ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಆರತಿ ಉಕ್ಕಡ ಮಾರಮ್ಮ ದೇವಿಗೆ ಹರಕೆ

KannadaprabhaNewsNetwork | Published : Nov 23, 2024 12:32 AM

ಸಾರಾಂಶ

ದೇಶದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸುಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ಕಳೆದ ಎರಡು ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಆದರೆ, ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಅಲ್ಲಿನ ಜನತೆ ಕೈಹಿಡಿಯಲಿದ್ದಾರೆ ಎನ್ನುವ ವಿಶ್ವಾಸವಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಸಿ.ಎಸ್.ಪುಟ್ಟರಾಜು ಅವರ ಅಭಿಮಾನಿ ಕ್ಯಾತನಹಳ್ಳಿ ಗವಿಗೌಡ ಪ್ರವೀಣ್ ನೇತೃತ್ವದಲ್ಲಿ ಕಾರ್‍ಯಕರ್ತರು ಶುಕ್ರವಾರ ಆರತಿ ಉಕ್ಕಡದ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತುಕೊಂಡರು.

ಆರತಿ ಉಕ್ಕಡ ಮಾರಮ್ಮ ದೇವಸ್ಥಾನಕ್ಕೆ ಆಗಮಿಸಿದ ಜೆಡಿಎಸ್ ಮುಖಂಡ ಗವಿಗೌಡ ಪ್ರವೀಣ್ ಅವರು, ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮರಿ ಹರಕೆ ಹೊತ್ತುಕೊಂಡರು. ಈ ವೇಳೆ ಮೇಕೆಗೆ ದೇವಿ ತೀರ್ಥ ಹಾಕುತ್ತಿದ್ದಂತೆಯೇ ತಲೆ ಬಾಗುವ ಮೂಲಕ ಗೆಲುವಿನ ಸಂದೇಶ ನೀಡಿತು.

ಗವಿಗೌಡ ಪ್ರವೀಣ್ ಮಾತನಾಡಿ, ಚನ್ನಪಟ್ಟಣದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿ ಎಂದು ಹಾರೈಸಿ ಶಕ್ತಿ ದೇವಿ ಆರತಿ ಉಕ್ಕಡದ ಮಾರಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಮೇಕೆ ಹರಕೆ ಹೊತ್ತುಕೊಂಡಿದ್ದೇವೆ. ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಿದರೆ ದೇವಿಗೆ ಮೇಕೆ ಬಲಿ ನೀಡಿ ಸಾರ್ವಜನಿಕರಿಗೆ ಊಟ ಹಾಕಲಾಗುವುದು ಎಂದರು.

ದೇಶದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸುಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ಕಳೆದ ಎರಡು ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಆದರೆ, ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಅಲ್ಲಿನ ಜನತೆ ಕೈಹಿಡಿಯಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.

ನಿಖಿಲ್‌ ಕುಮಾರಸ್ವಾಮಿ ಅವರು ರಾಜ್ಯದ ಮುಂದಿನ ಒಕ್ಕಲಿಗರ ಭವಿಷ್ಯದ ನಾಯಕರಾಗಿದ್ದಾರೆ. ಈ ಗೆಲುವು ಅವರಿಗೆ ಭವಿಷ್ಯದ ಮುನ್ನುಡಿಯಾಗಿದೆ. ಅವರು ಅಭೂತ ಪೂರ್ವ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ನಿಖಿಲ್‌ ಜಯಗಳಿಸಿದರೆ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆ ಅಲಂಕರಿಸಲಿದ್ದಾರೆ. ಅವರು ರಾಜ್ಯಾದ್ಯಾಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ನಡೆಸಿ ಅಧಿಕಾರಕ್ಕೆ ತರಲಿದ್ದಾರೆ. ಅದೇರೀತಿ ಕ್ಷೇತ್ರದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಉನ್ನತ ಹುದ್ದೆ ದೊರೆಯಲಿ ಎಂದು ಶುಭ ಹಾರೈಸಿದರು.

ಈ ವೇಳೆ ಜೆಡಿಎಸ್ ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಟಿ.ರವಿಕುಮಾರ್, ಸುಬ್ಬಣ್ಣ, ಸುರೇಂದ್ರಣ್ಣ, ಗುಡ್ಡಹೇಮಂತ್, ತಾರು, ಬೋಜಿ, ರೇವಣ್ಣ, ರವೀಂದ್ರ, ಪುರ ಹೇಮಂತ್, ಮುದ್ದು ಹಲವು ಮುಖಂಡರು ಹಾಜರಿದ್ದರು.

Share this article