ಸಿರಿಗೆರೆ: ಕಲೆ, ಸಾಹಿತ್ಯ, ಸಂಗೀತ ಮಾನವನಿಗೆ ದೇವರು ನೀಡಿದ ವರ. ಜನರ ಮನಸ್ಸನ್ನು ಆಕರ್ಷಿಸುವ ಶಕ್ತಿ ಇರುವುದು ಕೇವಲ ಸಂಗೀತಕ್ಕೆ ಮಾತ್ರ. ಸಂಗೀತ ಪರಂಪರೆಯನ್ನು ಈಗಿನ ಪೀಳಿಗೆಯವರು ಮುಂದುವರಿಸುವುದು ಅತ್ಯವಶ್ಯಕವಾಗಿದೆ ಎಂದು ಜಾನಪದ ಕಲಾವಿದ ಡಿ.ಓ.ಮೊರಾರ್ಜಿ ಹೇಳಿದರು.
ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಆದರೆ ಸಾಧನೆ ಮಾಡುವ ಸಾಧಕರನ್ನು ಮಾತ್ರ ಮೆರೆಸುತ್ತದೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಡಾ.ಮಹೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಯಲ್ಲಿ ಸಹಪಠ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ. ಇಂಥ ಕಾರ್ಯಕ್ರಮಗಳು ನಮ್ಮ ಕಲೆ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತವೆ. ಗ್ರಾಮೀಣ ಭಾಗದ ಶಾಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವ ಚಂದ್ರೋದಯ ಸಂಸ್ಥೆಯವರ ಕಾರ್ಯ ಶ್ಲಾಘನೀಯ ಎಂದರು.ಚಂದ್ರೋದಯ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಲತಾ ಮಾತನಾಡಿದರು.
ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ರಂಗಗೀತೆ, ಜಾನಪದ ಗೀತೆ, ಭಾವಗೀತೆ, ತತ್ವಪದಗಳು, ವಚನಗಳನ್ನು ಹಾಡಲಾಯಿತು.ಸರ್ವ ಶಿಕ್ಷಣ ಅಭಿಯಾನದ ನಿರ್ದೇಶಕ ನಾಗರಾಜ್, ಸಹೋದ್ಯೋಗಿ ಶಿವಗಂಗಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಉಷಾ, ಶಿಕ್ಷಕರಾದ ಸುಜಾತಾ, ಚೆನ್ನಕೇಶವ, ನಾಗರಾಜ್, ಜನಪದ ಕಲಾವಿದರಾದ ಗಗನ, ಚನ್ನಬಸಪ್ಪ, ಜಯಣ್ಣ ಮತ್ತಿತರರಿದ್ದರು.