ಪರಿಸರಕ್ಕೆ ಮಾರಕವಾದ ವಿದ್ಯುತ್ ಯೋಜನೆ ಕೈಬಿಡಿ

KannadaprabhaNewsNetwork | Published : Mar 9, 2024 1:31 AM

ಸಾರಾಂಶ

ಕರ್ನಾಟಕ ವಿದ್ಯುತ್ ನಿಗಮ ಶರಾವತಿ ಕಣಿವೆಯಲ್ಲಿ ಬೃಹತ್ ಜಾಲ ವಿದ್ಯುತ್ ಯೋಜನೆ ಜಾರಿ ಮಾಡಲು ತಯಾರಿ ನಡೆಸಿದ್ದು, ಪರಿಸರಕ್ಕೆ ಮಾರಕವಾಗಿರುವ ಈ ಯೋಜನೆಯನ್ನು ಕೈಬಿಡಬೇಕು. ಪಶ್ಚಿಮಘಟ್ಟದ ಹೃದಯ ಭಾಗವಾಗಿರುವ ಶರಾವತಿ ಕಣಿವೆಯಲ್ಲಿ ೨೦೦೦ ಮೆ.ವ್ಯಾ. ಸಾಮರ್ಥ್ಯದ ಬೃಹತ್ ಭೂಗತ ಜಲವಿದ್ಯುತ್ ಯೋಜನೆ ಜಾರಿಗೆ ಸರ್ಕಾರ ಮತ್ತು ವಿದ್ಯುತ್ ನಿಗಮ ಮುಂದಾಗಿದೆ. ಈ ಹಿನ್ನೆಲೆ ಪರಿಸರ ರಕ್ಷಣೆ ಮಾಡಬೇಕೆಂದು ವೃಕ್ಷಲಕ್ಷ ಆಂದೋಲನದ ನಿಯೋಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಸಾಗರ ಕರ್ನಾಟಕ ವಿದ್ಯುತ್ ನಿಗಮ ಶರಾವತಿ ಕಣಿವೆಯಲ್ಲಿ ಬೃಹತ್ ಜಾಲ ವಿದ್ಯುತ್ ಯೋಜನೆ ಜಾರಿ ಮಾಡಲು ತಯಾರಿ ನಡೆಸಿದ್ದು, ಪರಿಸರಕ್ಕೆ ಮಾರಕವಾಗಿರುವ ಈ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ವೃಕ್ಷಲಕ್ಷ ಆಂದೋಲನದ ನಿಯೋಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿತು.

ಪಶ್ಚಿಮಘಟ್ಟದ ಹೃದಯ ಭಾಗವಾಗಿರುವ ಶರಾವತಿ ಕಣಿವೆಯಲ್ಲಿ ೨೦೦೦ ಮೆ.ವ್ಯಾ. ಸಾಮರ್ಥ್ಯದ ಬೃಹತ್ ಭೂಗತ ಜಲವಿದ್ಯುತ್ ಯೋಜನೆ ಜಾರಿಗೆ ಸರ್ಕಾರ ಮತ್ತು ವಿದ್ಯುತ್ ನಿಗಮ ಮುಂದಾಗಿದೆ. ಅರಣ್ಯ, ವನ್ಯಜೀವಿ, ಪರಿಸರ ಇಲಾಖೆಗಳ ಪರವಾನಿಗೆ ಪಡೆಯದೇ ಯೋಜನೆ ಜಾರಿಗೆ ಮುಂದಾಗಿರುವುದನ್ನು ಪರಿಸರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಯೋಜನೆಯಿಂದ ಶರಾವತಿ ಅಭಯಾರಣ್ಯಕ್ಕೆ ದೊಡ್ಡಮಟ್ಟದ ಹಾನಿಯುಂಟಾಗಲಿದೆ. ಪೈಪ್‌ಲೈನ್, ರಸ್ತೆ, ಚಾನಲ್, ಸುರಂಗ ಕೊರೆಯುವಿಕೆ, ಬೃಹತ್ ತಂತಿ ಮಾರ್ಗ, ಭೂಗತ ವಿದ್ಯುತ್ ಉತ್ಪಾದನಾ ಕೇಂದ್ರ ಇವುಗಳ ನಿರ್ಮಾಣಕ್ಕೆ ಸಾವಿರಾರು ಎಕರೆ ಅರಣ್ಯ ನಾಶವಾಗಲಿದೆ. ಜೊತೆಗೆ ಎರಡು ಲಕ್ಷಕ್ಕೂ ಹೆಚ್ಚಿನ ಮರಗಳು, ೧೦ ಲಕ್ಷಕ್ಕೂ ಹೆಚ್ಚಿನ ಸಸ್ಯ ಸಂಪತ್ತು ನಾಶವಾಗಲಿದೆ. ಅಪಾರ ವನ್ಯಜೀವಿಗಳು ಅತಂತ್ರವಾಗಲಿದ್ದು, ಸಾಧುವಲ್ಲದ ಯೋಜನೆ ಜಾರಿ ಬೇಡ ಎಂದು ೨೦೧೮ರಲ್ಲಿ ಜೀವವೈವಿಧ್ಯ ತಜ್ಞರು ಸರ್ಕಾರಕ್ಕೆ ಆಗ್ರಹಿಸಿದ್ದಾರೆಂದು ಮನವಿಯಲ್ಲಿ ತಿಳಿಸಲಾಗಿದೆ.

ಯೋಜನೆಯ ಸಮೀಕ್ಷೆಗೆ ೨೦೧೯ರಲ್ಲಿ ವೃಕ್ಷಲಕ್ಷ ಆಂದೋಲನಾ ವಿರೋಧ ವ್ಯಕ್ತಪಡಿಸಿತ್ತು. ಜೀವವೈವಿಧ್ಯ ಮಂಡಳಿ ೨೦೨೦ರ ಜೂ.೫ರಂದು ಮುಖ್ಯಮಂತ್ರಿ ಅವರಿಗೆ ಶರಾವತಿ ಭೂಗತ ಯೋಜನೆ ಕೈಬಿಡಲು ಮನವಿ ಮಾಡಿತ್ತು. ನ್ಯಾಯಾಲಯ ತಡೆ ನೀಡಿದ್ದರಿಂದ ಯೋಜನೆ ಸ್ಥಗಿತವಾಗಿತ್ತು. ಈಗ ಏಕಾಏಕಿ ಯೋಜನೆ ಮುನ್ನೆಲೆಗೆ ತಂದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಯೋಜನೆಯಿಂದ ಕರಾವಳಿ ರೈತರಿಗೆ ಸಿಹಿನೀರು ಸಿಗುವುದಿಲ್ಲ. ಹೊನ್ನಾವರ, ಭಟ್ಕಳ ತಾಲೂಕಿನ ಶರಾವತಿ ಕುಡಿಯುವ ನೀರಿನ ಯೋಜನೆಗಳು ವಿಫಲವಾಗುವ ಸಾಧ್ಯತೆ ಇದೆ. ಪ್ರಸ್ತುತ ಸ್ಥಿತಿಗತಿಯಲ್ಲಿ ಶರಾವತಿ ಕಣಿವೆ ತನ್ನ ಧಾರಣಾ ಸಾಮರ್ಥ್ಯ ಕಳೆದುಕೊಂಡಿರುವುದರಿಂದ ಹೊಸ ವಿದ್ಯುತ್ ಯೋಜನೆಗಳನ್ನು ಇಲ್ಲಿ ಜಾರಿಗೊಳಿಸುವುದು ಸೂಕ್ತವಲ್ಲ. ಭೂಕುಸಿತ ಸಂಭವಿಸುವ ಸಾಧ್ಯತೆಯೂ ಹಿಂದೆ ಕಂಡುಬಂದಿದೆ. ಈ ಹಿನ್ನೆಲೆ ಭೂಮಿ ಅಡಿಯಲ್ಲಿ ಕಾಮಗಾರಿ ನಡೆಸುವ ಶರಾವತಿ ಯೋಜನೆ ಖಂಡಿತಾ ಸಾಧುವಲ್ಲ. ತಕ್ಷಣ ಯೋಜನೆ ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನಿಯೋಗದಲ್ಲಿ ಅನಂತ ಹೆಗಡೆ ಅಶೀಸರ, ಕೆ.ವೆಂಕಟೇಶ್ ಕವಲಕೋಡು, ಅನಂತರಾಮು, ಶ್ರೀಪಾದ ಬಿಚ್ಚುಗತ್ತಿ, ಆನೆಗುಳಿ ಸುಬ್ರಾವ್ ಇನ್ನಿತರರು ಹಾಜರಿದ್ದರು.

- - - -೮ಕೆ.ಎಸ್.ಎ.ಜಿ.೧:

Share this article