ಈ ಊರಿನಲ್ಲಿನ ಜಾತ್ರೆಯ ದಿನದಂದು ದೇವರಿಗೆ ಮದ್ಯದ ಅಭಿಷೇಕ, ಬೀಡಿ-ಸಿಗರೇಟ್‌ನಿಂದ ಆರತಿಯನ್ನು ಮಾಡುವ ವಿಶಿಷ್ಟ ಸಂಪ್ರದಾಯ ನಡೆದುಕೊಂಡು ಬಂದಿದೆ.
ಕಾರವಾರ: ಸಾಮಾನ್ಯವಾಗಿ ಜಾತ್ರೆ, ಹಬ್ಬ-ಹರಿದಿನಗಳಲ್ಲಿ ದೇವರಿಗೆ ಹಣ್ಣು, ಖಾದ್ಯ, ತೆಂಗಿನಕಾಯಿ ನೈವೇದ್ಯ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ತುಪ್ಪ, ಕರ್ಪೂರದ ದೀಪದಿಂದ ಆರತಿ ಮಾಡಲಾಗುತ್ತದೆ. ಆದರೆ ಈ ಊರಿನಲ್ಲಿನ ಜಾತ್ರೆಯ ದಿನದಂದು ದೇವರಿಗೆ ಮದ್ಯದ ಅಭಿಷೇಕ, ಬೀಡಿ-ಸಿಗರೇಟ್‌ನಿಂದ ಆರತಿಯನ್ನು ಮಾಡುವ ವಿಶಿಷ್ಟ ಸಂಪ್ರದಾಯ ನಡೆದುಕೊಂಡು ಬಂದಿದೆ.
ನಗರದ ಕೋಡಿಬಾಗದಲ್ಲಿ ಇರುವ ಖಾಪ್ರಿ ದೇವರಿಗೆ ಮದ್ಯದ ಅಭಿಷೇಕ, ಸಿಗರೇಟಿನಿಂದ ಆರತಿ ಮಾಡಲಾಗುತ್ತದೆ. ಕೋಳಿ ಬಲಿ ನೀಡಲಾಗುತ್ತದೆ. ಭಾನುವಾರ ಜಾತ್ರೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಮದ್ಯ, ಸಿಗರೇಟ್-ಬೀಡಿ ಅರ್ಪಿಸಿ ಶ್ರೀದೇವರ ದರ್ಶನ ಪಡೆದರು.
ತನ್ನದೇ ಆದ ಇತಿಹಾಸ ಹೊಂದಿರುವ ಖಾಪ್ರಿ ದೇವರು ಆಫ್ರಿಕಾ ಮೂಲದೆನ್ನಲಾಗುತ್ತದೆ. ಆಫ್ರಿಕಾ ದೇಶದ ವ್ಯಕ್ತಿಯೊಬ್ಬ ೩೦೦ಕ್ಕೂ ಅಧಿಕ ವರ್ಷಗಳ ಹಿಂದೆ ಇಲ್ಲಿಗೆ ಬಂದು ಖಾಪ್ರಿ ದೇವರನ್ನು ತಂದು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದನಂತೆ. ಆತ ಏಕಾಏಕಿ ಕಣ್ಮರೆಯಾದ ನಂತರ ಇಲ್ಲಿನ ಪರಸಪ್ಪ ಮನೆತನದವರು ಅದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಯಿತಂತೆ, ಆನಂತರ ಕನಸಿನಲ್ಲಿ ದೇವರು ಬಂದು ತನಗೆ ಮದ್ಯದ ಅಭಿಷೇಕ, ಕೋಳಿ ನೈವೇದ್ಯ ಮಾಡುವಂತೆ ಸೂಚಿಸಿದ್ದನು ಎನ್ನುವ ಪ್ರತೀತಿಯಿದೆ.
ಬಳಿಕ ಕೋಡಿಬಾಗದಲ್ಲಿ ದೇವಸ್ಥಾನವನ್ನು ಕಟ್ಟಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಜಾತ್ರೆ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ವಿಶೇಷವೆಂದರೆ ಪ್ರತಿ ವರ್ಷ ಇದೇ ರೀತಿ ದೇವರಿಗೆ ಫಲ-ಪುಷ್ಪ, ಹಣ್ಣು ಕಾಯಿಯನ್ನು ಸಮರ್ಪಿಸುವ ಜತೆಗೆ ಮದ್ಯ, ಸಿಗರೇಟ್, ಊದಬತ್ತಿ, ಕ್ಯಾಂಡಲ್, ಕೋಳಿ ಅರ್ಪಿಸುತ್ತಾರೆ.
ಸ್ಥಳೀಯರೊಂದೇ ಅಲ್ಲದೇ ಗೋವಾ, ಮಹಾರಾಷ್ಟ್ರದಿಂದ ಕೂಡ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ರಾಷ್ಟ್ರೀಯ ಹೆದ್ದಾರಿ ೬೬ ಪಕ್ಕದಲ್ಲೇ ಈ ಖಾಪ್ರಿ ದೇವಸ್ಥಾನವಿದ್ದು, ಹೆದ್ದಾರಿಯಲ್ಲಿ ಹೋಗುವವರು ದೇವರಿಗೆ ವಂದಿಸಿ ಹೋಗುವುದರಿಂದ ಯಾವುದೇ ಅಪಾಯವಾಗುವುದಿಲ್ಲ ಎನ್ನುವ ನಂಬಿಕೆಯೂ ಸ್ಥಳೀಯರಲ್ಲಿದೆ. ಅಪಘಾತಗಳ ಸಂಖ್ಯೆ ಸಹ ಕಡಿಮೆಯಾಗಿದೆ ಎನ್ನುವುದು ಭಕ್ತರ ಅಭಿಪ್ರಾಯವಾಗಿದೆ.