ಅಂಗನವಾಡಿ ಕಾರ್‍ಯಕರ್ತೆಯರ ಬೇಡಿಕೆ ಈಡೇರಿಕೆಗೆ ಆರಗ ಜ್ಞಾನೇಂದ್ರ ಆಗ್ರಹ

KannadaprabhaNewsNetwork | Published : Jul 3, 2024 12:15 AM
ಪೊಟೊ: 2ಟಿಟಿಎಚ್‌01ತೀರ್ಥಹಳ್ಳಿಯ ಗ್ರಾಮೀಣಾಭಿವೃದ್ದಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕ ಆಗರ ಜ್ಞಾನೇಂದ್ರ ಅವರು ಸ್ಮಾರ್ಟ್‍ಫೋನ್ ವಿತರಿಸಿದರು. | Kannada Prabha

ತೀರ್ಥಹಳ್ಳಿಯ ಗ್ರಾಮೀಣಾಭಿವೃದ್ದಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕ ಆಗರ ಜ್ಞಾನೇಂದ್ರ ಸ್ಮಾರ್ಟ್‍ಫೋನ್ ವಿತರಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ನರ್ಸರಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲೇ ನಡೆಸುವಂತೆ ಆದೇಶ ಹೊರಡಿಸುವುದಲ್ಲದೇ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಕೂಡ ಸರ್ಕಾರ ಯಥಾವತ್ತಾಗಿ ಈಡೇರಿಸಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ದಿ ಯೋಜನೆಯ ಆಶ್ರಯದಲ್ಲಿ ಮಂಗಳವಾರ ಇಲ್ಲಿನ ಗ್ರಾಮೀಣಾಭಿವೃದ್ಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಷಣ್ ಅಭಿಯಾನ ಯೋಜನೆಯ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾದ ಸ್ಮಾರ್ಟ್‍ಫೋನ್ ವಿತರಣೆ ಮಾಡಿ ಮಾತನಾಡಿ, ಅಂಗನವಾಡಿಗೆ ಬರುವ ಎಳೆಯ ಕಂದಮ್ಮಗಳ ಮನಸ್ಸಿನಲ್ಲಿ ಉತ್ತಮ ಕನಸುಗಳನ್ನು ಮೂಡಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.

ಮಹಿಳೆ ಮತ್ತು ಮಕ್ಕಳ ಆರೋಗ್ಯದೊಂದಿಗೆ ಸರ್ಕಾರ ವಹಿಸುವ ಎಲ್ಲಾ ಕೆಲಸ ಕಾರ್ಯಗಳನ್ನೂ ನೆರವೇರಿಸುತ್ತಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಕಾರ್ಯ ಪ್ರಶಂಸನೀಯವಾಗಿದೆ. ಕೊರೊನಾ ಸಂಧರ್ಭದಲ್ಲಿ ಜೀವದ ಹಂಗನ್ನು ತೊರೆದು ಮಾಡಿರುವ ಕಾರ್ಯ ಸ್ಮರಣೀಯವಾಗಿದೆ. ರಾಜ್ಯ ಸರ್ಕಾರ ನೀಡಿರುವ ಭರವಸೆಯಂತೆ 6ನೇ ಗ್ಯಾರೆಂಟಿ ಯೋಜನೆಯನ್ನು ಜಾರಿಗೊಳಿಸುವಂತೆಯೂ ಆಗ್ರಹಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಮೂಲಕ ಎಲ್‍ಕೆಜಿ ಯುಕೆಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲೇ ನಡೆಸು ವಂತೆ ಸರ್ಕಾರ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಅಂಗನವಾಡಿ ಕೇಂದ್ರಗಳು ಮುಚ್ಚುವ ಆತಂಕವಿದೆ. ಈ ಬಗ್ಗೆ ತಾವು ಸರ್ಕಾರದ ಗಮನಕ್ಕೆ ತರುವುದಾಗಿಯೂ ತಿಳಿಸಿದ ರಲ್ಲದೇ ಜನನ ಮರಣವನ್ನು ದಾಖಲಿಸುವ ಹೊಣೆಗಾರಿಕೆ ಗ್ರಾಪಂಗಳಿಗೆ ನೀಡಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ಸಹಕಾರ ನೀಡುವಂತೆಯೂ ಕೋರಿದರು.

ಅಂಗನವಾಡಿ ಒಕ್ಕೂಟದ ತಾಲೂಕು ಅಧ್ಯಕ್ಷೆ ಗಾಯತ್ರಿ ಹೆಗ್ಡೆ ಮಾತನಾಡಿ, ನಮಗೆ ನೀಡಲಾಗಿರುವ ಮೊಬೈಲ್‌ಗಳಿಗೆ ನೀಡುವ ಕರೆನ್ಸಿ ಮೊತ್ತ ಕಡಿಮೆಯಾಗಿದೆ. ಮತ್ತು ವ್ಯಾಟ್ಸಾಪ್ ಸೌಲಭ್ಯವನ್ನು ಕಲ್ಪಿಸಬೇಕು ಎಂದೂ ಆಗ್ರಹಿಸಿದರು.

ತಹಸಿಲ್ದಾರ್ ಜಕ್ಕನಗೌಡರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಶೈಲಾ ಹಾಗೂ ಅಕ್ಷರ ದಾಸೋಹದ ಸಹಾಯಕ ನಿರ್ದೆಶಕ ಪ್ರವೀಣ್ ಇದ್ದರು.