ಬಳ್ಳಾರಿ: ನಗರದಲ್ಲಿ ನಿವಾಸಿ ಕೇಂದ್ರಿತ ಆಧಾರ್ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸುಲಭ ಸೌಲಭ್ಯಗಳೊಂದಿಗೆ ಸಾರ್ವಜನಿಕ ಸೇವೆ ಒದಗಿಸಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಿಂದ ನೂತನ ಆಧಾರ್ ಕೇಂದ್ರ ಆರಂಭಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್. ಹೇಳಿದರು.
ಬಳ್ಳಾರಿಯ ಈ ನೂತನ ಕೇಂದ್ರವು ಆಧುನಿಕ ಸೌಕರ್ಯಗಳನ್ನು ಹೊಂದಿದ್ದು, ಸಾರ್ವಜನಿಕರಿಗೆ ಒಂದೇ ಸೂರಿನಡಿ ಹಲವು ಸೇವೆಗಳನ್ನು ಒದಗಿಸಲಿದೆ. ಈ ಕೇಂದ್ರವು ಸಾರ್ವಜನಿಕರಿಗೆ ಸುಲಭವಾಗಿ ಸೇವೆಗಳನ್ನು ಒದಗಿಸಲು 4 ಕಾರ್ಯಾಚರಣೆ ಕಿಟ್‌ಗಳನ್ನು ಹೊಂದಿರುವ ‘ಮಾದರಿ-ಸಿ’ ಕೇಂದ್ರವಾಗಿದೆ. ಇಲ್ಲಿ ಹೊಸ ಆಧಾರ್ ದಾಖಲಾತಿ, ಜನಸಂಖ್ಯಾ ವಿವರಗಳ (ಹೆಸರು, ವಿಳಾಸ ಇತ್ಯಾದಿ) ನವೀಕರಣ, ಬಯೋಮೆಟ್ರಿಕ್ ನವೀಕರಣಗಳು, ದೋಷ ತಿದ್ದುಪಡಿ ಹಾಗೂ ಆಧಾರ್‌ಗೆ ಸಂಬಂಧಿಸಿದ ಕುಂದುಕೊರತೆಗಳ ಪರಿಹಾರ ಸೇವೆಗಳು ಲಭ್ಯವಿರಲಿವೆ ಎಂದು ತಿಳಿಸಿದರು.
ಬಳಿಕ ಕೇಂದ್ರದ ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಅವರು, ಆಧಾರ್ ಸೇವೆಗಳನ್ನು ಸಾರ್ವಜನಿಕರಿಗೆ ಯಾವುದೇ ತೊಂದರೆಯಿಲ್ಲದೆ ಪರಿಣಾಮಕಾರಿಯಾಗಿ ಒದಗಿಸಲು, ಪ್ರಸ್ತುತ ಅನುಸರಿಸಲಾಗುತ್ತಿರುವ ಆಧಾರ್ ದಾಖಲಾತಿ ಮತ್ತು ನವೀಕರಣ ಕಾರ್ಯವಿಧಾನಗಳ ಕುರಿತು ಮಾಹಿತಿ ಪಡೆದುಕೊಂಡರು.ಯುಐಡಿಎಐ ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪನಿರ್ದೇಶಕ ಗುಲ್ಶನ್ ಕುಮಾರ್ ಸಿಂಗ್ ಮಾತನಾಡಿ, ಕಳೆದ ವಾರದಲ್ಲಿ ರಾಜ್ಯದ ವಿಜಯಪುರ ಮತ್ತು ಬೀದರ್‌ನಲ್ಲಿ ಎರಡು ಹೊಸ ಕೇಂದ್ರಗಳನ್ನು ಉದ್ಘಾಟಿಸಲಾಯಿತು. ಈ ಮೂಲಕ ರಾಜ್ಯದಲ್ಲಿ ಒಟ್ಟು 7 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ಈಗ ಬಳ್ಳಾರಿಯಲ್ಲಿ ಆರಂಭವಾಗಿರುವ ಹೊಸ ಕೇಂದ್ರವು ಕರ್ನಾಟಕದ 8ನೇ ಅಧಿಕೃತ ಆಧಾರ್ ಸೇವಾ ಕೇಂದ್ರವಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಯುಐಡಿಎಐನ ಅಧಿಕೃತ ಪೋರ್ಟಲ್ https://bookappointment.uidai.gov.in/ ಗೆ ಭೇಟಿ ನೀಡಿ ಸಮಯ ಕಾಯ್ದಿರಿಸಬಹುದು. ಜತೆಗೆ, 5ರಿಂದ 17 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಮಾಡಿಸಬೇಕಾದ ಬಯೋಮೆಟ್ರಿಕ್ ನವೀಕರಣಗಳನ್ನು ಸೆಪ್ಟೆಂಬರ್ 2026ರ ವರೆಗೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಈ ಸೌಲಭ್ಯವು ಆಧಾರ್ ಸೇವಾ ಕೇಂದ್ರಗಳಲ್ಲದೆ, ಆಯಾ ಶಾಲೆಗಳಲ್ಲಿ ಆಯೋಜಿಸಲಾಗುವ ವಿಶೇಷ ಶಿಬಿರಗಳ ಮೂಲಕವೂ ಲಭ್ಯವಿರಲಿದೆ ಎಂದರು.