ಐಆರ್‌ಸಿಟಿಸಿ ಖಾತೆಗೆ ಶೀಘ್ರವೇ ಆಧಾರ್‌ ಲಿಂಕ್‌ ಕಡ್ಡಾಯ

KannadaprabhaNewsNetwork |  
Published : Jun 07, 2025, 01:05 AM IST

ಸಾರಾಂಶ

ಜನರು ಹೆಚ್ಚಾಗಿ ರೈಲ್ವೆ ಟಿಕೆಟ್‌ ಬುಕ್ಕಿಂಗ್‌ಗೆ ಐಆರ್‌ಸಿಟಿಸಿ ಪೋರ್ಟಲ್‌ನ್ನೆ ಬಳಸುತ್ತಾರೆ. ಟಿಕೆಟ್‌ ಬುಕ್ಕಿಂಗ್‌ನಲ್ಲಿ ಜನರಲ್‌, ಲೇಡಿಸ್‌, ಪಸರ್ನಲ್‌ ಡಿಸೆಬಲಿಟಿ, ಸೀನಿಯರ್‌ ಸಿಟಿಜನ್‌... ಹೀಗೆ ಬುಕ್ಕಿಂಗ್‌ ಮಾಡಬಹುದು

ಹುಬ್ಬಳ್ಳಿ: ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ರೈಲ್ವೆಯಲ್ಲಿ ಸಾವಿರಾರು ತತ್ಕಾಲ್‌ ಟಿಕೆಟ್‌ ಬುಕ್ಕಿಂಗ್‌ ಮಾಡುತ್ತಿರುವುದನ್ನು ತಡೆಯಲು ಐಆರ್‌ಸಿಟಿಸಿ ಖಾತೆಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಬಹುಶಃ ಜೂನ್‌ ಅಂತ್ಯದಿಂದ ಈ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ ಇದೆ. ಇದರಿಂದ ಆನ್‌ಲೈನ್‌ನಲ್ಲಿ ತತ್ಕಾಲ್‌ ಟಿಕೆಟ್‌ ಸಿಗುವುದೇ ಇಲ್ಲ ಎಂಬ ಗೊಣಗಾಟ ತಪ್ಪಲಿದೆ ಎಂಬ ವಿಶ್ವಾಸ ಇಲಾಖೆಯದ್ದು.

ಏನಿದು?:

ಜನರು ಹೆಚ್ಚಾಗಿ ರೈಲ್ವೆ ಟಿಕೆಟ್‌ ಬುಕ್ಕಿಂಗ್‌ಗೆ ಐಆರ್‌ಸಿಟಿಸಿ ಪೋರ್ಟಲ್‌ನ್ನೆ ಬಳಸುತ್ತಾರೆ. ಟಿಕೆಟ್‌ ಬುಕ್ಕಿಂಗ್‌ನಲ್ಲಿ ಜನರಲ್‌, ಲೇಡಿಸ್‌, ಪಸರ್ನಲ್‌ ಡಿಸೆಬಲಿಟಿ, ಸೀನಿಯರ್‌ ಸಿಟಿಜನ್‌... ಹೀಗೆ ಬುಕ್ಕಿಂಗ್‌ ಮಾಡಬಹುದು. ಸಾಮಾನ್ಯ ಟಿಕೆಟ್‌ ಸಿಗದಿದ್ದರೆ, ರೈಲು ಬಿಡುವ ಹಿಂದಿನ ದಿನ ಬೆಳಗ್ಗೆ 10ರಿಂದ ರೈಲ್ವೆ ನಿಲ್ದಾಣದಲ್ಲಿ ಭೌತಿಕವಾಗಿ ಹಾಗೂ 11 ಗಂಟೆಯಿಂದ ಆನ್‌ಲೈನ್ ಮೂಲಕ ತತ್ಕಾಲ್ ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ನೀಡಿದೆ. ರೈಲ್ವೆ ನಿಲ್ದಾಣದಲ್ಲಿ ಭೌತಿಕವಾಗಿ ತತ್ಕಾಲ್‌ನಲ್ಲಿ ಟಿಕೆಟ್ ಪಡೆದುಕೊಳ್ಳುವುದು ಸಲೀಸು. ಆದರೆ, ಆನ್‌ಲೈನ್‌ನಲ್ಲಿ ಮಾತ್ರ ಪ್ರಯಾಣಿಕರು ನೇರವಾಗಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡುವುದು ಸಾಧ್ಯವೇ ಆಗುತ್ತಿರಲಿಲ್ಲ. ಇತ್ತೀಚಿಗೆ ಎಐ ತಂತ್ರಜ್ಞಾನ ಬಂದ ಬಳಿಕವಂತೂ ಈ ತಂತ್ರಜ್ಞಾನ ಬಳಸಿ ಕೆಲವರು ಸಾವಿರಾರು ನಕಲಿ ಖಾತೆಗಳನ್ನು ಹೊಂದಿದ್ದರು. ಎಲ್ಲವೂ ಕಂಪ್ಯೂಟರ್‌ ಬೇಸ್ಡ್‌ ವ್ಯವಹಾರ. ತತ್ಕಾಲ್‌ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿ ಹತ್ತು ಹದಿನೈದು ಸೆಕೆಂಡ್‌ಗಳಲ್ಲೇ ಸಾವಿರಾರು ಟಿಕೆಟ್‌ಗಳನ್ನು ಬುಕ್‌ ಮಾಡಿಕೊಳ್ಳುತ್ತಿದ್ದವಂತೆ ಈ ನಕಲಿ ಖಾತೆಗಳು. ಬಳಿಕ ಅವುಗಳನ್ನು ಪ್ರಯಾಣಿಕರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆಯಂತೆ. ಏಜೆಂಟರೇ ಎಐ ತಂತ್ರಜ್ಞಾನ ಬಳಸಿ ಈ ರೀತಿ ಟಿಕೆಟ್‌ಗಳನ್ನು ಬುಕ್‌ ಮಾಡಿಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಸಾವಿರಾರು ನಕಲಿ ಖಾತೆಗಳನ್ನು ಪತ್ತೆ ಹಚ್ಚಿರುವ ಐಆರ್‌ಸಿಟಿಸಿಯು ಇದೀಗ, ಆ ಖಾತೆಗಳನ್ನೇ ರದ್ದುಪಡಿಸಿದೆಯಂತೆ. ಈ ಕಾರಣದಿಂದಲೇ ಇತ್ತೀಚಿಗೆ ಕಳೆದ 8-10 ದಿನಗಳಿಂದ ಐಆರ್‌ಸಿಟಿಸಿ ವೆಬ್‌ನಲ್ಲಿ ತಾಂತ್ರಿಕ ತೊಂದರೆ ಕೂಡ ಕಂಡು ಬರುತ್ತಿತ್ತು.

ಹೀಗಾಗಿ ಇನ್ಮುಂದೆ ಮೋಸ ಮಾಡುವುದನ್ನು ತಡೆಯಲು, ನೈಜ ಪ್ರಯಾಣಿಕರಿಗೆ ತತ್ಕಾಲ್‌ ಟಿಕೆಟ್‌ ಸುಲಭವಾಗಿ ಸಿಗುವಂತೆ ಮಾಡಲು ಐಆರ್‌ಸಿಟಿಸಿ ಖಾತೆಗೆ ಇನ್ಮೇಲೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಆಗ ಯಾರೇ ಆದರೂ ತತ್ಕಾಲ್‌ನಲ್ಲಿ ಟಿಕೆಟ್‌ ಬುಕ್‌ ಮಾಡಬೇಕೆಂದರೂ ಆಧಾರ್‌ ಕಾರ್ಡ್‌ ನಂಬರ್‌ ಕೇಳುತ್ತದೆ. ಬಳಿಕ ಆ ಕಾರ್ಡ್‌ಗೆ ಲಿಂಕ್‌ ಇರುವ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದ ಮೇಲಷ್ಟೇ ಟಿಕೆಟ್‌ ಬುಕ್‌ ಆಗುತ್ತದೆ. ನೈಜ್‌ ಪ್ರಯಾಣಿಕ ಇದನ್ನು ಮಾಡಬಹುದು. ಆದರೆ, ಎಐ ಆಧಾರಿತವಾಗಿ ನಕಲಿ ಖಾತೆಗಳ ಮೂಲಕ ಟಿಕೆಟ್‌ ಮಾಡುವವರಿಗೆ ಇದು ಸಾಧ್ಯವಾಗಲ್ಲ ಎಂಬ ವಿಶ್ವಾಸ ಅಧಿಕಾರಿ ವರ್ಗದ್ದು.

ಒಟ್ಟಿನಲ್ಲಿ ಏನೇ ಆದರೂ ತತ್ಕಾಲ್‌ ಟಿಕೆಟ್‌ನಲ್ಲಿ ಆಗುತ್ತಿದ್ದ ಮೋಸ ತಡೆಯಲು ರೈಲ್ವೆ ಇಲಾಖೆ ಇಡುತ್ತಿರುವ ದಿಟ್ಟ ಹೆಜ್ಜೆಗೆ ಸಾರ್ವಜನಿಕರಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿರುವುದಂತೂ ಸತ್ಯ. ಆದಷ್ಟು ಬೇಗನೆ ಇದು ಜಾರಿಯಾಗಲಿ ಎಂಬುದು ಪ್ರಯಾಣಿಕರ ಅಭಿಲಾಷೆ.

ಎಐ ತಂತ್ರಜ್ಞಾನ ಬಳಸಿ ಸಾವಿರಾರು ತತ್ಕಾಲ್‌ ಟಿಕೆಟ್‌ಗಳನ್ನು ನಕಲಿ ಖಾತೆಗಳ ಮೂಲಕ ಅಟೋಮೆಟಿಕ್‌ ಆಗಿ ಬುಕ್‌ ಮಾಡಲಾಗುತ್ತಿತ್ತು. ಇದನ್ನು ತಡೆಯಲು ಐಆರ್‌ಸಿಟಿಸಿ ಖಾತೆಗೆ ಇನ್ಮೇಲೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಲು ಇಲಾಖೆ ನಿರ್ಧರಿಸಿದೆ. ಇದರಿಂದ ನಕಲಿ ಖಾತೆಗಳಿಂದ ಟಿಕೆಟ್‌ ಬುಕ್ಕಿಂಗ್‌ ತಡೆಯಬಹುದಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?