ಹೊಸಪೇಟೆ: ವಿಧಾನಪರಿಷತ್‌ನ ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ಅವರಿಗೆ ಆಮ್ ಆದ್ಮಿ ಪಾರ್ಟಿ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸದಿರಲು ನಿರ್ಧರಿಸಲಾಗಿದ್ದು, ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಇಲ್ಲ. ಹಾಗಾಗಿ ಪಕ್ಷೇತರ ಅಭ್ಯರ್ಥಿ ಎನ್. ಪ್ರತಾಪ್ ರೆಡ್ಡಿ ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಅವರು ಕಳೆದ ಚುನಾವಣೆಯಲ್ಲಿ ಕುಲಗೆಟ್ಟ ಮತಗಳ ಕಾರಣದಿಂದ ಅಲ್ಪಮತಗಳ ಅಂತರದಿಂದ ಸೋತಿದ್ದರು. ಈ ಬಾರಿ 7 ಜಿಲ್ಲೆಯಲ್ಲಿ ಬೆಂಬಲ ಇದೆ. ಅವರ ಪರವಾಗಿ ಈಗಾಗಲೇ ಮೂರು ಜಿಲ್ಲೆಗಳಲ್ಲಿ ಮತಯಾಚನೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತದಾರರನ್ನು ಭೇಟಿ ಆಗಿದ್ದೇವೆ. ಗೆಲ್ಲುವ ವಿಶ್ವಾಸವಿದೆ ಎಂದರು.ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ಮಾತನಾಡಿ, ಇದೇ ಮೊದಲ ಬಾರಿಗೆ ಪದವೀಧರರ ಕ್ಷೇತ್ರದಲ್ಲಿ ಅತಿಹೆಚ್ಚಿನ ಮತದಾರರು ನೋಂದಣಿ ಮಾಡಿಸಿದ್ದು, ಅಖಂಡ ಬಳ್ಳಾರಿಯಲ್ಲಿ 42 ಸಾವಿರ ನೋಂದಣಿ ಆಗಿದೆ. 18 ಸಾವಿರದಷ್ಟು ವಿಜಯನಗರದಲ್ಲಿ ನೋಂದಣಿಯಾಗಿದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದವರಿಗೂ ನೋಂದಣಿ ಮಾಡಿಸಬಹುದು ಎಂದರು.
ಏಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಿರುವೆ. ಹಾಲಿ ಎಂಎಲ್‌ಸಿ ಚಂದ್ರಶೇಖರ್ ಅವರ ತಾಲೂಕು ಹುಮ್ನಾಬಾದ್‌ನಲ್ಲಿ ಒಂದು ಕಾಲೇಜಿಗೂ ಭೇಟಿ ನೀಡಿಲ್ಲ. ಅವರ ಸಂಪೂರ್ಣ ಅನುದಾನದ ಶೇ. 80ರಷ್ಟು ತಮ್ಮ ಜಿಲ್ಲೆಗೆ ಹಾಕಿಕೊಂಡಿದ್ದಾರೆ. ಕಾಲೇಜು, ಶಾಲೆ, ಆಧುನೀಕರಣ ಸೇರಿ ಯಾವುದೇ ಕೆಲಸ ಮಾಡಿಲ್ಲ. ಈ ಬಾರಿ ನನಗೆ ಅವಕಾಶ ಕೊಟ್ಟರೆ ಶಿಕ್ಷಣ ಸಂಸ್ಥೆಗಳ ಸುಧಾರಣೆಗೆ ಶ್ರಮಿಸಲಾಗುವುದು. ಈ ಭಾಗದವರು ಯಾರೂ ಚುನಾಯಿತರಾಗಿಲ್ಲ. ಈ ಬಾರಿ ಈ ಕೂಗು ಕೇಳಿಬರುತ್ತಿದೆ. ಉತ್ತಮ ಪ್ರತಿಕ್ರಿಯೆ ಇದೆ. ಈ ಬಾರಿ ಪಕ್ಷ, ಜಾತಿ ಯಾವುದೇ ತಾರತಮ್ಯ ಇಲ್ಲದೆ ಎಲ್ಲರೂ ಬೆಂಬಲಿಸುತ್ತಿದ್ದಾರೆ ಎಂದರು.ಮುಖಂಡರಾದ ರುದ್ರಯ್ಯ ನವಲಿಮಠ, ಮರಿಸ್ವಾಮಿ, ವಿಜಯಕುಮಾರ, ನಿಷ್ಠಿ ರುದ್ರಪ್ಪ ಮತ್ತಿತರರಿದ್ದರು.