಳಿ ಸೂಕ್ತ ಭದ್ರತೆ ನೀಡಬೇಕು, ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಕುರಿತು ರಾಜ್ಯ, ಕೇಂದ್ರ ಸರ್ಕಾರಗಳು ಅತ್ಯಂತ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕೋರ್ಟ್ ಗಳಲ್ಲಿ ಮಹಿಳೆಯರ ಮೇಲಿನ ಪ್ರಕರಣಗಳು ತ್ವರಿತವಾಗಿ ವಿಲೇವಾರಿ ಮಾಡುವುದು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು, ಮಹಿಳೆಯರು ನಿರ್ಭೀತಿಯಿಂದ ಜೀವಿಸಲು ತಳಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ಕಾನೂನು ರೀತಿ ಸೂಕ್ತ ರಕ್ಷಣೆ ನೀಡಬೇಕು. ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆಯನ್ನು ಕಠಿಣಗೊಳಿಸಬೇಕು, ಕೂಡಲೇ ಶಿಕ್ಷೆ ನೀಡಿ ಅತ್ಯಾಚಾರಿಗಳನ್ನು ಮಟ್ಟ ಹಾಕಬೇಕು, ಇದು ನಾಗರೀಕ ಸಮಾಜದಲ್ಲಿನ ಇತರ ವಿಕೃತ ಪುರುಷರಿಗೆ ಪಾಠವಾಗಬೇಕು ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಸಾವಿತ್ರಿ, ಆರೋಕ್ಯ ಮೇರಿ, ಪ್ರಕಾಶ್ಮೇರಿ, ಮೇರಿ ಪೊಟಾಡೊ, ಸೆಲ್ಲಾ, ಶಾಂತಾ ಮೊದಲಾದವರು ಇದ್ದರು.

Share this article