ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಸಂಬಂಧ ಅವರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಸಮಸಮಾಜ ನಿರ್ಮಾಣದ ಸದುದ್ದೇಶ ಹೊಂದಿರುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರು ಕೇಂದ್ರೀಕರಿಸಿದ ಅಭಿವೃದ್ಧಿಯಂತಹ ಅಸಮಾನ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬಾರದು. ರಾಜ್ಯದ ಜನರ ತೆರಿಗೆ ಹಣವನ್ನು ಕೇವಲ ಬೆಂಗಳೂರನ್ನು ವಿಸ್ತರಿಸಲು ವಿನಿಯೋಗಿಸಿದರೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಭಾಗದ ಜನರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಹೆಚ್ಚಿನ ಯುವಕರು ಉದ್ಯೋಗಕ್ಕಾಗಿ ದೂರದ ಬೆಂಗಳೂರನ್ನು ಆಯ್ಕೆ ಮಾಡುವ ಬದಲು ಹೈದರಾಬಾದ್, ಪುಣೆ, ಮುಂಬೈ, ಪಣಜಿಯಂತಹ ನೆರೆ ರಾಜ್ಯದ ನಗರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಂಗಳೂರು ಕೇಂದ್ರೀಕರಿಸಿದ ಅಭಿವೃದ್ಧಿಯಿಂದ ಯುವಕರೆಲ್ಲ ಬೇರೆ ರಾಜ್ಯಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಹೊರಟಿರುವ ನಿರ್ಧಾರ ಆಕ್ಷೇಪಾರ್ಹವಾಗಿದೆ. ಕೇವಲ ಹೆಸರು ಬದಲಿಸುವುದರಿಂದ ಅಭಿವೃದ್ಧಿಯಾಗುವುದಿದ್ದರೆ ಕರ್ನಾಟಕದ ಹೆಸರನ್ನೇ ಬೆಂಗಳೂರು ಎಂದು ಮಾಡುವುದು ಒಳಿತಲ್ಲವೇ? ಆಗ ಇಡೀ ಕರ್ನಾಟಕವೇ ಅಭಿವೃದ್ಧಿಯಾದಂತೆ ಆಗುತ್ತದೆಯಲ್ಲವೇ? ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಡೀ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿದ್ದಾರೆಯೋ ಅಥವಾ ಕೇವಲ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿಗಳಿಗೆ ಸೀಮಿತಗೊಂಡ ಉಪಮುಖ್ಯಮಂತ್ರಿಯಾಗಿದ್ದಾರೆಯೋ ಎಂಬ ಅನುಮಾನ ಮೂಡುತ್ತಿದೆ ಎಂದಿದ್ದಾರೆ.
ರಾಮನಗರ, ಚನ್ನಪಟ್ಟಣಗಳನ್ನು ಬೆಂಗಳೂರಿಗೆ ಸೇರಿಸುವ ಪ್ರಸ್ತಾವವನ್ನು ತಿರಸ್ಕರಿಸಬೇಕು. ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿ ಉಭಯ ನಗರಗಳನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.