ಜಾತಿನಿಂದನೆ ಮತ್ತು ಲಂಚಕ್ಕೆ ಬೇಡಿಕೆ ಇಟ್ಟ ಆರೋಪ : ಮುನಿರತ್ನ ರಾಜೀನಾಮೆಗಾಗಿ ಆಮ್ ಆದ್ಮಿ ಪಕ್ಷದಿಂದ ಧರಣಿ

KannadaprabhaNewsNetwork |  
Published : Sep 17, 2024, 12:55 AM ISTUpdated : Dec 17, 2024, 11:51 AM IST
AAP 2 | Kannada Prabha

ಸಾರಾಂಶ

ಜಾತಿನಿಂದನೆ ಮತ್ತು ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಬಂಧಿಸಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಆ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

 ಬೆಂಗಳೂರು : ಜಾತಿನಿಂದನೆ ಮತ್ತು ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಬಂಧಿಸಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಆ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಮಹಿಳಾ, ದಲಿತ ವಿರೋಧಿ ಶಾಸಕನನ್ನು ಕಿತ್ತೊಗೆಯಿರಿ, ಮುನಿರತ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಫಲಕಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಮೋಹನ್ ದಾಸರಿ, ಗೂಂಡಾ ಪ್ರವೃತ್ತಿಯ ಶಾಸಕ ಮುನಿರತ್ನ ಎದುರು ನಿಂತು ಮಾತನಾಡುವ ಧೈರ್ಯ ಬಿಜೆಪಿ ನಾಯಕರಿಗೆ ಇದೆಯೇ? ದಲಿತ ಸಮುದಾಯದವರ ಬಳಿ ಬಿಜೆಪಿ ಬಹಿರಂಗ ಕ್ಷಮೆ ಕೇಳಿ, ಮುನಿರತ್ನ ಅವರನ್ನು ಪಕ್ಷದಿಂದ ಹೊರದಬ್ಬಬೇಕು ಎಂದು ಒತ್ತಾಯಿಸಿದರು.

ಜಾತಿ ನಿಂದನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಆಡಿಯೊದಲ್ಲಿನ ಮುನಿರತ್ನ ಅವರ ಮಾತುಗಳು ಕೇವಲ ಅವರೊಬ್ಬರ ವೈಯಕ್ತಿಕ ಹೇಳಿಕೆಯಲ್ಲ, ಸಮಸ್ತ ಬಿಜೆಪಿಗರ ಮನಸ್ಥಿತಿಯ ಪ್ರತಿರೂಪ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ವಾಸ್ತವದಲ್ಲಿ ದಲಿತರನ್ನು, ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಮುನಿರತ್ನ ಅವರು ಆಡಿರುವ ಮಾತುಗಳೇ ಸಾಕ್ಷಿ. ಗುತ್ತಿಗೆದಾರರೊಬ್ಬರಿಗೆ ಕಮಿಷನ್‌ ಕಿರುಕುಳ ನೀಡುತ್ತ, ಅವಾಚ್ಯವಾಗಿ ಅವರ ತಾಯಿಯನ್ನು ನಿಂದಿಸುತ್ತ ಕೊಲೆ ಬೆದರಿಕೆ ಒಡ್ಡಿರುವುದು ಆಘಾತಕಾರಿ ವಿಚಾರ. ಇಂತಹ ಜನಪ್ರತಿನಿಧಿಗಳಿದ್ದರೆ ಗುತ್ತಿಗೆದಾರರು, ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಸಾಧ್ಯವೇ ಎಂದು‌ ಪ್ರಶ್ನಿಸಿದರು.

ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ. ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಸರ್ರಾವ್, ಪರಿಶಿಷ್ಟ ವಿಭಾಗದ ಅಧ್ಯಕ್ಷ ಸಿದ್ದು, ಮುಖಂಡರಾದ ಜಗದೀಶ ಬಾಬು, ಲೋಕೇಶ್, ಶಶಿಧರ್ ಆರಾಧ್ಯ, ಅನಿಲ್ ನಾಚಪ್ಪ, ಅನಿತಾ, ಶರಣ್ಯ, ಕಲೈ, ಮುನೀಂದ್ರ, ಶರವಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!