ಆಧಾರ್‌ ಲಾಕ್, ಪದವಿ ಪ್ರವೇಶಕ್ಕೂ ಅಡ್ಡಿ!

KannadaprabhaNewsNetwork | Published : Jul 11, 2024 1:32 AM

ಸಾರಾಂಶ

ಈತನ ಆಧಾರ್‌ ಕಾರ್ಡ್ ಲಾಕ್ ಆಗಿದೆ. ಅಪ್ಡೇಟ್ ಸಹ ಆಗುತ್ತಿಲ್ಲ. ರದ್ದು ಮಾಡಿ, ಹೊಸದನ್ನು ಮಾಡಿಸಲು ಆಗುತ್ತಿಲ್ಲ. ಪರಿಣಾಮ ಈತ ಕಳೆದೊಂದು ವರ್ಷದಿಂದ ಪದವಿ ಓದುವ ಆಸೆಗೂ ಅಡ್ಡಿಯಾಗಿದೆ.

ಮಾಟಲದಿನ್ನಿ ಗ್ರಾಮದ ಯುವಕನ ಗೋಳು

ತನ್ನ ಆಧಾರ್‌ ಕಾರ್ಡಗೆ ತಮ್ಮನ ಹೆಬ್ಬೆರಳು ಗುರ್ತು

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಈತನ ಆಧಾರ್‌ ಕಾರ್ಡ್ ಲಾಕ್ ಆಗಿದೆ. ಅಪ್ಡೇಟ್ ಸಹ ಆಗುತ್ತಿಲ್ಲ. ರದ್ದು ಮಾಡಿ, ಹೊಸದನ್ನು ಮಾಡಿಸಲು ಆಗುತ್ತಿಲ್ಲ. ಪರಿಣಾಮ ಈತ ಕಳೆದೊಂದು ವರ್ಷದಿಂದ ಪದವಿ ಓದುವ ಆಸೆಗೂ ಅಡ್ಡಿಯಾಗಿದೆ.

ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಮದ ನಿವಾಸಿ ಸಿದ್ದೇಶ ಶರಣಪ್ಪ ಘಂಟಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾನೆ. ಇದಕ್ಕಾಗಿ ಕಳೆದೆರಡು- ಮೂರು ವರ್ಷಗಳಿಂದ ಕಚೇರಿಗೆ ಸುತ್ತಾಡಿ ಸುಸ್ತಾಗಿದ್ದಾನೆ. ಕಳೆದ ವರ್ಷವೂ ಪದವಿ ಪ್ರವೇಶ ಪಡೆಯಲು ಯತ್ನಿಸಿ, ವಿಫಲವಾಗಿರುವ ಈಗ ಈ ವರ್ಷವೂ ಪ್ರವೇಶ ದೊರೆಯದಂತಾಗಿ ದಿಕ್ಕು ತೋಚದಂತಾಗಿದ್ದಾನೆ.

ಪಿಯುಸಿಯಲ್ಲಿ ಪಾಸಾಗಿದ್ದರೂ ಸಹ ಆಧಾರ್‌ ಕಾರ್ಡ್ ಲಾಕ್ ಆಗಿರುವುದರಿಂದ ಈತನಿಗೆ ಪ್ರವೇಶ ದೊರೆಯುತ್ತಿಲ್ಲ.

ಪದವಿ ಪ್ರವೇಶಕ್ಕೆ ಮೊದಲು ಅರ್ಜಿ ಹಾಕಲು ಆಧಾರ್‌ ಕಾರ್ಡ್ ಕಡ್ಡಾಯ. ಆದರೆ, ಈತನ ಆಧಾರ್‌ ಕಾರ್ಡ್ ಲಾಕ್ ಆಗಿರುವುದರಿಂದ ಈತನಿಗೆ ಪ್ರವೇಶ ದೊರೆಯದಂತಾಗಿದೆ.

ಆಗಿದ್ದೇನು? ಸಿದ್ದೇಶ ಘಂಟಿ ಚಿಕ್ಕವನಿರುವಾಗಲೇ ಆಧಾರ್‌ ಕಾರ್ಡ್‌ ಮಾಡಿಸಿದ್ದಾನೆ. ಆ ವೇಳೆಯಲ್ಲಿ ಈತನ ಸಹೋದರ ದುರುಗರಾಜನು ಸಹ ಮಾಡಿಸಿದ್ದಾನೆ. ಆಗ ಈತನ ಆಧಾರ್‌ಗೆ ಈತನ ಸಹೋದರನ ಹೆಬ್ಬೆರಳು (ಫಿಂಗರ್ ಪ್ರಿಂಟ್) ತೆಗೆದುಕೊಂಡಿದ್ದು, ಆತನ ಕಾರ್ಡ್‌ಗೆ ಈತನ ಫಿಂಗರ್ ಪ್ರಿಂಟ್ ತೆಗೆದುಕೊಂಡಿದ್ದಾರೆ.

ಈಗ ಆಧಾರ್‌ ಕಾರ್ಡ್ ಅಪ್ಡೇಟ್ ಮಾಡಲು ಹೋದಾಗ ಅದು ಲಾಕ್ ಆಗಿದೆ. ಹೀಗಾಗಿ, ಈಗ ಅದನ್ನು ರದ್ದು ಮಾಡಲು ಆಗುತ್ತಿಲ್ಲ, ತಿದ್ದಲು ಆಗುತ್ತಿಲ್ಲ. ನಾಲ್ಕು ಬಾರಿ ಹೊಸ ಅರ್ಜಿ ಹಾಕಿದರೆ ಈಗಾಗಲೇ ನೀವು ಆಧಾರ್‌ ಹೊಂದಿದ್ದೀರಿ ಎಂದು ಅರ್ಜಿ ತಿರಸ್ಕಾರ ಮಾಡುತ್ತಾರೆ. ಆಗಿರುವ ತಪ್ಪು ತಿದ್ದುಪಡಿ ಮಾಡಲು ಹೋದರೂ ತೆಗೆದುಕೊಳ್ಳುತ್ತಿಲ್ಲ.

ಪರಿಣಾಮ ಓದಿಗೆ ಬ್ರೇಕ್ ಬಿದ್ದಿದ್ದು, ದಿಕ್ಕು ತಿಳಿಯದಾಗಿರುವ ಸಿದ್ದೇಶ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಎಲ್ಲ ಕಚೇರಿ ಸುತ್ತಿ ಸುತ್ತಿ ಸುಸ್ತಾಗಿದ್ದಾನೆ. ಆಧಾರ ಅಧಿಕಾರಿಯನ್ನು ಭೇಟಿಯಾಗಿ ತಿದ್ದುಪಡಿ ಮಾಡಿಸುವ ಯತ್ನ ಮಾಡಿದ್ದಾನೆ. ಆದರೆ, ಅವರಿಂದಲೂ ಸಾಧ್ಯವಾಗಿಲ್ಲ. ಕಾರಣ ಈತನ ಆಧಾರ ಕಾರ್ಡ್ ಗೆ ಈತನ ಸಹೋದರನ ಪಿಂಗರ್ ಪ್ರಿಂಟ್ ಇರುವುದರಿಂದ ತಿದ್ದುಪಡಿಗೂ ತೆಗೆದುಕೊಳ್ಳುತ್ತಿಲ್ಲ ಎಂದು ಆಧಾರ ಅಧಿಕಾರಿಗಳು ಕೈ ಚಲ್ಲಿದ್ದಾರೆ.

ಈತನ ಆಧಾರ ಕಾರ್ಡ್ ಮಿಕ್ಸ್ ಆಗಿದೆ. ಈತನ ಫೋಟೋ, ಇವರ ಸಹೋದರನ ಪಿಂಗರ್ ಪ್ರಿಂಟ್ ಇರುವುದರಿಂದ ಸಮಸ್ಯೆಯಾಗಿದ್ದು, ಮುಖ್ಯ ಕಚೇರಿಯಲ್ಲಿಯೇ ಸರಿಪಡಿಸಿಕೊಳ್ಳಬೇಕು. ಇಲ್ಲಿ ಪ್ರಯತ್ನ ಮಾಡಿದರೂ ಆಗಿಲ್ಲ ಎನ್ನುತ್ತಾರೆ ಜಿಲ್ಲಾ ಆಧಾರ್‌ ಕಾರ್ಡ್ ನೋಂದಣಿ ಅಧಿಕಾರಿ ಜಾಫರ್.

ನನ್ನ ಆಧಾರ್‌ ಕಾರ್ಡ್ ಸಮಸ್ಯೆಯಿಂದ ನನ್ನ ಓದಿಗೆ ಸಮಸ್ಯೆಯಾಗಿದೆ. ಪದವಿ ಓದುವ ಪ್ರಯತ್ನಕ್ಕೆ ಅಡ್ಡಿಯಾಗಿದೆ. ಸರಿಪಡಿಸಿಕೊಡುವಂತೆ ಮನವಿ ಮಾಡಿದರೂ ಯಾರೂ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ವಿದ್ಯಾರ್ಥಿ ಸಿದ್ಧೇಶ ಘಂಟಿ.

Share this article