ಅಂಜನಾದ್ರಿ ದೇಗುಲದಲ್ಲಿ ಆರತಿ ತಟ್ಟೆ ವಿವಾದ

KannadaprabhaNewsNetwork |  
Published : Jun 06, 2025, 12:38 AM ISTUpdated : Jun 06, 2025, 12:39 AM IST
5ಜಿಎನ್ ಜಿ 21 ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿರುವ ಇಓ ಪ್ರಕಾಶ ಅವರೊಂದಿಗೆ ವಿದ್ಯಾದಾಸ ಬಾಬಾ ಚರ್ಚೆ ಮಾಡುತ್ತಿರುವುದು. | Kannada Prabha

ಸಾರಾಂಶ

ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಎಂ.ಎಚ್. ಪ್ರಕಾಶ್ ಮತ್ತು ಪೊಲೀಸ್ ಇಲಾಖೆಯ ಎಎಸ್‌ಐ ಪ್ರಕಾಶ ಅವರು ಅಂಜನಾದ್ರಿಗೆ ತೆರಳಿ, ಅರ್ಚಕ ವಿದ್ಯಾದಾಸ್ ಬಾಬಾ ಅವರಿಗೆ ಯಾವುದೇ ಕಾರಣಕ್ಕೆ ಆರತಿ ತಟ್ಟೆಯಲ್ಲಿ ಬಂದ ಹಣ ಪಡೆಯಬಾರದು. ಆರತಿ ಚೀಟಿ ಪಡೆದ ಭಕ್ತರಿಗೆ ಮಾತ್ರ ಮಂಗಳಾರತಿ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಮಮೂರ್ತಿ ನವಲಿ

ಗಂಗಾವತಿ:

ದೇಶ, ವಿದೇಶಿ ಪ್ರವಾಸಿಗರು ಮತ್ತು ಭಕ್ತರು ಆಗಮಿಸುತ್ತಿರುವ ಅಂಜನಾದ್ರಿಯ ಶ್ರೀಆಂಜನೇಯನಸ್ವಾಮಿ ದೇವಸ್ಥಾನದಲ್ಲಿ ಆರತಿ ತಟ್ಟೆ ವಿವಾದ ದೊಡ್ಡ ದನಿಯಲ್ಲಿ ಕೇಳಿಬರುತ್ತಿದೆ.

ಸುಪ್ರೀಂ ಕೋರ್ಟ್ ಈ ಹಿಂದೆ ಇದ್ದ ಅರ್ಚಕ ಶ್ರೀ ವಿದ್ಯಾದಾಸ ಬಾಬಾ ಅವರಿಗೆ ಬೆಳಗ್ಗೆ 6ರಿಂದ ಸಂಜೆ 8ರ ವರೆಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದೆ. ಹೀಗಾಗಿ ದೇವಸ್ಥಾನದಲ್ಲಿ ದಿನಪೂರ್ತಿ ಅರ್ಚಕ ವಿದ್ಯಾದಾಸ ಅವರೇ ಇರುತ್ತಾರೆ. ಭಕ್ತರು ದರ್ಶನ ಪಡೆಯುವ ವೇಳೆ ಅರ್ಚನೆ ಮಾಡಿ, ಆರತಿ ತಟ್ಟೆಗೆ ಹಾಕುವ ದಕ್ಷಿಣೆ ಹಣ ಯಾರ ಪಾಲಿಗೆ? ಎನ್ನುವುದೇ ಸದ್ಯದ ವಿವಾದವಾಗಿದೆ.

ಈ ಹಿಂದೆ ವಿದ್ಯಾದಾಸ ಬಾಬಾ ಅವರೇ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿದ್ದರು. ಖಾಸಗಿಯಾಗಿ ದೇವಸ್ಥಾನದ ಆಡಳಿತ ಇರುತ್ತಿತ್ತು. ಆದರೆ, ರಾಜ್ಯ ಸರ್ಕಾರ ಇದನ್ನು ನೋಟಿಪಿಕೇಶನ್ ಮಾಡಿ, ಮುಜರಾಯಿ ಇಲಾಖೆ ವ್ಯಾಪ್ತಿಗೆ ತೆಗೆದುಕೊಂಡಿದೆ. ಜತೆಗೆ ಅಲ್ಲಿ ಅರ್ಚಕರಾಗಿದ್ದ ವಿದ್ಯಾದಾಸ ಬಾಬಾ ಅವರನ್ನು ಹೊರಗೆ ಹಾಕಲಾಗಿತ್ತು. ಇದಾದ ಮೇಲೆ ವಿದ್ಯಾದಾಸ ಬಾಬಾ ನಿರಂತರವಾಗಿ ಕೋರ್ಟ್‌ನಲ್ಲಿ ಹೋರಾಟ ಮುಂದುವರಿಸಿದ್ದರು. ಈಗ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ತೀರ್ಪು ಬಂದಿದ್ದು, ಮೊದಲಿನಿಂದಲೂ ಅರ್ಚಕರಾಗಿದ್ದ ವಿದ್ಯಾದಾಸ ಬಾಬಾ ಅವರು ಪೂಜೆ ಸಲ್ಲಿಸಲು ಅವಕಾಶ ನೀಡಿದ್ದು ಮುಜರಾಯಿ ಇಲಾಖೆಯ ಅರ್ಚಕರೇ ಹೊರಗೆ ನಿಲ್ಲುವಂತೆ ಆಗಿದೆ.

ಹೀಗೆ ಪೂಜೆ ಸಲ್ಲಿಸುತ್ತಿರುವ ಅರ್ಚಕ ವಿದ್ಯಾದಾಸ ಬಾಬಾ ಅವರು ಪೂಜೆ ಸಲ್ಲಿಸಿ, ಬರುವ ಭಕ್ತರಿಗೆ ಆರತಿಗೆ ತಟ್ಟೆ ಹಿಡಿಯುತ್ತಾರೆ, ಮಂಗಳಾರತಿ ಸ್ವೀಕರಿಸುವ ಭಕ್ತರು ಆರತಿ ತಟ್ಟೆಗೆ ಕಾಣಿಕೆ ಹಾಕುತ್ತಾರೆ. ಈ ಹಣ ಯಾರಿಗೆ ಸೇರಬೇಕು ಎನ್ನುವುದೇ ವಿವಾದದ ಕೇಂದ್ರ ಬಿಂದುವಾಗಿದೆ.

ಅಧಿಕಾರಿ ಭೇಟಿ:

ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಎಂ.ಎಚ್. ಪ್ರಕಾಶ್ ಮತ್ತು ಪೊಲೀಸ್ ಇಲಾಖೆಯ ಎಎಸ್‌ಐ ಪ್ರಕಾಶ ಅವರು ಅಂಜನಾದ್ರಿಗೆ ತೆರಳಿ, ಅರ್ಚಕ ವಿದ್ಯಾದಾಸ್ ಬಾಬಾ ಅವರಿಗೆ ಯಾವುದೇ ಕಾರಣಕ್ಕೆ ಆರತಿ ತಟ್ಟೆಯಲ್ಲಿ ಬಂದ ಹಣ ಪಡೆಯಬಾರದು. ಆರತಿ ಚೀಟಿ ಪಡೆದ ಭಕ್ತರಿಗೆ ಮಾತ್ರ ಮಂಗಳಾರತಿ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದಕ್ಕೆ ವಿದ್ಯಾದಾಸ ಬಾಬಾ ಆಕ್ಷೇಪಿಸಿದ್ದಾರೆ. ಅಧಿಕಾರಿಯ ಹೇಳಿಕೆಯನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿಯೇ ನನಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದ್ದರೂ ಸಹ ಇಲ್ಲಸಲ್ಲದ ಕಾರಣ ನೀಡಿ, ಅಡ್ಡಿಪಡಿಸುತ್ತೀರಿ ಎಂದು ಅರ್ಚಕರು ಕಿಡಿಕಾರಿದ್ದಾರೆ.

ಹೊಸ ಕಾಣಿಕೆ ಪೆಟ್ಟಿಗೆ:

ಅಂಜನಾದ್ರಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿದ್ದ ಕಾಣಿಕೆ ಹುಂಡಿಯ ಪೆಟ್ಟಿಗೆ ಭರ್ತಿಯಾಗಿದ್ದರಿಂದ ಬೇರೆ ಕಾಣಿಕೆ ಪೆಟ್ಟಿಗೆ ಇಡಲಾಗಿದೆ. ತುಂಬಿರುವ ಕಾಣಿಕೆ ಪೆಟ್ಟಿಗೆಯ ಹಣವನ್ನು ಮುಂದಿನ ವಾರ ಎಣಿಕೆ ಮಾಡುವ ಸಾಧ್ಯತೆ ಇದೆ.

ಅಂಜನಾದ್ರಿಯ ಶ್ರೀಆಂಜನೇಯನ ದೇವಸ್ಥಾನ ಸಂಪೂರ್ಣ ಮುಜರಾಯಿ ಇಲಾಖೆಯ ಒಡೆತನದಲ್ಲಿದೆ. ಈ ಕುರಿತು ಅರ್ಚಕ ವಿದ್ಯಾದಾಸ ಬಾಬಾ ಅವರಿಗೆ ಪರಿಪೂರ್ಣ ಮನವರಿಕೆ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ಆದೇಶದಂತೆ ಪೂಜೆ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿದೆ ಎಂದು ಅಂಜನಾದ್ರಿಯ ಆಂಜನೇಯ ದೇವಸ್ಥಾನದ ಇಒ ಪ್ರಕಾಶ ಹೇಳಿದ್ದಾರೆ.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ