ಜಿಲ್ಲೆಯಲ್ಲಿ 1 ಲಕ್ಷ 40 ಸಾವಿರ ಮಕ್ಕಳ ಆಧಾರ್ ನವೀಕರಣ ಬಾಕಿ: ಡಾ.ಕುಮಾರ್

KannadaprabhaNewsNetwork |  
Published : Sep 19, 2025, 01:00 AM IST
18ಕೆಎಂಎನ್ ಡಿ26 | Kannada Prabha

ಸಾರಾಂಶ

ಪ್ರಸ್ತುತ ಜಿಲ್ಲೆಯಲ್ಲಿ 5 ವರ್ಷಗಳಿಗಿಂತ ಕಡಿಮೆ ವಯಸ್ಸಿನ 44,164 ಮಕ್ಕಳಿಗೆ ಆಧಾರ್ ನೋಂದಣಿಯಾಗಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಜವಾಬ್ದಾರಿ ನೀಡಿ ವಿಶೇಷ ಆಧಾರ್ ಶಿಬಿರವನ್ನು ಆಯೋಜಿಸಿ ಎಲ್ಲಾ ಮಕ್ಕಳಿಗೂ ಬಾಲ ಆಧಾರ್ ನೋಂದಣಿ ಮಾಡಿಸಿ ಎಂದು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ 1,40, 624 ಮಕ್ಕಳಿಗೆ ಆಧಾರ್ ನವೀಕರಣ ಬಾಕಿ ಇದ್ದು, ಶಾಲಾವಾರು ಪಟ್ಟಿ ಸಿದ್ಧಪಡಿಸಿ ಆಯಾ ಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು ನವೀಕರಣಗೊಳ್ಳದ ಮಕ್ಕಳ ಬಯೋಮೆಟ್ರಿಕ್ ನೀಡಿ ಆಧಾರ್ ನವೀಕರಣಕ್ಕೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಆಧಾರ್ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಮಾತನಾಡಿ, 5 ವರ್ಷದ ನಂತರ ಆಧಾರ್ ನಲ್ಲಿ ಮಕ್ಕಳ ಬಯೋಮೆಟ್ರಿಕ್ ಪಡೆದುಕೊಳ್ಳುತ್ತಾರೆ. ಮಕ್ಕಳಿಗೆ ಸರ್ಕಾರದಿಂದ ನೀಡಲಾಗುವ ಎಲ್ಲಾ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ. ಬಯೋಮೆಟ್ರಿಕ್ ನೀಡದ ಮಕ್ಕಳ ಆಧಾರ್ ನವೀಕರಣಕ್ಕೆ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಮಾನಸಿಕ ಅಸ್ವಸ್ಥರು, ವೃದ್ಧರು ಸೇರಿ 18 ವರ್ಷ ಮೇಲ್ಪಟ್ಟ 800ಕ್ಕೂ ಹೆಚ್ಚು ಜನ ಆಧಾರ್ ನಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಆಧಾರ್ ನಲ್ಲಿ ನೋಂದಣಿ ಆಗದವರ ಪಟ್ಟಿ ತೆಗೆದುಕೊಂಡು ಅವರಿಗೆ ದಾಖಲಾತಿಗಳನ್ನು ಸಿದ್ಧಪಡಿಸಿ 1 ತಿಂಗಳ ಒಳಗಾಗಿ ಆಧಾರ್ ನೋಂದಣಿ ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ 188 ಆಧಾರ್ ಸೇವಾ ಕೇಂದ್ರಗಳಿವೆ. ಆಯ್ದ ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ಗಳಲ್ಲಿ ಸಹ ಆಧಾರ್ ನೋಂದಣಿ ಮತ್ತು ನವೀಕರಣ ನಡೆಯುತ್ತದೆ‌. ಕೇಂದ್ರಗಳ ಮುಂದೆ ಸಾರ್ವಜನಿಕರಿಗೆ ಆಧಾರ್ ನವೀಕರಣ ಹಾಗೂ ಅವಶ್ಯಕತೆ ಬಗ್ಗೆ ಮಾಹಿತಿ ಅನಾವರಣಗೊಳಿಸಬೇಕು. ಕರಪತ್ರ ಹಾಗೂ ಬ್ಯಾನರ್ ಅನಾವರಣಗೊಳಿಸಿ ಹೆಚ್ಚಿನ ಪ್ರಚಾರ ನೀಡುವಂತೆ ಸಲಹೆ ನೀಡಿದರು.

10 ವರ್ಷಗಳ ಹಿಂದೆ ಯಾವುದೇ ದಾಖಲಾತಿ ನೀಡದೆ ಆಧಾರ್ ಮಾಡಿಸಿಕೊಂಡಿರುವವರು ಇದ್ದರೆ ಅಂತಹವರು ವಾಸಸ್ಥಳ ದೃಢೀಕರಣ ಪತ್ರ ನೀಡಿ ದಾಖಲೆಗಳನ್ನು ನವೀಕರಿಸಬೇಕು. ಇಲ್ಲದಿದ್ದರೆ ಆಧಾರ್ ಸಂಖ್ಯೆ ನಿಷ್ಕ್ರಿಯೆಗೊಳ್ಳುತ್ತದೆ. ಇದರಿಂದ ಇತರೆ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ದಾಖಲೆ ನವೀಕರಣವನ್ನು ಸ್ವತಃ ತಾವೇ ತಮ್ಮ ಮೊಬೈಲ್ ನಲ್ಲಿ ಉಚಿತವಾಗಿ ಮಾಡಬಹುದು ಅಥವಾ ಆಧಾರ್ ಸೇವಾ ಕೇಂದ್ರದಲ್ಲಿ 50 ರು. ಪಾವತಿ‌ಸಿ ದಾಖಲೆಗಳನ್ನು ನವೀಕರಿಸಿಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1,18,539 ಜನರು ತಮ್ಮ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿಕೊಂಡಿಲ್ಲ. ಅನಕ್ಷರಸ್ಥರು ಹಾಗೂ ಗ್ರಾಮೀಣ ಭಾಗದ ಕೆಲವರಿಗೆ ವಿಳಾಸ ಮತ್ತು ಮೊಬೈಲ್ ನಂಬರ್ ಅಪ್ಡೇಟ್ ಮಾಡಿಸುವುದು ತಿಳಿಯುವುದಿಲ್ಲ. ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗಳು ಇದರ ಬಗ್ಗೆ ಜನರಿಗೆ ಅರಿವು ಮೂಡಿಸಿ ಆಶಾ ಕಾರ್ಯಕರ್ತೆಯರ ಸಹಾಯ ಪಡೆದು ಮೊಬೈಲ್ ನಂಬರ್ ಅಪ್ಡೇಟ್ ಮಾಡಿಸಬೇಕು ಎಂದು ಸೂಚಿಸಿದರು.

ಕೆಲ ಪ್ರಕರಣಗಳಲ್ಲಿ ವ್ಯಕ್ತಿ ಮೃತಪಟ್ಟಿದ್ದರೂ ಸಹ ಅವರ ಆಧಾರ್ ಬಳಸಿ ಸರ್ಕಾರಿ ಸೌಲಭ್ಯದ ದುರುಪಯೋಗವಾಗುತ್ತಿದೆ. ಇದನ್ನು ತಡೆಗಟ್ಟಲು ಜಿಲ್ಲೆಯಲ್ಲಿ ನೂರು ವರ್ಷ ಮೇಲ್ಪಟ್ಟ ವಯಸ್ಸಿನವರ ಪಟ್ಟಿ ಸಿದ್ಧ ಪಡಿಸಿ. ಗ್ರಾಮ ಲೆಕ್ಕಿಗರು 100 ವರ್ಷ ಮೇಲ್ಪಟ್ಟವರು ವಾಸವಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರ ಆಧಾರ್ ಅನ್ನು ಅಪ್ಡೇಟ್ ಮಾಡಬೇಕು ಎಂದು ತಿಳಿಸಿದರು.

ಆಧಾರ್ ನೋಂದಣಿದಾರರು ತಮ್ಮ ಆಧಾರ್ ಸಂಖ್ಯೆಯಲ್ಲಿ ನೋಂದಣಿ ಆಗಿರುವ ವಿಳಾಸವನ್ನು ಬದಲಾಯಿಸಿಕೊಳ್ಳಬೇಕಾದರೆ ಸೇವಾ ಕೇಂದ್ರಕ್ಕೆ ಹೋಗಬೇಕಿಲ್ಲ, ಸ್ವತಃ ತಾವೇ ತಮ್ಮ ಮೊಬೈಲ್ ನಲ್ಲಿ ಎಂ. ಆಧಾರ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ವಿಳಾಸ ಬದಲಾಯಿಸಿಕೊಳ್ಳಬಹುದು. ಹಾಗೂ ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆ ಫ್ರಾಡ್ ಆದರೆ ನಿಮ್ಮ ಖಾತೆಯನ್ನು ಎಂ. ಆಧಾರ್ ಆ್ಯಪ್ ಮುಖಾಂತರ ಲಾಕ್ ಮಾಡಬಹುದು. ಇದರ ಕುರಿತಾಗಿ ಜನರಿಗೆ ಹೆಚ್ಚಿನ ಪ್ರಚಾರ ಕೈಗೊಳ್ಳಿ ಎಂದು ತಿಳಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ 5 ವರ್ಷಗಳಿಗಿಂತ ಕಡಿಮೆ ವಯಸ್ಸಿನ 44,164 ಮಕ್ಕಳಿಗೆ ಆಧಾರ್ ನೋಂದಣಿಯಾಗಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಜವಾಬ್ದಾರಿ ನೀಡಿ ವಿಶೇಷ ಆಧಾರ್ ಶಿಬಿರವನ್ನು ಆಯೋಜಿಸಿ ಎಲ್ಲಾ ಮಕ್ಕಳಿಗೂ ಬಾಲ ಆಧಾರ್ ನೋಂದಣಿ ಮಾಡಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ರಾಜ್ಯ ಆಧಾರ್ ನೋಡಲ್ ಅಧಿಕಾರಿ ವಿಜಯ್ ಕುಮಾರ್, ಜಿಲ್ಲಾಧಿಕಾರಿ ಕಚೇರಿ ಆಧಾರ್ ಮುಖ್ಯಸ್ಥ ವೇಣು ಗೋಪಾಲ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್, ಜಿಲ್ಲಾ ಸಾಕ್ಷರತಾ ಕಚೇರಿ ಅಧಿಕಾರಿ ಲಕ್ಷ್ಮೀ, ರಂಗಪ್ಪ ಸಾಲಾಪೂರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ