ಪಟ್ಟಣದ ಮೂರು ಕಡೆಗಳಲ್ಲಿ ಮಾತ್ರ ಆಧಾರ, ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಜನರು ನೋಂದಣಿ ಹಾಗೂ ತಿದ್ದುಪಡಿ ಮಾಡಲು ಗಂಟೆಗಟ್ಟಲೇ ಸರದಿಯಲ್ಲಿ ಕಾಯಬೇಕಾದ ಸ್ಥಿತಿ ಬಂದೊದಗಿದೆ.
ರವಿ ಮೇಗಳಮನಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು
ಪಟ್ಟಣದ ಮೂರು ಕಡೆಗಳಲ್ಲಿ ಮಾತ್ರ ಆಧಾರ, ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಜನರು ನೋಂದಣಿ ಹಾಗೂ ತಿದ್ದುಪಡಿ ಮಾಡಲು ಗಂಟೆಗಟ್ಟಲೇ ಸರದಿಯಲ್ಲಿ ಕಾಯಬೇಕಾದ ಸ್ಥಿತಿ ಬಂದೊದಗಿದೆ. ದಿನದ ಕೂಲಿ ಹಾಗೂ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರು, ಇಡೀ ದಿನ ಕೇಂದ್ರದಲ್ಲೇ ನಿಲ್ಲುವಂತಾಗಿದೆ. ಇದರಿಂದಾಗಿ, ಅವರ ದಿನದ ಕೂಲಿ ಕೈತಪ್ಪುತ್ತಿದೆ.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತೆರೆಯಲಾಗಿದ್ದ ಆಧಾರ್ ಸೇವಾ ಕೇಂದ್ರ ಬಂದ್ ಮಾಡಿ ಒಂದು ವರ್ಷವಾಗಿದೆ. ಈಗ ಪಟ್ಟಣದ ಅಂಚೆ ಕಚೇರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬಿಎಸ್‌ಎನ್‌ಎಲ್ ಕಚೇರಿಗಳಲ್ಲಿ ಮಾತ್ರ ಆಧಾರ್ ಸೇವಾ ಕೇಂದ್ರಗಳಿವೆ. ಇದೇ ಕೇಂದ್ರಗಳಲ್ಲಿ ನೋಂದಣಿ, ನವೀಕರಣ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ತಾಲೂಕಿನ ಎಲ್ಲ ಜನರು, ಅಧಾರ್ ಸಂಬಂಧಿತ ಕೆಲಸಗಳಿಗಾಗಿ ಈ ಮೂರು ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಮೂರು ಕೇಂದ್ರಗಳಲ್ಲಿ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದು, ನೋಂದಣಿ ಹಾಗೂ ತಿದ್ದುಪಡಿಗೆ ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಕೆಲವರಂತೂ ಮರುದಿನ ಬಂದು ಆಧಾರ್ ಕೆಲಸ ಮಾಡಿಕೊಂಡು ಹೋಗುತ್ತಿರುವುದು ಕಂಡುಬರುತ್ತಿದೆ. ಬ್ಯಾಂಕ್ ಖಾತೆ, ನೇರ ನಗದು ವರ್ಗಾವಣೆ ರೇಶನ್ ಕಾರ್ಡು ಸೇರಿದಂತೆ ಸರ್ಕಾರದ ಪ್ರತಿಯೊಂದು ಯೋಜನೆಯ ಲಾಭ ಪಡೆಯಲು ಅಧಾರ ಕಡ್ಡಾಯ ಮಾಡಲಾಗಿದೆ. ಗ್ರಾಮೀಣ ಜನರು ಹೆಚ್ಚಿರುವ ತಾಲ್ಲೂಕಿನಲ್ಲಿ ಹಲವರ ಆಧಾರ್ ಕಾರ್ಡಗಳಲ್ಲಿ ಸಣ್ಣ ಪುಟ್ಟ ಲೋಪಗಳಿವೆ. ವಯಸ್ಸು, ಫೋಟೊ, ಬಯೋಮೆಟ್ರಿಕ್… ಹೀಗೆ ನಾನಾ ಸಮಸ್ಯೆಗಳಿವೆ. ಇವುಗಳನ್ನು ನಿವಾರಣೆ ಮಾಡಿಕೊಂಡು ಹೊಸ ಆಧಾರ್ ಕಾರ್ಡ್ ಪಡೆಯಲು ಸೇವಾ ಕೇಂದ್ರಗಳು ಅಗತ್ಯವಿವೆ. ಆದರೆ, ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿನ ಕೇಂದ್ರ ಬಂದ್ ಆಗಿರುವುದರಿಂದ ಜನರು ಪರಿತಪಿಸುತ್ತಿದ್ದಾರೆ.
ತಾಲೂಕಿನಲ್ಲಿ 19 ಗ್ರಾಮ ಪಂಚಾಯಿತಿ ಒಳಗೊಂಡಂತೆ 67 ಗ್ರಾಮಗಳ ಜನತೆಯು ಪ್ರತಿಯೊಂದು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಮಕ್ಕಳ ಶೈಕ್ಷಣಿಕ ದಾಖಲಾತಿಗೆ, ಶಕ್ತಿಯೋಜನೆಯಡಿ ಹೆಣ್ಣುಮಕ್ಕಳು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಆಧಾರ ಕಾರ್ಡ್ ಬೇಕು. ಸರ್ಕಾರದ `ಮನಸ್ವಿನಿ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನ ಮಂಜೂರಾತಿ, ಅಂಗವಿಕಲರ ಪ್ರಮಾಣಪತ್ರ ಪಡೆಯಲು, ವೈದ್ಯಕೀಯ ಸೌಲಭ್ಯ ಪಡೆಯಲು ಸೇರಿದಂತೆ ಮುಂತಾದ ಸೌಲಭ್ಯಗಳಿಗೆ ಆಧಾರ ಕಡ್ಡಾಯವಿದೆ. ಆದರೆ, ಮೂರು ಆಧಾರ್ ಸೇವಾ ಕೇಂದ್ರಗಳು ಇರುವುದರಿಂದ, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮತ್ತಷ್ಟು ಸೇವಾ ಕೇಂದ್ರಗಳನ್ನು ತೆರೆಯುವಂತೆಯೂ ಒತ್ತಾಯಿಸುತ್ತಿದ್ದಾರೆ. ''''''''ಒಂದು ದಿನದ ಕೂಲಿ ಬಿಟ್ಟು ಬೆಳಗ್ಗೆಯೇ ಬಂದು ಅಧಾರ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ನಿಂತು ಅಧಾರ, ತಿದ್ದುಪಡಿ ಮಾಡಿಸಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ಗೈರಾಗಿ, ಆಧಾರ್ ಕೇಂದ್ರದ ಎದುರು ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಲ್ಲುತ್ತಿದ್ದಾರೆ. ತಾಯಂದಿರು. ಮಕ್ಕಳ ಸಮತ ಕಾಯುತ್ತಿದ್ದಾರೆ. ಅನೇಕ ಬಾರಿ ಸರ್ವರ್ ಸಮಸ್ಯೆಯಿಂದ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಒಂದು ಕೇಂದ್ರದಲ್ಲಿ ದಿನಕ್ಕೆ ಕೇವಲ 30ರಿಂದ 45 ಜನರ ಕೆಲಸ ಆಗುತ್ತಿದೆ. ಉಳಿದವರು ಸರದಿಯಲ್ಲಿ ನಿಂತು ಹೋಗುವಂತಾಗಿದೆ. ಕೇಂದ್ರದಿಂದ ಕೇಂದ್ರಕ್ಕೆ ಅಲೆಯು ವಂತಾಗಿದೆ. ಹಿರೇಕೆರೂರಿನಲ್ಲಿ ಮತ್ತಷ್ಟು ಸೇವಾ ಕೇಂದ್ರಗಳನ್ನು ತೆರೆಯಬೇಕು. ಪಟ್ಟಣ ಮಾತ್ರವಲ್ಲದೇ ಹೋಬಳಿ ಮಟ್ಟದಲ್ಲೂ ಕೇಂದ್ರ ಆರಂಭಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಹಸೀಲ್ದಾರ್ ಕಚೇರಿಯಲ್ಲಿ ಅಧಾರ ಕೇಂದ್ರವನ್ನು ಕೂಡಲೆ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದೆ ಹೋದರೆ ಕಚೇರಿ ಎದುರು ಸಂಘಟನೆಯಿಂದ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಂಘದ ಜಿಲ್ಲಾ ಅಧ್ಯಕ್ಷ ಗಿರೀಶ ಬಾರ್ಕಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತೆರೆಯಲಾಗಿದ್ದ ಆಧಾರ್ ಸೇವಾ ಕೇಂದ್ರ ಬಂದ್ ಆಗಿರುವ ಕುರಿತು ಮೂರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಸಂಬಂಧ ಕೂಡಲೇ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಹಿರೇಕೆರೂರು ತಹಸೀಲ್ದಾರ್-2 ಎಸ್. ಆರ್. ಸಿದ್ದನಗೌಡರ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.