ಹುಬ್ಬಳ್ಳಿ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದಲ್ಲಿ ಮೊದಲು 6 ಜಿಲ್ಲೆಗಳಲ್ಲಿ ಆಧಾರ್ ಸೇವಾ ಕೇಂದ್ರಗಳಿದ್ದವು. ಜಿಲ್ಲೆಗೆ ಒಂದರಂತೆ ರಾಜ್ಯದ 19 ಜಿಲ್ಲೆಗಳಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಹೀಗಾಗಿ ಹುಬ್ಬಳ್ಳಿಯಲ್ಲಿ ಮಾತ್ರ ಆಧಾರ್ ಕೇಂದ್ರ ಮುಂದುವರಿದಿತ್ತು. ಜಿಲ್ಲೆಗೆ ಒಂದೇ ಕೇಂದ್ರ ಎಂಬ ಹೊಸ ನಿಯಮದಂತೆ ಧಾರವಾಡ ಕೇಂದ್ರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಧಾರವಾಡ ವಿದ್ಯಾಕಾಶಿಯಾಗಿದ್ದು, ಹಲವು ವಿವಿ, ಶಾಲಾ ಕಾಲೇಜ್, ಕೋಚಿಂಗ್ ಸೆಂಟರ್‌ಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಇದ್ದಾರೆ. ಇಲ್ಲಿ ಆಧಾರ್ ಸೇವಾ ಕೇಂದ್ರದ ಬೇಡಿಕೆ ಹೆಚ್ಚಿದೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಧಾರವಾಡದಲ್ಲಿ ಕೇಂದ್ರ ತೆರೆಯಲು ಅನುಮತಿ ನೀಡಬೇಕು ಎಂದು ಸಚಿವ ಅಶ್ವಿನಿ ವೈಷ್ಣವ ಅವರನ್ನು ಕೋರಲಾಗಿತ್ತು. ಶಾಸಕ ಅರವಿಂದ ಬೆಲ್ಲದ ಕೂಡ ಈ ಸಂಬಂಧ ತಮಗೆ ಮನವಿ ಕೊಟ್ಟಿದ್ದರು ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಈ ಹಿನ್ನೆಲೆಯ ಸಚಿವ ಅಶ್ವಿನಿ ವೈಷ್ಣವ ಅವರು ನಮ್ಮ ಮನವಿಗೆ ಸ್ಪಂದಿಸಿ ಧಾರವಾಡದಲ್ಲಿ ಕೇಂದ್ರ ತೆರೆಯಲು ಹಸಿರು ನಿಶಾನೆ ತೋರಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದಿರುವ ಜೋಶಿ, ಇದಕ್ಕಾಗಿ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಧನ್ಯವಾದ ತಿಳಿಸಿದ್ದಾರೆ.ಧಾರವಾಡದಲ್ಲಿನ ಕೇಂದ್ರವನ್ನು ಹುಬ್ಬಳ್ಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಆರೋಪಿಸಿ ಅಲ್ಲಿನ ನಾಗರಿಕರು ಇತ್ತೀಚಿಗೆ ಪ್ರತಿಭಟನೆ ನಡೆಸಿದ್ದರು. ಧಾರವಾಡದಲ್ಲೂ ಕೇಂದ್ರ ತೆರೆಯಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.