ಪರಿತ್ಯಕ್ತ ಮಕ್ಕಳ ಆಧಾರ್ ನೋಂದಣಿಗೆ ‘ಸಾಥಿ’: ನ್ಯಾಯಾಧೀಶ ಎಂ.ಎಸ್‌.ಸಂತೋಷ್

KannadaprabhaNewsNetwork |  
Published : Jun 03, 2025, 02:19 AM IST
ಪೋಟೋ: 02ಎಸ್‌ಎಂಜಿಕೆಪಿ07ಶಿವಮೊಗ್ಗ ನಗರದ ಕೋರ್ಟ್ ಸಭಾಂಗಣದಲ್ಲಿ ಸೋಮವಾರ ಪಾಲನೆ ಮತ್ತು ಸಂರಕ್ಷಣೆ ಬೇಕಾಗಿರುವ ಮಕ್ಕಳಿಗೆ ಆಧಾರ್ ನೋಂದಣಿ, ಸರ್ಕಾರಿ ಯೋಜನೆಗಳ ಸೇರ್ಪಡೆ ಮತ್ತು  ಟ್ರ್ಯಾಕಿಂಗ್‌ಗಾಗಿ ‘ಸಾಥಿ’ ಅಭಿಯಾನದ ಅಂಗವಾಗಿ ಸಮಿತಿ ಸದಸ್ಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಮಾತನಾಡಿದರು.  | Kannada Prabha

ಸಾರಾಂಶ

ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ನೀಡುವ ಉದ್ದೇಶಕ್ಕಾಗಿ ಪಾಲನೆ ಮತ್ತು ಸಂರಕ್ಷಣೆ ಬೇಕಾಗಿರುವ ಪರಿತ್ಯಕ್ತ ಮಕ್ಕಳು ಹಾಗೂ ಇನ್ನಿತರೆ ಕಾರಣಗಳಿಗೆ ಆಧಾರ್ ನೊಂದಣಿಯಾಗದ ಮಕ್ಕಳಿಗೆ ಆಧಾರ್ ನೋಂದಣಿ ಮಾಡಿಸಲು ‘ಸಾಥಿ’ ಅಭಿಯಾನ ಕೈಗೊಳ್ಳಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕು

ಅಭಿಯಾನದ ಅಂಗವಾಗಿ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ನೀಡುವ ಉದ್ದೇಶಕ್ಕಾಗಿ ಪಾಲನೆ ಮತ್ತು ಸಂರಕ್ಷಣೆ ಬೇಕಾಗಿರುವ ಪರಿತ್ಯಕ್ತ ಮಕ್ಕಳು ಹಾಗೂ ಇನ್ನಿತರೆ ಕಾರಣಗಳಿಗೆ ಆಧಾರ್ ನೊಂದಣಿಯಾಗದ ಮಕ್ಕಳಿಗೆ ಆಧಾರ್ ನೋಂದಣಿ ಮಾಡಿಸಲು ‘ಸಾಥಿ’ ಅಭಿಯಾನ ಕೈಗೊಳ್ಳಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ತಿಳಿಸಿದರು.

ಇಲ್ಲಿನ ಕೋರ್ಟ್ ಸಭಾಂಗಣದಲ್ಲಿ ಸೋಮವಾರ ಪಾಲನೆ ಮತ್ತು ಸಂರಕ್ಷಣೆ ಬೇಕಾಗಿರುವ ಮಕ್ಕಳಿಗೆ ಆಧಾರ್ ನೋಂದಣಿ, ಸರ್ಕಾರಿ ಯೋಜನೆಗಳ ಸೇರ್ಪಡೆ ಮತ್ತು ಟ್ರ್ಯಾಕಿಂಗ್‌ಗೆ ‘ಸಾಥಿ’ ಅಭಿಯಾನದ ಅಂಗವಾಗಿ ಸಮಿತಿ ಸದಸ್ಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿರುವನ್ವಯ ತಂದೆ-ತಾಯಿ ಇಲ್ಲದಿರುವ ಪರಿತ್ಯಕ್ತ ಮಕ್ಕಳು, ವಲಸೆ ಇನ್ನಾವುದೇ ಕಾರಣಗಳಿಂದ ಆಧಾರ್ ಹೊಂದಿರದ ಮಕ್ಕಳನ್ನು ಗುರುತಿಸಿ ಆಧಾರ್ ಕಾರ್ಡ್ ನೀಡಲು ‘ಸಾಥಿ’ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. ಪರಿತ್ಯಕ್ತ ಮಕ್ಕಳಿಗೆ ಕಾನೂನು ಗುರುತು ಮತ್ತು ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.

ಮಕ್ಕಳನ್ನು ಗುರುತಿಸಿ ಆಧಾರ್ ನೋಂದಣಿ ಮಾಡಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ ಸಾಥಿ ಸಮಿತಿಯನ್ನು ಸಹ ರಚಿಸಲಾಗಿದ್ದು, ಅವರ ಪಾತ್ರಗಳನ್ನು ಈಗಾಗಲೇ ತಿಳಿಸಲಾಗಿದೆ.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮೂಲಕ ಇಂತಹ ಮಕ್ಕಳನ್ನು ಗುರುತಿಸಲು ಸರ್ವೇ ನಡೆಸಲಾಗುವುದು ಎಂದು ತಿಳಿಸಿದರು.

ಹೀಗೆ ಗುರುತಿಸಲ್ಪಟ್ಟ ಮಕ್ಕಳಿಗೆ ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಲಭ್ಯವಿರುವ ಆಧಾರ್ ಕೇಂದ್ರಗಳಲ್ಲಿ ಆಧಾರ್ ನೋಂದಣಿ ಮಾಡಿಸಬೇಕು. ಆಧಾರ್ ಜತೆಗೆ ಜನನ ದೃಢೀಕರಣ ಪತ್ರವೂ ಇಲ್ಲದಿದ್ದರೆ ಕಾನೂನು ಸೇವೆಗಳ ಪ್ರಾಧಿಕಾರದ ಗಮನಕ್ಕೆ ತಂದಲ್ಲಿ ಉಚಿತವಾಗಿ ಮಾಡಿಸಿಕೊಡಲಾಗುವುದು ಎಂದರು.

ಜೂ.26 ರೊಳಗೆ ಆಧಾರ್ ಇಲ್ಲದ ಮಕ್ಕಳನ್ನು ಗುರುತಿಸಿ, ಜೂ.27 ರಿಂದ ಆ.5ರ ವರೆಗೆ ಆಧಾರ್ ನೋಂದಣಿ ಮಾಡಿಸಬೇಕು. ಆ.9ಕ್ಕೆ ಜಿಲ್ಲೆಯಿಂದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೋಂದಣಿ ಕುರಿತಾದ ವರದಿ ಸಲ್ಲಿಸಬೇಕು. ಆ.15ರಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿ ಮಾಡಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಯಾವುದೇ ಪರಿತ್ಯಕ್ತ ಮಕ್ಕಳು, ಇತರೆ ಮಕ್ಕಳು ಆಧಾರ್ ನೋಂದಣಿಯಿಂದ ಹೊರಗುಳಿಯದಂತೆ ಅವರನ್ನು ಗುರುತಿಸಿ ಆಧಾರ್ ನೋಂದಣಿ ಮಾಡಿಸುವ ಮೂಲಕ ಈ ಸಾಥಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಡಿಡಿಪಿಐ ಮಂಜುನಾಥ್, ಡಿವೈಎಸ್‌ಪಿ ಬಾಬು ಅಂಜನಪ್ಪ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಪ್ರದೀಪ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಸಿಡಬ್ಲ್ಯುಸಿ ಅಧ್ಯಕ್ಷ ತಾಜುದ್ದೀನ್ ಖಾನ್, ಆಧಾರ್ ಸಂಯೋಜಕರು, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ಯಾನಲ್ ವಕೀಲರು, ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ