ಹೊನ್ನಾವರದ ಅಪ್ಸರಕೊಂಡ ಸಮುದ್ರತೀರದ ಬಳಿ ಇರುವ ಆಯತನಂ ರೆಸಾರ್ಟ್‌ನಲ್ಲಿ ಬಯಸಿದಾಗೆಲ್ಲ ಮಳೆ

KannadaprabhaNewsNetwork |  
Published : Apr 16, 2025, 12:33 AM IST
ಸ್ಪ್ರಿಂಕ್ಲರ್ ಅಳವಡಿಸಲಾಗಿದೆ  | Kannada Prabha

ಸಾರಾಂಶ

ಹೊನ್ನಾವರದ ಅಪ್ಸರಕೊಂಡ ಸಮುದ್ರತೀರದ ಬಳಿ ಇರುವ ಆಯತನಂ ರೆಸಾರ್ಟ್‌ನಲ್ಲಿ ಬಯಸಿದಾಗೆಲ್ಲ ಮಳೆ

ವಸಂತಕುಮಾರ್ ಕತಗಾಲ

ಕಾರವಾರ: ಕರಾವಳಿಯಲ್ಲಿ ಈಗ ತಡೆಯಲಾರದ ಬಿಸಿಲಿನ ಬೇಗೆ. ಮಳೆಗಾಗಿ ಮುಗಿಲು ನೋಡುತ್ತಾ ಕುಳಿತುಕೊಂಡವರೆಷ್ಟೋ ಜನರು. ಆದರೆ ಇಲ್ಲೊಬ್ಬರು ತಮ್ಮ ರೆಸಾರ್ಟ್‌ ಮೇಲೆ ಸ್ಪ್ರಿಂಕ್ಲರ್ ಅಳವಡಿಸಿ ಕೃತಕ ಮಳೆಯನ್ನೇ ಸುರಿಸುತ್ತಿದ್ದಾರೆ. ರೆಸಾರ್ಟ್‌ ಒಳಗೆ ಕೂಲ್ ಕೂಲ್ ಆಗಿದ್ದು, ಗ್ರಾಹಕರಿಗೆ ಮಳೆಗಾಲದ ಫೀಲ್ ಕೊಡುತ್ತಿದೆ!

ಇದು ಹೊನ್ನಾವರದ ಅಪ್ಸರಕೊಂಡ ಸಮುದ್ರತೀರದ ಬಳಿ ಇರುವ ಆಯತನಂ ರೆಸಾರ್ಟ್. ಇದರ ಮಾಲೀಕ ನಾಗರಾಜ ಯಾಜಿ ರೆಸಾರ್ಟ್‌ನ ಎಲ್ಲ ಕೊಠಡಿಗಳ ಚಾವಣಿ ಮೇಲೂ ಸ್ಪ್ರಿಂಕ್ಲರ್ ಅಳವಡಿಸಿ ಕೃತಕ ಮಳೆ ಸುರಿಸುತ್ತಿದ್ದಾರೆ.

ಪ್ರತಿ ರೂಮ್‌ನಲ್ಲೂ ಎಸಿ ಇದೆ. ಆದರೆ ಎಸಿ ಆನ್ ಮಾಡಿ ರೂಮ್ ಕೂಲ್‌ ಆಗಲು ಕೆಲ ನಿಮಿಷಗಳು ಬೇಕು. ಇಲ್ಲಿ ಕೃತಕ ಮಳೆ ಸುರಿಯುತ್ತಿರುವುದರಿಂದ ರೂಮ್‌ನೊಳಗೆ ಅಡಿ ಇಡುತ್ತಿದ್ದಂತೆ ಹಿತಾನುಭವ ಆಗಲಿದೆ.

ರೂಮ್‌ನಲ್ಲಿರುವ ಗ್ರಾಹಕರು ಬಯಸಿದಾಗೆಲ್ಲ ಇಲ್ಲಿ ಮಳೆ ಬರಲಿದೆ. ಬಿರು ಬೇಸಿಗೆಯಲ್ಲೂ ಸುರಿಯುವ ಮಳೆ, ತೊಟ್ಟಿಕ್ಕುವ ನೀರನ್ನು ನೋಡುತ್ತ ಬಿಸಿ ಬಿಸಿ ಭಜ್ಜಿ, ಬೋಂಡಾ ತಿನ್ನಬಹುದು. ಪಕ್ಕಾ ಮಳೆಗಾಲದ ಅನುಭವ ನಿಮಗಾಗುತ್ತದೆ. ಎಲ್ಲ ಉಪಕರಣಗಳು, ಪಂಪ್ ಇವರ ಬಳಿಯೇ ಇರುವುದರಿಂದ ಕೇವಲ ಪೈಪ್‌ಗಳ ಜೋಡಣೆ ವೆಚ್ಚ ಮಾತ್ರ ಇವರಿಗೆ ತಗುಲಿದೆ. ನೀರಿನ ಲಭ್ಯತೆಯೂ ಚೆನ್ನಾಗಿದೆ. ಕೃತಕ ಮಳೆಯ ನೀರು ಗಾರ್ಡನ್ ಅನ್ನು ಹಸಿರಾಗಿಡುವಲ್ಲಿ ನೆರವಾಗುತ್ತದೆ.

ರೆಸಾರ್ಟ್‌ ಎದುರಿಗೇ ಸ್ವಿಮ್ಮಿಂಗ್ ಫೂಲ್ ಇದೆ. ಈಜಲು ಇಳಿದರೆ ಅಲ್ಲೂ ನೀರಿನ ಸಿಂಚನವಾಗುತ್ತದೆ. ಮಳೆಯಲ್ಲಿ ಈಜಾಡುತ್ತಿರುವಂತೆ ಭಾಸವಾಗುತ್ತದೆ. ಅಚ್ಚರಿಯ ಸಂಗತಿ ಎಂದರೆ ರೆಸಾರ್ಟ್‌ ಚಾವಣಿಯ ಮೇಲೆ ನೀರಿನ ಸ್ಪ್ರೇ ಆಗುತ್ತಿದ್ದಂತೆ ನವಿಲು, ವಿವಿಧ ಪಕ್ಷಿಗಳೂ ಚಾವಣಿ ಏರಿ ನೀರಾಟದಲ್ಲಿ ತೊಡಗುತ್ತವೆ.

ಈ ರೆಸಾರ್ಟ್‌ ಕೂಡ ವಿಶೇಷ ವಿನ್ಯಾಸದಲ್ಲಿ ರೂಪಿಸಿದ್ದು, ಅಪ್ಸರಕೊಂಡ ಹಾಗೂ ಕಾಸರಕೋಡ ಹಿನ್ನೀರಿನಲ್ಲಿ ಬೋಟಿಂಗ್‌ಗೆ ಬರುವ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅಚ್ಚುಮೆಚ್ಚಿನ ತಾಣವಾಗಿದೆ.

ಕೃತಕ ಮಳೆಯಿಂದ ಗ್ರಾಹಕರು ಬಿರು ಬಿಸಿಲಿನಲ್ಲೂ ಮಳೆಗಾಲದ ಫೀಲ್ ಆಗಿ ಖುಷಿಗೊಳ್ಳುತ್ತಿದ್ದಾರೆ. ಇಲ್ಲಿ ಬೇಕು ಅನ್ನಿಸಿದಾಗೆಲ್ಲ ಮಳೆ ಬರುತ್ತದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎನ್ನುತ್ತಾರೆ ಆಯತನಂ ರೆಸಾರ್ಟ್ ಮಾಲೀಕ ನಾಗರಾಜ ಯಾಜಿ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ