- ಅರಣ್ಯ ಇಲಾಖೆ ವಿರುದ್ಧ ಗೌಡಗೊಂಡನಹಳ್ಳಿ ರೈತರ ಪ್ರತಿಭಟನೆಯಲ್ಲಿ ಮಂಜುನಾಥ್ ಆಗ್ರಹ
ತಾಲೂಕಿನ ಗೌಡಗೊಂಡನಹಳ್ಳಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ ರಾಜ್ಯ ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ್ )ಬಣದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಗೌಡಗೊಂಡನಹಳ್ಳಿ ಗ್ರಾಮದಿಂದ ಶನಿವಾರ ಪಾದಯಾತ್ರೆ ಹೊರಟ ಪ್ರತಿಭಟನಾಕಾರರು, ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಅಂಬೇಡ್ಕರ್ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿ ಎದುರು ಮುಖ್ಯ ರಸ್ತೆಯಲ್ಲಿ ಕುಳಿತು ಬೃಹತ್ ಧರಣಿ ನಡೆಸಿದರು. ಅನಂತರ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಗೌಡಗೊಂಡನಹಳ್ಳಿ ಸಮೀಪದಲ್ಲಿನ 83.62 ವಿಸ್ತೀರ್ಣ ಪ್ರದೇಶದ ಪೈಕಿ 11.40 ಹೆಕ್ಟೇರ್ ಪ್ರದೇಶದಲ್ಲಿ 18 ಜನ ಪರಿಶಿಷ್ಟ ಪಂಗಡ, 2 ಜನ ಒಬಿಸಿ ಜನಾಂಗದವರಿಂದ ಒತ್ತುವರಿ ಕುರಿತು ಅರಣ್ಯ ಅಧಿಕಾರಿಗಳು ತೆರವುಗೊಳಿಸಲು ಹೊರಟಿರುವುದು ಕಾನೂನು ಉಲ್ಲಂಘನೆಯಾಗಿದೆ. ಈ ಕುರಿತು ಪಿಸಿಎಫ್ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ರೈತಪರ ಇತ್ಯರ್ಥವಾಗುವ ಅಗತ್ಯ ಸಾಕ್ಷ್ಯಾಧಾರಗಳನ್ನು ಸಲ್ಲಿಸಲಾಗಿದೆ ಎಂದರು.
ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮನವಿ ಸ್ವೀಕರಿಸಿದರು. ಅರಣ್ಯ ಅಧಿಕಾರಿ ಶ್ರೀನಿವಾಸ್, ರೈತ ಸಂಘಟನೆ ಮುಖಂಡರಾದ ಆಲೂರು ಪರುಶರಾಮ್ ಎಲೋದಹಳ್ಳಿ ರವಿ, ಗಂಡುಗಲಿ, ದೇವರಮನಿ ಮಹೇಶ್, ಚಿರಂಜೀವಿ ಸಿಎಂ ಹೊಳೆ, ರಾಜು ರಾಜನಹಟ್ಟಿ, ಗೌಡಗೊಂಡನಹಳ್ಳಿ ಸತೀಶ್, ಲೋಕೇಶ್, ಕಾನನಕಟ್ಟೆ ತಿಪ್ಪೇಸ್ವಾಮಿ, ಮಾರಪ್ಪ, ನೂರಾರು ರೈತರು ಭಾಗವಹಿಸಿದ್ದರು.
- - - -20ಜೆ.ಜಿ.ಎಲ್3:ಜಗಳೂರು ತಾಲೂಕಿನ ಗೌಡಗೊಂಡನಹಳ್ಳಿ ರೈತರು ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.